ಕರ್ನಾಟಕದ ಸಾಂಸ್ಕೃತಿಕ ಚಿಂತನೆ ವಿವರಿಸಿದ ವೆಂಕಯ್ಯ ನಾಯ್ಡು
ಬೆಂಗಳೂರು ಜುಲೈ 10: "ಜ್ಞಾನದ ತಪೋಭೂಮಿಯಾಗಿರುವ ಕರ್ನಾಟಕದ ಸಾಂಸ್ಕೃತಿಕ ಚಿಂತನೆಗಳಲ್ಲಿ ಆದಿಗುರು ಶಂಕರಾಚಾರ್ಯರು, ರಾಮನುಜಚಾರ್ಯರು ಮತ್ತು ಮದ್ವಾಚಾರ್ಯರ ಪ್ರಭಾವ ಕಾಣಸಿಗುತ್ತದೆ" ಎಂದು ಉಪ ರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ತಿಳಿಸಿದರು.
ಬೆಂಗಳೂರು ನಗರದಲ್ಲಿ ಶನಿವಾರ ನಡೆದ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಒಂಭತ್ತನೆಯ ದೀಕ್ಷಾಂತ ಘಟಿಕೋತ್ಸವ ಹಾಗೂ ದಶಮಾನೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. "ಈ ನೆಲದಲ್ಲಿ ಆದಿಗುರುಗಳ ಜೊತೆಗೆ ಶರಣರಾದ ಬಸವಣ್ಣ, ಅಲ್ಲಮ ಪ್ರಭುಗಳ ಸಾಮಾಜಿಕ ಪ್ರಜ್ಞೆ ಜಾಗೃತಗೊಳಿಸಿದ್ದಾರೆ. ನಾಲ್ವಡಿ ಕೃಷ್ಣರಾಜ ಒಡೆಯರ್‌ರವರಂತಹ ಅಪ್ರತಿಮ ಜನಸ್ನೇಹಿ ಆಡಳಿತಗಾರರು ಈ ನಾಡಿನ ಹೆಮ್ಮೆ" ಎಂದು ಅವರು ಹೇಳಿದರು.
"ಭಾರತದ ನಾಡಿಮಿಡಿತವನ್ನು ಅರ್ಥ ಮಾಡಿಕೊಳ್ಳಲು ಸಂಸ್ಕೃತದ ಅರಿವು ಅಗತ್ಯ ಹಲವು ಭಾಷೆಗಳ ತಾಯಿ ಎನಿಸಿರುವ ಸಂಸ್ಕೃತ ದೇಶದ ಆತ್ಮವೇ ಆಗಿದೆ. ಮಹತ್ವದ ಕಾವ್ಯಗಳು, ಶಾಸನಗಳು ಸಂಸ್ಕೃತದಲ್ಲಿ ರಚಿತವಾಗಿದ್ದು ಯೋಗ, ತತ್ವಶಾಸ್ತ್ರ, ವಿಜ್ಞಾನ, ಪುರಾಣಗಳು ಸೇರಿದಂತೆ ವಿವಿಧ ವಿಚಾರಗಳ ಜ್ಞಾನ ಪರಂಪರೆ ಈ ಭಾಷೆಯ ಮೂಲಕ ಬೆಳೆದಿದೆ. ಇಂತಹ ಭಾಷೆಯ ಅಧ್ಯಯನದಲ್ಲಿ ತೊಡಗಿರುವ ಎಲ್ಲ ವಿದ್ಯಾರ್ಥಿಗಳು ಅಭಿನಂದನಾರ್ಹರು" ಎಂದು ಸಂಸ್ಕೃತಿ, ಭಾಷೆಯ ಮಹತ್ವ ಸಾರಿದರು.

ವಿವಿಧ ಭಾಷೆಗಳಲ್ಲಿ ಸಂಸ್ಕೃತದ ಪ್ರಭಾವ
"ಬಹುಭಾಷೆಯ ನೆಲವಾಗಿರುವ ಭಾರತವು ಭಾಷಾ ವೈವಿಧ್ಯತೆಯಲ್ಲಿ ಅತ್ಯಂತ ವಿಶೇಷತೆ ಹೊಂದಿದೆ. ಪಾರಂಪರಿಕ ಭಾಷೆಗಳಲ್ಲಿ ಒಂದಾಗಿರುವ ಸಂಸ್ಕೃತದ ಪ್ರಭಾವ ಭಾರತದ ಹಲವು ಭಾಷೆಗಳಲ್ಲಿ ಎದ್ದು ಕಾಣುತ್ತದೆ. ದೇಶದಲ್ಲಿ ಆರು ಭಾಷೆಗಳಿಗೆ ಶಾಸ್ತ್ರೀಯ ಸ್ಥಾನಮಾನ ಲಭಿಸಿದ್ದರ ಪೈಕಿ ಅದರಲ್ಲಿ ಸಂಸ್ಕೃತ ಅಗ್ರಗಣ್ಯ ಸ್ಥಾನದಲ್ಲಿದೆ" ಎಂದು ವೆಂಕಯ್ಯ ನಾಯ್ಡು ಹೇಳಿದರು.

