ಬೆಂಗಳೂರು; ಅನಧಿಕೃತ ಹೋರ್ಡಿಂಗ್‌ಗೆ ಪೊಲೀಸ್ ಇನ್ಸ್‌ಪೆಕ್ಟೆರ್ ಹೊಣೆ
ಬೆಂಗಳೂರು, ಸೆಪ್ಟೆಂಬರ್ 20; ಬೆಂಗಳೂರು ಮಹಾನಗರದಲ್ಲಿ ಇನ್ನು ಮುಂದೆ ಅನಧಿಕೃತ ಹೋರ್ಡಿಂಗ್, ಫೆಕ್ಸ್, ಬ್ಯಾನರ್ ಕಂಡು ಬಂದರೆ ಅದಕ್ಕೆ ಆಯಾ ಪ್ರದೇಶದ ಪೊಲೀಸ್ ಇನ್ಸ್‌ಪೆಕ್ಟರ್‌ಗಳೇ ಹೊಣೆಗಾರರು. ಹೌದು, ಈ ವಿಷಯವನ್ನು ಸರ್ಕಾರವೇ ಕರ್ನಾಟಕ ಹೈಕೋರ್ಟ್‌ಗೆ ತಿಳಿಸಿದೆ.
ನಗರದಲ್ಲಿನ ಅನಧಿಕೃತ ಜಾಹೀರಾತು ಫಲಕಗಳ ಹಾವಳಿ ತಡೆಯಲು ಬಿಬಿಎಂಪಿಗೆ ನಿರ್ದೇಶಿಸುವಂತೆ ಕೋರಿ ಸಾಮಾಜಿಕ ಕಾರ್ಯಕರ್ತ ಮಾಯಿಗೇಗೌಡ ಮತ್ತಿತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ. ಬಿ. ವರಾಳೆ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠದ ಮುಂದೆ ಸರ್ಕಾರ ಈ ಅಂಶ ತಿಳಿಸಿದೆ.

ರಾಜ್ಯ ಸರ್ಕಾರ ವರದಿ ಸಲ್ಲಿಸಿ, ಕರ್ನಾಟಕ ಮುಕ್ತ ಪ್ರದೇಶದ ವಿರೂಪ ತಡೆ ಕಾಯ್ದೆಯ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಸೂಚಿಸಿ ನಗರದ ಎಲ್ಲಾ ವಯಯಗಳ ಉಪ ಪೊಲೀಸ್ ಆಯುಕ್ತರು, ಸಹಾಯಕ ಪೊಲೀಸ್ ಆಯುಕ್ತರು, ಠಾಣೆಗಳ ಇನ್ಸ್‌ಪೆಕ್ಟರ್‌ಗಳಿಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತರು 2023ರ ಆ.23ರಂದು ನಿರ್ದೇಶಿಸಿದ್ದಾರೆ ಎಂದು ತಿಳಿಸಲಾಗಿದೆ.
ಗಸ್ತು ಮಾಡುವ ವೇಳೆ ಅನಧಿಕೃತ ಜಾಹೀರಾತು ಅಳವಡಿಸುತ್ತಿರುವುದು ಕಂಡು ಬಂದಲ್ಲಿ, ಅಂತಹ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಎಲ್ಲಾ ಸ್ಥಳಗಳನ್ನು ಪರಿಶೀಲಿಸಿ ಹೆಚ್ಚಿನ ಪ್ರಕರಣ ದಾಖಲಿಸಬೇಕು. ಅದಕ್ಕಾಗಿ ಬಿಬಿಎಂಪಿ ಅಧಿಕಾರಿಗಳ ನೆರವು ಪಡೆದು ಕ್ರಮ ಜರುಗಿಸಬೇಕು.
ಆದಾಗ್ಯೂ ಮುಂದಿನ ದಿನಗಳಲ್ಲಿ ಅನಧಿಕೃತ ಜಾಹೀರಾತು ಫಲಕಗಳು ಅಳವಡಿಸಿರುವುದು ಕಂಡುಬಂದರೆ ಸಂಬಂಧಪಟ್ಟ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಅವರನ್ನು ನೇರ ಹೊಣೆಗಾರರನ್ನಾಗಿ ಮಾಡಿ, ಮುಂದಿನ ಇಲಾಖಾ ಶಿಸ್ತು ಕ್ರಮಕ್ಕೆ ನಗರ ಪೊಲೀಸ್ ಆಯುಕ್ತರ ಕಚೇರಿಗೆ ವರದಿ ಕಳುಹಿಸಿಕೊಡುವಂತೆ ಎಲ್ಲಾ ಸಹಾಯಕ ಪೊಲೀಸ್ ಆಯುಕ್ತರಿಗೆ ನಿರ್ದೇಶಿಸಲಾಗಿದೆ ಎಂದು ವಿವರಿಸಿದೆ.
ಪಾಲಿಕೆ ವಿರುದ್ಧ ಅಸಮಾಧಾನ: ನಗರದಲ್ಲಿ ನಾಯಿಕೊಡೆಗಳಂತೆ ಅನಧಿಕೃತ ಚುನವಣಾ ಹೋರ್ಡಿಂಗ್‌ಗಳು ತಲೆ ಎತ್ತುತ್ತಿರುವುದರಿಂದ ಸಾರ್ವಜನಿಕರು ಅದರಲ್ಲೂ ಮುಖ್ಯವಾಗಿ ಬೆಂಗಳೂರು ಜನತೆ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಹೈಕೋರ್ಟ್ ಅಸಮಾಧಾನ ಹೊರಹಾಕಿದೆ.
