ಬೆಂಗಳೂರು: ಮನೆ ಮುಂದೆ ವಾಹನ ನಿಲ್ಲಿಸಿದರೆ 5 ಸಾವಿರ ರೂ. ಕಟ್ಬೇಕು
ಬೆಂಗಳೂರು,ಫೆಬ್ರವರಿ 11: ನಿಮ್ಮ ಮನೆಯಲ್ಲಿ ಪಾರ್ಕಿಂಗ್ ಇಲ್ವಾ,ಮನೆಯ ಗೇಟಿನ ಬಳಿ ವಾಹನ ನಿಲ್ಲಿಸ್ತಾ ಇದೀರಾ ಹಾಗಾದರೆ ವಾರ್ಷಿಕವಾಗಿ 5 ಸಾವಿರ ರೂ. ಕಟ್ಟಲು ಸಿದ್ಧರಾಗಿ.
ಹೌದು ಹೊಸ ಪಾರ್ಕಿಂಗ್ ನಿಯಮಕ್ಕೆ ಎಲ್ಲರೂ ಸಿದ್ಧರಾಗಿ, ಮನೆಯ ಮುಂದೆ ಅಥವಾ ರಸ್ತೆ ಬದಿಯಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡಿದರೆ ಶುಲ್ಕ ಪಾವತಿಸಬೇಕಾಗುತ್ತದೆ.
ಈ ಕಾರ್ಯಕ್ಕೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮುಂದಾಗಿದೆ. ಕೇಂದ್ರ ನಗರ ಸಾರಿಗೆ ಸಹಕಾರದೊಂದಿಗೆ ಪಾರ್ಕಿಂಗ್ ಶುಲ್ಕ ನಿಗದಿಯಾಗಿದ್ದು, ಆರು ತಿಂಗಳ ಒಳಗಡೆ ಹೊಸ ಪಾರ್ಕಿಂಗ್ ನೀತಿ ಜಾರಿಯಾಗಲಿದೆ.

ನೀತಿಯಲ್ಲಿ ಏನೇನಿದೆ?
ವಾಹನ ಮಾಲೀಕರು ತಮ್ಮ ಮನೆಯ ಸಮೀಪದ ರಸ್ತೆಗಳಲ್ಲಿ ಪಾವತಿ ಆಧಾರದಲ್ಲಿ ವಾಹನಗಳ ನಿಲುಗಡೆ ಮಾಡಲು ಪರವಾನಗಿ ಪಡೆದುಕೊಳ್ಳಬೇಕಾಗುತ್ತದೆ. ಇದರ ಜತೆಗೆ ಪ್ರಮುಖ ಪ್ರದೇಶಗಳಲ್ಲಿ ರಸ್ತೆ ಬದಿ ವಾಹನ ನಿಲುಗಡೆಗೆ ದುಬಾರಿ ಶುಲ್ಕ ವಿಧಿಸಲಾಗುತ್ತದೆ. ಹೆಚ್ಚು ಸಮಯ ನಿಲುಗಡೆ ಮಾಡಿದರೆ ಹೆಚ್ಚಿನ ಶುಲ್ಕ ನೀಡಬೇಕು. ಶಾಲೆಗಳು ವಾಹನ ನಿಲುಗಡೆಗೆ ಸ್ವಂತ ಸ್ಥಳಾವಕಾಶ ಹೊಂದುವುದನ್ನು ಕಡ್ಡಾಯಗೊಳಿಸಲಾಗಿದೆ.