ಜಾತಿ, ಧರ್ಮ ಮೀರಿ ಸಂಸ್ಕೃತ ಕಲಿಬಹುದು
"ಅಭಿಜಾತ ಪರಂಪರೆಯನ್ನು ಹೊಂದಿರುವ ಈ ಸಂಸ್ಕೃತ ಭಾಷೆಯ ಕುರಿತು ನಿರಂತರ ಸಂಶೋಧನೆಗಳು ನಡೆಯುತ್ತಿರುವುದು ವಿಶೇಷವಾಗಿದೆ. ಜಾತಿ, ಧರ್ಮ, ಮತಗಳನ್ನು ಮೀರಿ ನಾವೆಲ್ಲರು ಭಾರತೀಯರಾಗಿದ್ದು ಸಂಸ್ಕೃತದ ಅಧ್ಯಯನದಲ್ಲಿ ತೊಡಗಬಹುದಾಗಿದೆ" ಎಂದು ಉಪರಾಷ್ಟ್ರಪತಿಗಳು ಅಭಿಪ್ರಾಯಪಟ್ಟರು.

ಸಂಸ್ಕೃತ ಪ್ರಸಾರ ಕಾರ್ಯ ಶ್ಲಾಘನೀಯ
ಇದೇ ಸಂದರ್ಭದಲ್ಲಿ ರಾಜ್ಯಪಾಲ ಹಾಗೂ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಥಾವರ್ ಚಂದ್ ಗೆಹ್ಲೋಟ್ ಮಾತನಾಡಿ, "ಸಂಸ್ಕೃತ ಭಾಷೆ ದೇಶದ ಪ್ರಾಚೀನ ಭಾಷೆಗಳಲ್ಲಿ ಒಂದಾಗಿದ್ದು, ಹೆಚ್ಚು ಮಹತ್ವ ಪಡೆದುಕೊಂಡಿದೆ. ಹಲವು ಭಾಷೆಗಳನ್ನು ಪ್ರಭಾವಿಸಿರುವ ಈ ಅಭಿಜಾತ ಸಂಸ್ಕೃತ ಭಾಷೆಯ ಪ್ರಚಾರವನ್ನು ಮಾಡುತ್ತಿರುವ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕಾರ್ಯ ಶ್ಲಾಘನೀಯವಾದದ್ದು" ಎಂದರು.

ವಿದ್ವಾಂಸರಿಗೆ, ವಿದ್ಯಾರ್ಥಿಗಳಿಗೆ ಪದವಿ ಪ್ರದಾನ
ಈ ಘಟಿಕೋತ್ಸವದಲ್ಲಿ ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರು ಹಿರಿಯ ವಿದ್ವಾಂಸರುಗಳಾದ ಆಚಾರ್ಯ ಪ್ರದ್ಯುಮ್ನ, ವಿದ್ವಾನ್ ಉಮಾಕಾಂತ ಭಟ್, ಡಾ. ವಿ. ಇಂದಿರಮ್ಮ ಅವರಿಗೆ 'ಗೌರವ ಡಿ.ಲಿಟ್' ಪದವಿ ಪ್ರದಾನ ಮಾಡಿದರು.
ನಂತರ 2020-2021 ಸಾಲಿನ 203 ವಿದ್ಯಾರ್ಥಿಗಳಿಗೆ ಬಿ.ಎ ಪದವಿ, 280 ಸ್ನಾತಕೋತ್ತರ ಪದವಿ, 2 ಅಭ್ಯರ್ಥಿಗಳಿಗೆ ಮಾಸ್ಟರ್ ಆಫ್ ಫಿಲಾಸಪಿ ಮತ್ತು ಪಿಎಚ್ ಡಿ ಪದವಿಯನ್ನು 13 ವಿದ್ಯಾರ್ಥಿಗಳಿಗೆ ಪ್ರದಾನ ಮಾಡಲಾಯಿತು. ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ವಿತರಿಸಲಾಯಿತು.












Click it and Unblock the Notifications