ನಗರದಲ್ಲಿ ಅನಧಿಕೃತ ಜಾಹೀರಾತು ಫಲಕಗಳ ಅಳವಡಿಕೆ ಹೆಚ್ಚುತ್ತಿದೆ. ಈ ಬೆಳವಣಿಗೆಯು ಪಾಲಿಕೆಯ ಅಧಿಕಾರಿಗಳು ತಮ್ಮ ಕರ್ತವ್ಯಗಳಲ್ಲಿ ಸೂಕ್ತವಾಗಿ ಕಾರ್ಯನಿರ್ವಹಿಸುತ್ತಿಲ್ಲ ಹಾಗೂ ಸಂಪೂರ್ಣ ನಿರ್ಲಕ್ಷ್ಯ ತೋರಿಸುತ್ತಿದ್ದಾರೆ ಎಂಬ ಭಾವನೆ ಸಾರ್ವಜನಿಕರಲ್ಲಿ ಮೂಡುವಂತೆ ಮಾಡಿರುವುದಾಗಿ ಅರ್ಜಿದಾರರ ಪರ ವಕೀಲರು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ. ಅವರ ವಾದವು ನ್ಯಾಯಸಮ್ಮತವಾಗಿದ್ದು, ಜಾಹೀರಾತು ಹಾವಳಿಯಿಂದ ಸಾರ್ವಜನಿಕರು ಮತ್ತು ನಿರ್ದಿಷ್ಟವಾಗಿ ಬೆಂಗಳೂರು ನಗರದ ನಾಗರಿಕರು ಬಳಲುತ್ತಿದ್ದಾರೆ ಎಂದು ನ್ಯಾಯಪೀಠ ಬಿಬಿಎಂಪಿ ಅಧಿಕಾರಿಗಳ ಕಾರ್ಯವೈಖರಿಗೆ ಚಾಟಿ ಬೀಸಿದೆ.
ಅಲ್ಲದೆ, ನಗರದಲ್ಲಿ ಅನಧಿಕೃತ ಚುನಾವಣಾ ಹೋರ್ಡಿಂಗ್, ಫ್ಲೆಕ್ಸ್ ಮತ್ತು ಬ್ಯಾನರ್‌ಗಳು ನಾಡಿಕೊಡೆಗಳಂತೆ ಎಲೆ ಎತ್ತುತ್ತಿವೆ. ಇದು ಸುಗಮ ಸಂಚಾರಕ್ಕೆ ಗಂಭೀರ ಅಡಚಣೆ ಉಂಟುಮಾಡುವುದು ಮಾತ್ರವಲ್ಲದೆ, ಬಹಳಷ್ಟು ಅನಾನುಕೂಲತೆ ಸೃಷ್ಟಿಸುತ್ತಿವೆ. ಈ ಪರಿಸ್ಥಿತಿ ತಡೆಯುವ ನಿಟ್ಟಿನಲ್ಲಿ ಬಿಬಿಎಂಪಿ ಕಾರ್ಯೋನ್ಮುಖವಾಗಬೇಕು. ಆ ಕುರಿತು ಬಿಬಿಎಂಪಿ ಸಮಗ್ರವಾದ ವರದಿಯನ್ನು ಮೂರು ವಾರದಲ್ಲಿ ಸಲ್ಲಿಸಬೇಕು ಎಂದು ಸೂಚಿಸಿದ ನ್ಯಾಯಪೀಠ ವಿಚಾರಣೆಯನ್ನು ಅಕ್ಟೋಬರ್ 11ಕ್ಕೆ ಮುಂದೂಡಿದೆ.
ಬಿಬಿಎಂಪಿ ಪರ ವಕೀಲರು ಮೆಮೋ ಸಲ್ಲಿಸಿ, 2023ರ ಆ.30ರಿಂದ ಅನಧಿಕೃತ ಜಾಹೀರಾತು ಫಲಕಗಳ ಅಳವಡಿಕೆಗಳ ಕುರಿತು 701 ಪ್ರಕರಣಗಳನ್ನು ದಾಖಲಿಸಲಾಗಿದೆ. 2022ರಲ್ಲಿ 76, 2021ರಲ್ಲಿ 19, 2020ರಲ್ಲಿ 120 ಪ್ರಕರಣಗಳು ದಾಖಲಾಗಿವೆ.
ಒಟ್ಟಾರೆ ಪ್ರಕರಣಗಳ ಪೈಕಿ 164 ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗಿದೆ. 17 ಪ್ರಕರಣಗಳು ಇತ್ಯರ್ಥಗೊಂಡಿದ್ದು, 132 ಪ್ರಕರಣಗಳು ವಿಲೇವಾರಿಗೆ ಬಾಕಿಯಿವೆ. 2023ರ ಆಗಸ್ಟ್ ತಿಂಗಳ ಒಂದರಲ್ಲೇ 327 ಪ್ರಕರಣಗಳು ದಾಖಲಾಗಿವೆ ಎಂದು ತಿಳಿಸಿದರು.












Click it and Unblock the Notifications