Doctors Strike: ಸಾರ್ವಜನಿಕರೇ ಗಮನಿಸಿ! ನಾಳೆ ಕರ್ನಾಟಕದಲ್ಲಿ ಎಲ್ಲಾ ಆಸ್ಪತ್ರೆಗಳು ಬಂದ್
ಬೆಂಗಳೂರು, ಆಗಸ್ಟ್ 16: ನಾಳೆ ವಾರಂತ್ಯಕ್ಕೆ ರೆಗ್ಯೂಲರ್ ಚೆಕ್‌ಅಪ್, ಶೀತ, ಕೆಮ್ಮು, ಜ್ವರ, ಕಾಲು ನೋವು ಅಂತಾ ಆಸ್ಪತ್ರೆಗೆ ಹೋಗಬೇಕು ಎಂದುಕೊಂಡರು ಕೂಡಲೇ ನಿಮ್ಮ ಆಲೋಚನೆಯನ್ನು ಬದಲಿಸಿ. ಸಾಧ್ಯವಾದರೆ ಇಂದೇ ಸಮೀಪದ ಆಸ್ಪತ್ರೆಗೆ ಹೋಗಿ ಅಗತ್ಯವಿರುವ ಚಿಕಿತ್ಸೆಯನ್ನು ಪಡೆದುಕೊಂಡು ಬನ್ನಿ. ಯಾಕೆಂದರೆ ನಾಳೆ ಬೆಂಗಳೂರು ಸೇರಿದಂತೆ ಕರ್ನಾಟಕದ ಎಲ್ಲಾ ಆಸ್ಪತ್ರೆಗಳು ಬಂದ್ ಆಗಲಿದೆ.
ಕೊಲ್ಕತ್ತಾದಲ್ಲಿ ವೈದ್ಯೆಯ ಮೇಲೆ ಅತ್ಯಾಚಾರ ಮತ್ತು ಹತ್ಯೆಯನ್ನು ಖಂಡಿಸಿ ಭಾರತೀಯ ವೈದ್ಯಕೀಯ ಸಂಘ (IMA) ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ 24 ಗಂಟೆಗಳ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿದೆ. ಈ ಹಿನ್ನೆಲೆಯಲ್ಲಿ ಆಗಸ್ಟ್ 17ರ ಶನಿವಾರ ಬೆಳಿಗ್ಗೆ 6ರಿಂದ ಆಗಸ್ಟ್ 18ರ ಭಾನುವಾರ ಬೆಳಿಗ್ಗೆ 6ರವರೆಗೆ 24 ಗಂಟೆಗಳ ಕಾಲ ತುರ್ತು ಚಿಕಿತ್ಸೆ ಹೊರತು ಪಡಿಸಿ ಉಳಿದೆಲ್ಲಾ ಸೇವೆಗಳು ನಾಳೆ ಆಸ್ಪತ್ರೆಯಲ್ಲಿ ಸ್ಥಗಿತಗೊಳ್ಳಲಿದೆ.

ಕೊಲ್ಕತ್ತಾದ ಆರ್.ಜಿ ಕರ್ ಆಸ್ಪತ್ರೆಯಲ್ಲಿ ಟ್ರೈನಿ ವೈದ್ಯೆಯ ಕೊಲೆ ಪ್ರಕರಣವನ್ನು ಖಂಡಿಸಿ ಪಶ್ಚಿಮ ಬಂಗಾಳ ಸೇರಿದಂತೆ ದೇಶದ ಮೂಲೆ, ಮೂಲೆಯಲ್ಲೂ ಪ್ರತಿಭಟನೆ ನಡೆಸಲಾಗುತ್ತಿದೆ. ಕೊಲೆಗೆ ಕಾರಣವಾದ ಆರೋಪಿಯನ್ನು ಶೀಘ್ರವೇ ಗಲ್ಲು ಶಿಕ್ಷೆಗೆ ಗುರಿ ಮಾಡಲು ಆಗ್ರಹಿಸಲಾಗುತ್ತಿದೆ. ಸಂಪೂರ್ಣ ದೇಶದಾದ್ಯಂತ ವೈದ್ಯರು ಈ ಪ್ರತಿಭಟನೆಗೆ ಬೆಂಬಲ ನೀಡುತ್ತಿದ್ದು, ಸಂಪೂರ್ಣ ಒಂದು ದಿನ ಓಪಿಡಿ ಬಂದ್ ಮಾಡುವ ಮೂಲಕ ಕೊಲ್ಕತ್ತಾದಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ.
ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ವ್ಯಾಪ್ತಿಯಲ್ಲಿ ಬರುವ ಎಲ್ಲಾ ವೈದ್ಯರು ಈ ಮುಷ್ಕರಕ್ಕೆ ಬೆಂಬಲ ನೀಡುತ್ತಿದ್ದು, ಸರ್ಕಾರಿ ವೈದ್ಯಾಧಿಕಾರಿಗಳ ಅಸೋಸಿಯೇಷನ್, ಅರ್ಥೋಪಿಟಿಕ್ ಅಸೋಸಿಯೇಷನ್, ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ, ಮೆಡಿಕಲ್ ಕಾಲೇಜು ವೈದ್ಯರ ಅಸೋಸಿಯೇಷನ್ ಸೇರಿದಂತೆ ವಿವಿಧ ಅಸೋಸಿಯೇಷನ್ ಈ ಹೋರಾಟಕ್ಕೆ ಒಗ್ಗಟ್ಟಾಗಿವೆ.

ಮಲ್ಟಿಸ್ಪೆಷಾಲಿಟಿ, ನರ್ಸಿಂಗ್ ಹೋಂ, ಸರ್ಕಾರಿ ಆಸ್ಪತ್ರೆಗಳು, ಕ್ಲಿನಿಕ್ ವೈದ್ಯರು ಮುಷ್ಕರಕ್ಕೆ ಬೆಂಬಲ ನೀಡುತ್ತಿದ್ದು, ಸರ್ಕಾರಿ ವೈದ್ಯರು ಕಪ್ಪುಪಟ್ಟಿ ಧರಿಸಿ ಕೇವಲ ತುರ್ತು ಸೇವೆಯನ್ನು ಮಾತ್ರ ನೀಡಲಿದ್ದಾರೆ. ಹೀಗಾಗಿ ನಾಳೆ ಯಾರಿಗೂ ಯಾವುದೇ ಸಾಮಾನ್ಯ ವೈದ್ಯಕೀಯ ಸೇವೆ ಲಭ್ಯವಿಲ್ಲ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಎಚ್ಚರ ವಹಿಸಬೇಕಾಗಿದೆ.












Click it and Unblock the Notifications