Post Service: ಬೆಂಗಳೂರಿನಲ್ಲಿ ಮನೆ ಬಾಗಿಲಿಗೆ ಅಂಚೆ ಸೇವೆ ವಿಸ್ತರಣೆ, ವಿವರ
ಬೆಂಗಳೂರು, ಜೂನ್ 16: ದೇಶದ ಗ್ರಾಹಕರಿಗೆ ಉತ್ತಮ ಸೇವೆ ಒದಗಿಸುವ ಸಲುವಾಗಿ ಭಾರತೀಯ ಅಂಚೆ ಇಲಾಖೆ ತನ್ನ ಸೇವೆಯನ್ನು ಮತ್ತು ಸರಳಗೊಳಿಸಿ ಮನೆ ಬಾಗಿಲಿಗೆ ಎಟುಕುವಂತೆ ಮಾಡುವ ಯೋಜನೆ ಈಗಾಗಲೇ ರೂಪಿಸಿದೆ. ಬೆಂಗಳೂರು ಸೇರಿದಂತೆ ದೇಶದ ವಿವಿಧ ರಾಜ್ಯ, ಪಟ್ಟಣಗಳಲ್ಲಿ ಮನೆ ಬಾಗಿಲಿಗೆ ಅಂಚೆ ಸೇವೆ ಲಭ್ಯವಾಗುವ ಕಾಲ ಸನೀಹದಲ್ಲಿದೆ.
ಕರ್ನಾಟಕ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪಶ್ಚಿಮ ಅಂಚೆ ವಿಭಾಗವು ಪ್ರಾಯೋಗಿಕವಾಗಿ ಆರಂಭಿಸಿರುವ ಡೋರ್ ಸ್ಟೆಪ್ ಸರ್ವೀಸ್ (ಪಾರ್ಸೆಲ್ ಆನ್ ವ್ಹೀಲ್) ಯೋಜನೆಗೆ ಭರ್ಜರಿ ಸ್ಪಂದನೆ ಸಿಕ್ಕಿದೆ. ಅಂಚೆ ಇಲಾಖೆ ಬೆಂಗಳೂರಿನಲ್ಲಿ ಕಳೆದ ಜೂನ್ 6 ರಂದು ಪೀಣ್ಯ ಮತ್ತು ಅಬ್ಬಿಗೆರೆ ಇಂಡಸ್ಟ್ರೀಯಲ್ ಪ್ರದೇಶದಲ್ಲಿ ಮನೆ ಬಾಗಿಲಿಗೆ ಸೇವೆ ಆರಂಭಿಸಿತ್ತು.

ಈ ಸೇವೆಗೆ ಭರಪೂರ ಸ್ಪಂದನೆ ವ್ಯಕ್ತಿವಾಗಿದೆ. ಈ ಕಾರಣದಿಂದಲೇ ಪಾರ್ಸೆಲ್ ಆನ್ ವ್ಹೀಲ್ ಅಂಚೆ ಸೇವೆಯನ್ನು ಇನ್ನಷ್ಟು ಪ್ರದೇಶಗಳಿಗೆ ವಿಸ್ತರಣೆ ಮಾಡಲು ಅಂಚೆ ಇಲಾಖೆ ನಿರ್ಧರಿಸಿದೆ. ಕೇವಲ ಬೆಂಗಳೂರಿನಲ್ಲಿ ಮಾತ್ರವಲ್ಲದೇ ದೇಶದ ವಿವಿಧೆಡೆ ಇಂತದ್ದೇ ಪ್ರಯತ್ನಗಳು ನಡೆಯುತ್ತಿವೆ. ಈ ಯೋಜನೆಗೆ ಇಲಾಖೆ ಈ ಹಿಂದೆಯೇ ಚಾಲನೆ ನೀಡಿತ್ತು.
ಅದೇ ಮೊತ್ತದಲ್ಲಿ ನಿಮ್ಮ ಮನೆ ಬಾಗಿಲಿಗೆ ಸೇವೆ
ಕೈಗಾರಿಕೆಗಳಿಗೆ, ಮನೆಬಾಗಿಲಿಯೇ ಬಂದು ಪಾರ್ಸೆಲ್ ಗಳನ್ನು ಸಂಗ್ರಹಿಸಲಾಗುತ್ತದೆ. ಆದರೆ ಇದಕ್ಕೆ ಹೆಚ್ಚಿನ ಹಣ ವಿಧಿಸುತ್ತಿಲ್ಲ. ಗ್ರಾಹಕರು ಅಂಚೆಗೆ ತೆರಳಿ ಹೇಗೆ ಇಂತಿಷ್ಟು ಹಣ ನೀಡಿ ಕಳಹಿಸುತ್ತಾರೊ, ಅಷ್ಟೇ ಮೊತ್ತದಲ್ಲಿ ಈ ಸೇವೆಯನ್ನು ನೀವಿರುವಲ್ಲಿಗೆ ಲಭ್ಯವಾಗುವಂತೆ ಇಲಾಖೆ ಮಾಡುತ್ತಿದೆ.
ರಜಾದಿನಗಳನ್ನು ಹೊರತುಪಡಿಸಿದರೆ ಉಳಿದೆಲ್ಲ ದಿನಗಳಲ್ಲಿ ಹೆಚ್ಚಿನ ಪಾರ್ಸೆಲ್/ಸರಕುಗಳ ಸೇವೆಯನ್ನು ಮನೆಬಾಗಿಲಿಗೆ ಬಂದು ಸಂಗ್ರಹಿಸುವ, ನಿರ್ದಿಷ್ಟ ಸ್ಥಳಕ್ಕೆ ತಲುಪಿಸುವ ಕೆಲಸ ಈ ಯೋಜನೆಯಿಂದಾಗುತ್ತಿದೆ. ಇದಕ್ಕೆಂದು ನಿಮ್ಮ ಬಳಿ ಅಂಚೆ ಇಲಾಖೆ ನಿಗದಿಪಡಿಸಿದ ವಾಹನ ಬರಲಿದೆ.

