Bengaluru Rain: ನಗರದಲ್ಲಿ ತಾಪಮಾನ ತುಸು ಇಳಿಕೆ: ಜೋರು ಮಳೆ ಬರುವ ಮುನ್ಸೂಚನೆ: ಐಎಂಡಿ
ಬೆಂಗಳೂರು, ಏಪ್ರಿಲ್ 10: ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಬಿಸಿಲಿ ಝಳ ಹೆಚ್ಚಾಗಿತ್ತು. ಅಲ್ಲಲ್ಲಿ ಮಳೆ ಬರುತ್ತಿರುವ ಕಾರಣ ಈ ಉರಿ ತಾಪಮಾನ ತುಸು ಇಳಿಕೆ ಆಗಿದೆ. ಇನ್ನೂ ರಾಜಧಾನಿ ಬೆಂಗಳೂರಿನಲ್ಲಿ ಕೊಂಚ ಉಷ್ಣಾಂಶ ಇಳಿಕೆಯಾಗಿದೆ. ವಾಡಿಕೆಯಷ್ಟು ತಾಪಮಾನ ಮಾತ್ರವೇ ದಾಖಲಾಗಿದೆ.
ಫೆಬ್ರವರಿ ಮಧ್ಯಭಾಗದಿಂದಲೇ ಬೆಂಗಳೂರಿನಲ್ಲಿ ಉರಿ ಬಿಸಿಲು ದಾಖಲಾಗುತ್ತಿತ್ತು. ದಿನ ದಿನಕ್ಕೆ ಶಾಖದ ಅಲೆ ತೀವ್ರಗೊಂಡು ವಾಡಿಕೆ ಗರಿಷ್ಠ ಮಿತಿ ದಾಟಿತ್ತು. ಇದರಿಂದ ಮನೆ, ಕಚೇರಿಯಿಂದ ಹೋರ ಓಡಾಡುವವರಿಗೆ ತೊಂದರೆ ಆಗಿತ್ತು. ಆದರೆ ಅವರೆಗಲ್ಲ ಖುಷಿ ಸುದ್ದಿ ಸಿಕ್ಕಿದ್ದು, ಮಂಗಳವಾರದಿಂದ ತಾಪಮಾನದಲ್ಲಿ ಇಳಿಕೆ ಕಂಡು ಬಂದಿದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.

ನಗರದಲ್ಲಿ 12 ವರ್ಷಗಳ ಏಪ್ರಿಲ್ ತಿಂಗಳ ಅತೀ ಗರಿಷ್ಠ ತಾಪಮಾನ ಕೆಲವು ಭಾರಿ ದಾಖಲಾಗಿದೆ. ನಿತ್ಯವು ದಾಖಲೆ ಮಟ್ಟದ ಗರಿಷ್ಠ ಉಷ್ಣಾಂಶ ಕಂಡು ಬರುತ್ತಿತ್ತು. 36 ರಿಂದ 37.6 ಡಿಗ್ರಿ ಸೆಲ್ಸಿಯಸ್ ವರೆಗೆ ಬಿಸಿಲು ಬಿದ್ದಿತ್ತು. ಇದೀಗ ಬುಧವಾರ ಮತ್ತು ಗುರುವಾರ ಗರಿಷ್ಠ ತಾಪಮಾನ 34-35 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಇದು ಸುಮಾರು ವಾಡಿಕೆಯ ತಾಪಮಾನವಾಗಿದೆ. ಇದು ಬೆಂಗಳೂರು ನಿವಾಸಿಗಳಿಗೆ ಕೊಂಚ ರಿಲೀಫ್ ನೀಡಿದೆ ಎನ್ನಬಹುದು.
ಇಂದಿನ ಬೆಂಗಳೂರು ತಾಪಮಾನ ವಿವರ
ಇಂದು ಗುರುವಾರ (ಏಪ್ರಿಲ್ 10) ರಂದು ಬೆಂಗಳೂರು ನಗರದಲ್ಲಿ 35.2 ಡಿಗ್ರಿ ಸೆಲ್ಸಿಯಸ್, ಬೆಂಗಳೂರು ಕೆಐಎಎಲ್ 35.7 ಡಿಗ್ರಿ ಸೆಲ್ಸಿಯಸ್, ಬೆಂಗಳೂರು ಎಚ್‌ಎಎಲ್ 34.4 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ನಗರದ ಕನಿಷ್ಠ ತಾಪಮಾನ 21-22ರಷ್ಟು ಡಿಗ್ರಿ ಸೆಲ್ಸಿಯಸ್ ಆಗಿದೆ.
ಮುಂದಿನ ದಿನಗಳಲ್ಲಿ ಬೆಂಗಳೂರಿಗೆ ಅಲ್ಲಲ್ಲಿ ಹಗುರವಾಗಿ ಮಳೆ ಬರುವ ಸಾಧ್ಯತೆಗಳು ಇವೆ. ಜೊತೆಗೆ ತಾಪಮಾನದ ಏರಿಳಿತ ಹೀಗೆ ಮುಂದುವರಿಯುವ ಲಕ್ಷಣಗಳು ಇವೆ ಎಂದು ತಿಳಿಸಿವೆ.
ಏಪ್ರಿಲ್ 13ರಂದು ಬೆಂಗಳೂರಿಗೆ ಮಳೆ
ಮುಂದಿನ ಏಪ್ರಿಲ್ 13ರಂದು ಒಂದು ದಿನ ಬೆಂಗಳೂರು ನಗರದಲ್ಲಿ ಒಂದು ದಿನ ಹಗುರದಿಂದ ಸಾಧಾರಣ ಮಳೆ ಆಗಲಿದೆ. ಈ ವೇಳೆ ತಾಪಮಾನ ಮತ್ತಷ್ಟು ಇಳಿಕೆ ಆಗುವ, ತಂಪು ಗಾಳಿ ಬೀಸುವ ಸಾಧ್ಯತೆ ಇದೆ ಎಂದು ಐಎಂಡಿ ಮುನ್ಸೂಚನಾ ವರದಿ ಮಾಹಿತಿ ನೀಡಿದೆ.

