ರಾಮಮಂದಿರ ನಿರ್ಮಾಣ ಪೂರ್ಣಗೊಳ್ಳದಿದ್ದರೂ ಚುನಾವಣೆಗಾಗಿ ಉದ್ಘಾಟನೆ: ಜಿ.ಪರಮೇಶ್ವರ
ಬೆಂಗಳೂರು, ಜನವರಿ 11: ಅಯೋಧ್ಯೆಯಲ್ಲಿನ ಶ್ರೀರಾಮ ಮಂದಿರದ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿಲ್ಲ. ಚುನಾವಣಾ ದೃಷ್ಟಿಯಿಂದ ತರಾತುರಿಯಲ್ಲಿ ಉದ್ಘಾಟನೆಗೆ ಮುಂದಾಗಿದ್ದಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು.
ಗುರುವಾರ ಬೆಂಗಳೂರಿನ ಸದಾಶಿವನಗರದ ತಮ್ಮ ನಿವಾಸದ ಬಳಿ ಗುರುವಾರ ಬೆಳಗ್ಗೆ ಮಾಧ್ಯಮದವರ ಜತೆಗೆ ಮಾತನಾಡಿದ ಅವರು, ಅಯೋಧ್ಯೆಯಲ್ಲಿನ ಶ್ರೀರಾಮ ಮಂದಿರ ಉದ್ಘಾಟನೆಗೆ ಹೋಗದಿರಲು ಕಾಂಗ್ರೆಸ್ ವರಿಷ್ಠರು ತೀರ್ಮಾನಿಸಿರುವ ಕುರಿತು ಪ್ರತಿಕ್ರಿಯಿಸಿದರು.

ಚುನಾವಣಾ ದೃಷ್ಟಿಯಿಂದ ರಾಮಮಂದಿರ ಉದ್ಘಾಟನೆಗೆ ಬಿಜೆಪಿ ಸಜ್ಜಾಗಿದೆ. ಈ ಹಿನ್ನೆಲೆಯಲ್ಲಿ ಪಕ್ಷದ ಹೈಕಮಾಂಡ್, ಉದ್ಘಾಟನೆಗೆ ಹೋಗದಿರಲು ನಿರ್ಧರಿಸಿದೆ. ಪಕ್ಷ ಹೇಳಿದಹಾಗೇ ಕೇಳಬೇಕು. ಕೆಲವು ನಾಯಕರು ವೈಯಕ್ತಿಕವಾಗಿ ಹೇಳಿಕೆ ಕೊಡುತ್ತಿದ್ದಾರೆ. ನನ್ನ ಅಭಿಪ್ರಾಯವನ್ನು ಹೈಕಮಾಂಡ್‌ಗೆ ತಿಳಿಸುತ್ತೇನೆ. ತೀರ್ಮಾನ ಅವರಿಗೆ ಬಿಟ್ಟದ್ದು ಎಂದು ಹೇಳಿದರು.
ನೈತಿಕ ಪೊಲೀಸ್‌ಗಿರಿ ಸಹಿಸಲ್ಲ
ನೈತಿಕ ಪೊಲೀಸ್‌ಗಿರಿಯನ್ನು ಸರ್ಕಾರ ಸಹಿಸುವುದಿಲ್ಲ. ಅಂತಹ ಘಟನೆಗಳನ್ನು ಹತ್ತಿಕ್ಕಲಾಗುವುದು.ಎಲ್ಲಿಯೇ ನೈತಿಕ ಪೊಲೀಸ್‌ಗಿರಿಯ ಘಟನೆಗಳು ಜರುಗಿದರು ಕಾನೂನು ರೀತ್ಯ ಕ್ರಮ ಜರುಗಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಕಾನೂನು ಕೈಗೆತ್ತಿಕೊಳ್ಳುವರು ಯಾರೇ ಆಗಿದ್ದರು ಕಾನೂನು ಕ್ರಮ ಜರುಗಿಸಲಾಗುವುದು. ಈ ಬಗ್ಗೆ ಇಲಾಖೆಯ ಅಧಿಕಾರಿಗಳಿಗೆ ಕೆಲವು ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲಾಗಿದೆ. ಅಂತಹ ತಪ್ಪಿತಸ್ಥರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಎಚ್ಚರಿಸಿದರು.

ಮುಂಬರಲಿರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜವಾಬ್ದಾರಿ ತೆಗೆದುಕೊಳ್ಳಬೇಕಿದೆ. ಹೆಚ್ಚು ಸ್ಥಾನಗಳನ್ನು ಗೆಲ್ಲಿಸಬೇಕು ಎಂದು ಈಗಾಗಲೇ ಹೈಕಮಾಂಡ್ ಹೇಳಿದೆ. ದೆಹಲಿಯ ಸಭೆಯಲ್ಲಿ ಏನೆಲ್ಲ ನಿರ್ದೇಶನ ನೀಡುತ್ತಾರೋ ನೋಡಬೇಕು. ಹೈಕಮಾಂಡ್ ವಹಿಸುವ ಎಲ್ಲ ಜವಾಬ್ದಾರಿಗಳನ್ನು ಹೊತ್ತು ಕೆಲಸ ಮಾಡುತ್ತೇವೆ ಎಂದರು.
ಡಿಸಿಎಂ ಹುದ್ದೆ ಬಗ್ಗೆ ಎನಂದ್ರು ಗೃಹ ಸಚಿವರು?
ಹೆಚ್ಚುವರಿ ಉಪಮುಖ್ಯಮಂತ್ರಿ ನೇಮಕ ವಿಚಾರ ಸಭೆಯಲ್ಲಿ ಪ್ರಸ್ತಾಪಿಸುವುದಿಲ್ಲ. ಕೆ.ಎನ್.ರಾಜಣ್ಣ ಅವರು ಸರ್ಕಾರ ರಚನೆಯಾದ ಆರಂಭದಿಂದಲೂ ಹೆಚ್ಚುವರಿ ಉಪಮುಖ್ಯಮಂತ್ರಿ ನೇಮಕದ ಕುರಿತು ಹೇಳಿಕೆ ನೀಡುತ್ತಿದ್ದಾರೆ. ಯಾಕೆ ನೇಮಕ ಮಾಡಬೇಕು ಎಂಬುದನ್ನೂ ಅವರು ವಿವರಣೆ ಕೊಟ್ಟಿದ್ದಾರೆ.
ಕೆಲ ಸಮುದಾಯಗಳಿಗೆ ಡಿಸಿಎಂ ಹುದ್ದೆ ನೀಡುವುದರಿಂದ ಸರ್ಕಾರದ ಅಧಿಕಾರದಲ್ಲಿ ಪಾಲುದಾರರು. ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಮತ ಹಾಕಬೇಕು ಎಂಬ ಅರ್ಥದಲ್ಲಿ ಹೇಳಿದ್ದಾರೆ. ಈಗಾಗಲೇ ಎಐಸಿಸಿ ಅಧ್ಯಕ್ಷರು ಸಹ ಡಿಸಿಎಂ ನೇಮಕದ ಕುರಿತು ಸ್ಪಷ್ಟನೆ ನೀಡಿದ್ದು, ಅವರ ಮಾತಿನಂತೆ ನಡೆದುಕೊಳ್ಳಬೇಕು ಎಂದು ತಿಳಿಸಿದರು.












Click it and Unblock the Notifications