ಸೇವೆ ವಿಸ್ತರಣೆ: ಒಂದೇ ದಿನ 80,000ಕ್ಕೂ ಅಧಿಕ ಆದಾಯ
ಆರಂಭಿಕ ಹಂತದಲ್ಲಿ ಬೆಂಗಳೂರಿನ ಪೀಣ್ಯ ಮತ್ತು ಅಬ್ಬಿಗೆರೆ ಇಂಡಸ್ಟ್ರೀಯಲ್ ಪ್ರದೇಶಗಳಲ್ಲಿ ಈ ಪ್ರಯತ್ನಗಳನ್ನು ನಡೆಸಲಾಗಿದೆ. ಒಂದೇ ದಿನ ಕೈಗಾರಿಕೆಯಿಂದ 675ಕ್ಕೂ ಹೆಚ್ಚು ಸರಕು ಸೇರಿ ಪ್ರಾಯೋಗಿಕ ಸೇವೆಯಲ್ಲಿ ಒಟ್ಟು 950ಕ್ಕೂ ಸರಕುಗಳ ಸಾಗಿಸಲಾಗಿದೆ. ಇದರಿಂದ ಸುಮಾರು 80,000ಕ್ಕೂ ಅಧಿಕ ಆದಾಯ ಸಂಗ್ರಹವಾಗಿದೆ ಎಂದು ಪಶ್ಚಿಮ ವಿಭಾಗದ ಅಂಚೆ ಇಲಾಖೆ ತಿಳಿಸಿದೆ ಎಂದು ಕನ್ನಡಪ್ರಭ ವರದಿ ಮಾಡಿದೆ.
ದೇಶದಲ್ಲಿ ಅಂಚೆ ಕಚೇರಿಯಲ್ಲಿ ಮತ್ತಷ್ಟು ಸಾಧಾರಣೆಯ ಯೋಜನೆಗಳು ರೂಪುಗೊಂಡಿವೆ. ಇದೀಗ ಅಂಚೆ ಕಚೇರಿಗಳಲ್ಲಿ ಸಿಗುವ ಸರ್ಕಾರಿ ಸೌಲಭ್ಯಗಳನ್ನು ಜನರ ಬಳಿಗೇ ಕೊಂಡೊಯ್ಯುಲಾಗುತ್ತಿದೆ. ಈ ಸೇವೆಗಾಗಿ ದೇಶದಲ್ಲಿ ಈಗಾಗಲೇ ಇದೇ ವರ್ಷ 10,000 ಅಂಚೆ ಕಚೇರಿಗಳನ್ನು ತೆರೆಯಲಾಗುವುದು ಎಂದು ಭಾರತೀಯ ಅಂಚೆ ಇಲಾಖೆ ಕಾರ್ಯದರ್ಶಿ ಅಮನ್ ಶರ್ಮಾ ಈ ಹಿಂದೆ ವಿವರಿಸಿದ್ದರು.
ಇನ್ನೊಂದು ವಾರದಲ್ಲಿ ಬೆಂಗಳೂರಿನಲ್ಲಿ ವಿವಿಧೆಡೆ ಮನೆ ಬಾಗಿಲಿಗೆ ಅಂಚೆ ಸೇವೆಯನ್ನು ಪಶ್ಚಿಮ ವಿಭಾಗ ವಿಸ್ತರಣೆ ಮಾಡಲಿದೆ. ಬೆಂಗಳೂರಿನ ಮಧ್ಯಭಾಗವಾದ ಮಹಾತ್ಮ ಗಾಂಧಿ ರಸ್ತೆ (MG Road), ಮಣಿಪಾಲ್ ಸೆಂಟರ್ ಬಳಿ ಅಂಚೆ ಪಾರ್ಸೆಲ್ ಒಯ್ಯುವ ಇನ್ನೋಂದು ವಾಹನ ರಸ್ತೆಗಿಳಿಸಲು ಇಲಾಖೆ ಸಿದ್ಧತೆ ನಡೆದಿದೆ. ಅಂತೆಯೇ ಮಹಾದೇವಪುರದಲ್ಲಿ ಸಹ ಅಂಚೆ ಸೇವೆ ವಿಸ್ತರಣೆ ಆಗಲಿದೆ.












Click it and Unblock the Notifications