ವಿವಿಧ ಜಿಲ್ಲೆಗಳಲ್ಲಿ ಹಬ್ಬದಂದು ಮಳೆ
ಹಾವೇರಿ, ವಿಜಯನಗರ ಜಿಲ್ಲೆ, ಶಿವಮೊಗ್ಗ ಜಿಲ್ಲೆ ವ್ಯಾಪ್ತಿಯಲ್ಲಿ ಯುಗಾದಿ ಹಬ್ಬದ ದಿನವೇ ಮಳೆರಾಯ ಭೂಮಿಗೆ ತಂಪೆರೆದಿದ್ದಾನೆ. ಬಿಸಿಲಿಗೆ ಬಸವಳಿದಿದ್ದ ಜನರಿಗೆ ಹಬ್ಬದ ದಿನದಂತೆ ಮಳೆಯ ಆಗಮನ ಎಲ್ಲಿಲ್ಲದ ಸಂತೋಷ ತಂದಿದೆ.
ಆದರೆ ಬೆಂಗಳೂರಿಗೆ ಜೋರು ಮಳೆ ಲಕ್ಷಣಗಳು ಇಲ್ಲ. ಬಂದರೆ ಹಗುರ ಮಳೆ ಬರಬಹದು ಎನ್ನಲಾಗಿದೆ. ಮಾರ್ಚ್ ತಿಂಗಳಲ್ಲಿ ಒಂದು ಹನಿ ನೀರು ಸಹ ಬಾರದೇ ಅಲ್ಲಿಂದ ಈವರೆಗೆ ಒಣಹವೆಯ ವಾತಾವರಣವೇ ಮುಂದುವರಿದಿದೆ.
ರಾಜ್ಯದ ಒಳನಾಡಿಗೆ ವರುಣನ ಕೃಪೆ
ಮುಂದಿನ ಒಂದು ವಾರ ರಾಜ್ಯದ ಒಳನಾಡು ಜಿಲ್ಲೆಗಳಲ್ಲಿ ಪೂರ್ವ ಮುಂಗಾರು ಮಳೆ ಸಕ್ರಿಯವಾಗಲಿದೆ. ಬೆಳಗಾವಿ, ಬೀದರ್, ಕಲಬುರಗಿ, ಧಾರವಾಡ, ಹಾವೇರಿ, ಕೊಪ್ಪಳ, ಬೆಳಗಾವಿ, ವಿಜಯಪುರ, ಬಾಗಲಕೋಟೆ, ಯದಗಿರಿ ಜಿಲ್ಲೆಗಳಲ್ಲಿ ಸಾಧಾರಣ ಮಳೆಯ ನಿರೀಕ್ಷೆ ಇದೆ.
ಇದೇ ಅವಧಿಯಲ್ಲಿ ದಿನ ಬಿಟ್ಟು ದಿನ ಚಿತ್ರದುರ್ಗ, ಕೋಲಾರ, ಚಿಕ್ಕಬಳ್ಳಾಪುರ, ಬಳ್ಳಾರಿ, ತುಮಕೂರು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆ ಆಗಲಿದೆ. ಈ ಕಾರಣಕ್ಕೆ ಆಯಾ ಜಿಲ್ಲೆಗಳಲ್ಲಿ ಕೊಂಚ ತಾಪಮಾನ ಕಡಿಮೆ ಆಗಬಹುದು ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬೆಂಗಳೂರಿನಲ್ಲಿ ಮಧ್ಯಾಹ್ನ ಎಂದಿನಂತೆ ಬಿಸಿಲಿನ ಕಾವು ಕಂಡು ಬಂದರೆ, ಸಂಜೆ ಹಾಗೂ ಬೆಳಗ್ಗೆ ತುಸು ತಂಪು ವಾತಾವರಣದ ಅನುಭವ ಆಗುತ್ತಿದೆ. ಇಂದು ನಾಳೆಯೋ ಮಳೆ ಬರುವ ಹಾಗಿದೆ. ಸದ್ಯದ ಪ್ರಕಾರ ಒಂದು ದಿನ ಮಳೆ ಮುನ್ಸೂಚನೆ ಇದೆ ಎಂದು ಐಎಂಡಿ ಮಾಹಿತಿ ನೀಡಿದೆ.












Click it and Unblock the Notifications