ಯಾವುದಕ್ಕೆ ಎಷ್ಟು ಶುಲ್ಕ?
ಪಾರ್ಕಿಂಗ್ ಶುಲ್ಕ ಯೋಜನೆ ಜಾರಿಗೆ ಬಂದಲ್ಲಿ ರಸ್ತೆ ಬದಿಯಲ್ಲಿ ನಿಲ್ಲುವ ವಾಹನಗಳು ಶುಲ್ಕ ಕಟ್ಟಬೇಕಾಗುತ್ತದೆ. ಸಣ್ಣ ಕಾರುಗಳು ವಾರ್ಷಿಕ ಒಂದು ಸಾವಿರ ರೂ, ಮಧ್ಯಮ ಕಾರುಗಳಿಗೆ 3 ಸಾವಿರ ರೂ., ದೊಡ್ಡ ಕಾರುಗಳಿಗೆ ವಾರ್ಷಿಕ 5 ಸಾವಿರ ರೂ.ವರೆಗೂ ಶುಲ್ಕ ಕಟ್ಟಬೇಕಾಗುತ್ತದೆ.
ಜನ ಸಾರ್ವಜನಿಕ ಸಾರಿಗೆ ವ್ಯವಸ್ಥೆ,ವಾಕಿಂಗ್, ಸೈಕಲ್ ಓಡಿಸುವ ಹವ್ಯಾಸ ರೂಪಿಸಲು ಈ ಪೇ ಪಾರ್ಕಿಂಗ್ ಕಾರಿಯಾಗಬೇಕು. ರೆಸಿಡೆನ್ಸಿ ಏರಿಯಾದ ರಸ್ತೆಗಳಲ್ಲಿ ಗಂಟೆಗೊಮ್ಮೆ ಪಾರ್ಕಿಂಗ್ ಶುಲ್ಕ ಹೆಚ್ಚಳವಾಗಬೇಕು ಎನ್ನುವ ಪ್ರಸ್ತಾಪ ನೀತಿಯಲ್ಲಿದೆ.

ನೀತಿಯಲ್ಲಿರುವ ಪ್ರಮುಖ ಅಂಶಗಳು
ಖಾಸಗಿ ಸಹಭಾಗಿತ್ವದಲ್ಲಿ ಬಹುಮಹಡಿ ವಾಹನ ನಿಲುಗಡೆ ಕಟ್ಟಡಗಳ ನಿರ್ಮಾಣ, ವಲಯವಾರು ಪಾರ್ಕಿಂಗ್ ಕಾರ್ಯತಂತ್ರ ರೂಪಿಸುವುದು, ಹೊರ ರಾಜ್ಯ ಮತ್ತು ಹೊರ ಜಿಲ್ಲೆಗಳಿಗೆ ಸಂಚರಿಸುವ ಬಸ್‌ಗಳಿಗೆ ಪ್ರತ್ಯೇಕ ಪಾರ್ಕಿಂಗ್ ಸ್ಥಳ ನಿಗದಿ, ಟ್ರಕ್‌ಗಳಿಗೆ ವರ್ತುಲ ರಸ್ತೆಗಳ ಸಮೀಪದಲ್ಲೇ ಟರ್ಮಿನಲ್ ನಿರ್ಮಾಣ,ಪಾರ್ಕಿಂಗ್ ನಿರ್ವಹಣೆಗೆತಂತ್ರಜ್ಞಾನಗಳ ಅಳವಡಿಸಬೇಕು ಎನ್ನುವ ಅಂಶಗಳಿವೆ.
Recommended Video

ನಮ್ಮ ಮೆಟ್ರೋ,ಓಲಾದಿಂದ ಹೊಸ ಪಾರ್ಕಿಂಗ್ ನೀತಿಗೆ ತಡೆ ಬಿದ್ದಿತ್ತು
ನಮ್ಮ ಮೆಟ್ರೋ,ಓಲಾ ಸೇರಿದಂತೆ ಹಲವು ಸೇವೆಗಳಿಂದ ಹೊಸ ಪಾರ್ಕಿಂಗ್ ನೀತಿಗೆ ತಡೆ ಬಿದ್ದಿತ್ತು. ಆದರೆ ಸಾರ್ವಜನಿಕರಿಗೆ ಸಾರಿಗೆ ಸಂಪರ್ಕ ಸುಧಾರಣೆ ನಡುವೆಯೂ ಪಾರ್ಕಿಂಗ್ ಸಮಸ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಹೊಸ ಪಾರ್ಕಿಂಗ್ ನೀತಿ 2.0ಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ.












Click it and Unblock the Notifications