ಮೊದಲ ಬಾರಿಗೆ ಭಾರತದಲ್ಲಿ ವಿಶ್ವ ಕಾಫಿ ಸಮ್ಮೇಳನ: ಬೆಂಗಳೂರಿನಲ್ಲಿ ಕಾಫಿಯ ಘಮ
ವಿಶ್ವ ಕಾಫಿ ಸಮ್ಮೇಳನ 2023ರ ಸೆಪ್ಟಂಬರ್ 25 ರಿಂದ 28ರ ವರೆಗೆ ನಡೆಯಲಿದ್ದು ಇದೇ ಮೊದಲ ಬಾರಿಗೆ ಭಾರತ ಆತಿಥ್ಯ ವಹಿಸುತ್ತಿದೆ. ಅದರಲ್ಲೂ ಭಾರತದಲ್ಲಿ ಅತಿ ಹೆಚ್ಚು ಕಾಫಿ ಬೆಳೆಯುವ ಕರ್ನಾಟಕದಲ್ಲಿ ನಡೆಯಲಿದೆ ಎನ್ನುವುದು ವಿಶೇಷ. ಹೌದು, ವಿಶ್ವ ಕಾಫಿ ಸಮ್ಮೇಳನದ ಐದನೇ ಆವೃತ್ತಿಗೆ ಬೆಂಗಳೂರು ಆತಿಥ್ಯ ವಹಿಸಲಿದೆ.
ಇಂಟರ್‌ನ್ಯಾಷನಲ್ ಕಾಫಿ ಸಂಸ್ಥೆ, ಕಾಫಿ ವ್ಯಾಪಾರವನ್ನು ಉತ್ತೇಜಿಸಲು ಮತ್ತು ಕಾಫಿ ಉತ್ಪಾದನೆ ಮಾಡುವ ಮತ್ತು ಅತಿ ಹೆಚ್ಚು ಬಳಸುವ ರಾಷ್ಟ್ರಗಳ ನಡುವೆ ಸಹಕಾರ ಹೆಚ್ಚಿಸಲು ಮೀಸಲಾಗಿರುವ ಪ್ರಾಥಮಿಕ ಅಂತರ ಸರ್ಕಾರಿ ಸಂಸ್ಥೆಯಾಗಿದೆ.

ಸೋಮವಾರ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾರ್ಯಕ್ರಮದ ಲೋಗೋ ಮತ್ತು ಥೀಮ್ ಅನ್ನು ಅನಾವರಣಗೊಳಿಸಲಾಯಿತು. 80 ಕ್ಕೂ ಹೆಚ್ಚು ದೇಶಗಳ ಉತ್ಪಾದಕರು, ಕ್ಯೂರ್‌ಗಳು, ರೋಸ್ಟರ್‌ಗಳು, ರಫ್ತುದಾರರು, ನೀತಿ ನಿರೂಪಕರು ಮತ್ತು ಸಂಶೋಧಕರು ಈ ಸಮ್ಮೇಳನದಲ್ಲಿ ಭಾಗವಹಿಸುತ್ತಾರೆ ಎಂದು ಹೇಳಲಾಗಿದೆ.
ರೋಹನ್ ಬೋಪಣ್ಣ ಬ್ರಾಂಡ್ ಅಂಬಾಸಿಡರ್
ಕರ್ನಾಟಕದ ಖ್ಯಾತ ಟೆನಿಸ್ ಆಟಗಾರ ರೋಹನ್ ಬೋಪಣ್ಣ ಅವರು ಕಾರ್ಯಕ್ರಮದ ಬ್ರಾಂಡ್ ಅಂಬಾಸಿಡರ್ ಆಗಿರುತ್ತಾರೆ ಎಂದು ಕಾಫಿ ಬೋರ್ಡ್ ಆಫ್ ಇಂಡಿಯಾ ಸಿಇಒ ಮತ್ತು ಕಾರ್ಯದರ್ಶಿ ಕೆ.ಜಿ. ಜಗದೀಶ ಘೋಷಿಸಿದರು. ಐಸಿಒ ಭಾರತದ ಕಾಫಿ ಮಂಡಳಿಯ ಸಹಯೋಗದೊಂದಿಗೆ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ.
"ವೃತ್ತಾತ್ಮಕ ಆರ್ಥಿಕತೆ ಮತ್ತು ಪುನರುತ್ಪಾದಕ ಕೃಷಿಯ ಮೂಲಕ ಸುಸ್ಥಿರತೆ" ಎನ್ನುವುದು ಈ ಕಾರ್ಯಕ್ರಮದ ಘೋಷವಾಕ್ಯವಾಗಿದೆ. ಸಮ್ಮೇಳನದಲ್ಲಿ ಕಾಫಿ ಮತ್ತು ಅದರ ಉತ್ಪಾದನೆಗೆ ಸಂಬಂಧಪಟ್ಟಂತೆ ವಿಚಾರ ಸಂಕಿರಣಗಳು ನಡೆಯಲಿವೆ. ಸಮ್ಮೇಳನದ ಮೊದಲ ದಿನ ಪುನರುತ್ಪಾದಕ ಕೃಷಿ, ಹಣಕಾಸು ಕಾರ್ಯವಿಧಾನ ಮತ್ತು ಕಾಫಿ ವಲಯಕ್ಕೆ ಅವಕಾಶಗಳು, ಕಾಫಿ ಗುಣಮಟ್ಟ ಮತ್ತು ವಿಶೇಷ ಕಾಫಿಗಳು, ಸ್ಟಾರ್ಟ್-ಅಪ್‌ಗಳು ಮತ್ತು ಕಾಫಿ ಮೌಲ್ಯ ಸರಪಳಿಯಲ್ಲಿನ ಆವಿಷ್ಕಾರಗಳ ಬಗ್ಗೆ ವಿಚಾರಗೋಷ್ಠಿಗಳು ನಡೆಯಲಿವೆ.
ಭಾರತದ ಕಾಫಿ ಬೆಳೆಗಾರರಿಗೆ ಪ್ರಯೋಜನ
ಕೃಷಿ, ಹಣಕಾಸು ವ್ಯವಸ್ಥೆ ಮತ್ತು ಕಾಫಿ ವಲಯಕ್ಕೆ ಅವಕಾಶಗಳು, ಕಾಫಿ ಗುಣಮಟ್ಟ ಮತ್ತು ವಿಶೇಷ ಕಾಫಿಗಳು ವಿಚಾರಗಳ ಬಗ್ಗೆ ಎರಡನೇ ದಿನ ಚರ್ಚೆ ನಡೆಸಲಾಗುತ್ತದೆ. ಏಷ್ಯಾದಲ್ಲೇ ಮೊದಲ ಬಾರಿ ವಿಶ್ವ ಕಾಫಿ ಸಮ್ಮೇಳನವನ್ನು ಆಯೋಜಿಸಲಾಗುತ್ತಿದೆ. ಈ ಸಮ್ಮೇಳನದಿಂದ ಭಾರತದಲ್ಲಿ ಕಾಫಿ ಬೆಳೆಯುವ ರೈತರಿಗೆ ಹಲವು ಪ್ರಯೋಜನಗಳು ದೊರೆಯಲಿವೆ ಎಂದು ನಿರೀಕ್ಷಿಸಲಾಗಿದೆ.
ಭಾರತದ ಕಾಫಿಯನ್ನು ಜಾಗತಿಕ ವೇದಿಕೆಯಲ್ಲಿ ಪ್ರಚಾರ ಮಾಡುವ ಮೂಲಕ, ಈ ಕಾರ್ಯಕ್ರಮವು ರೈತರಿಗೆ ಹೊಸ ಅವಕಾಶಗಳು ಮತ್ತು ಮಾರುಕಟ್ಟೆಗಳನ್ನು ಸೃಷ್ಟಿಸುತ್ತದೆ ಎಂದು ಕಾಫಿ ಬೋರ್ಡ್ ಆಫ್ ಇಂಡಿಯಾ ಸಿಇಒ ಜಗದೀಶ್ ಹೇಳಿದ್ದಾರೆ.
ವಿಶ್ವ ಕಾಫಿ ಕಾನ್ಫರೆನ್ಸ್ ವೆಬ್‌ಸೈಟ್‌ನಲ್ಲಿ ಐದನೇ ವಿಶ್ವ ಕಾಫಿ ಸಮ್ಮೇಳನದ ಮ್ಯಾಸ್ಕಾಟ್ ಅನ್ನು ಬಿಡುಗಡೆ ಮಾಡಲಾಗಿದ್ದು ಕಾಫಿ ಸ್ವಾಮಿ ಎಂದು ಹೆಸರಿಡಲಾಗಿದೆ. ಮ್ಯಾಸ್ಕಾಟ್ ಭಾರತೀಯ ಸಂಪ್ರದಾಯವನ್ನು ಬಿಂಬಿಸುತ್ತದೆ. ದಕ್ಷಿಣ ಭಾರತ ಅದರಲ್ಲೂ ಕರ್ನಾಟಕ ಪ್ರಮುಖವಾಗಿ ಕಾಫಿ ಉತ್ಪಾದನೆ ಮಾಡುತ್ತದೆ ಎನ್ನುವುದು ಗಮನಾರ್ಹ ಅಂಶ.
ವಿಶ್ವ ಕಾಫಿ ಸಮ್ಮೇಳನನದ ಹಿಂದಿನ ಆವೃತ್ತಿಗಳು ಇಂಗ್ಲೆಂಡ್ (2001), ಬ್ರೆಜಿಲ್ (2005), ಗ್ವಾಟೆಮಾಲಾ (2010) ಮತ್ತು ಇಥಿಯೋಪಿಯಾ (2016) ದಲ್ಲಿ ನಡೆದಿದ್ದವು.












Click it and Unblock the Notifications