ಸಚಿವ ಅಂಬರೀಷ್ ತಕ್ಷಣ ಇತ್ತ ಗಮನಹರಿಸಲಿ
ಬೆಂಗಳೂರು, ಮೇ21: ಇಷ್ಟು ದಿನ ಲೋಕಸಭಾ ಚುನಾವಣೆ ನೆಪ ಹೇಳಿಕೊಂಡು ರಾಜ್ಯದಲ್ಲಿ ಕಾಮಗಾರಿಗಳು ಮತ್ತಿತರ ಯೋಜನೆಗಳನ್ನು ಕಾರ್ಯಗತಗೊಳಿಸಲು ಹಿಂದೇಟು ಹಾಕುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಇನ್ನಾದರೂ ಬಾಕಿ ಯೋಜನೆಗಳನ್ನು ಪೂರೈಸಬೇಕಿದೆ.
ಮುಖ್ಯವಾಗಿ ನೆನೆಗುದಿಗೆ ಬಿದ್ದಿರುವ ವಸತಿ ಯೋಜನೆಗಳನ್ನು ಪೂರ್ಣಗೊಳಿಸಬೇಕಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಬಂದ ಒಂದು ವರ್ಷದಲ್ಲಿ 3 ಲಕ್ಷ ಮನೆ ನಿರ್ಮಿಸುವುದಾಗಿ ಭರವಸೆ ನೀಡಿದ್ದರು. ಆದರೆ ಅವೆಲ್ಲವೂ ಅರ್ಧಂಬರ್ಧ ಕೈಗೂಡಿ, ಪಾಳುಬಿದ್ದಂತಾಗಿದೆ.
ನಾನಾ ವಸತಿ ಯೋಜನೆಗಳಡಿ ಬಡವರಿಗೆ ಮನೆ ಕಟ್ಟಿಕೊಳ್ಳಲು ಸರಕಾರ ಹಣಕಾಸಿನ ನೆರವು ನೀಡುತ್ತದೆ. ಆದರೆ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ 90 ಸಾವಿರ ಮನೆಗಳ ನಿರ್ಮಾಣ ಕಾರ್ಯ ಅರ್ಧಕ್ಕೆ ನಿಂತಿದೆ. ಕೆಲವರು ತಮ್ಮ ಮನೆಗಳಿಗೆ ಅಡಿಪಾಯ ಹಾಕಿದ್ದಾರೆ. ಕೆಲವರು ಗೋಡೆಗಳನ್ನು ಎಬ್ಬಿಸಿದ್ದಾರೆ.

ಆದರೆ ಮನೆ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಲು ಸರಕಾರ ಹಣಕಾಸು ಬಿಡುಗಡೆ ಮಾಡುತ್ತಿಲ್ಲ. ಹಾಗಾಗಿ ವಸತಿ ಯೋಜನೆಗಳನ್ನು ಪೂರ್ಣಗೊಳಿಸಲು ಒಂದು ವಾರದಲ್ಲಿ ಸರಕಾರ ಹಣ ಬಿಡುಗಡೆ ಮಾಡಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸುವುದಾಗಿ ವಿರೋಧ ಪಕ್ಷವಾದ ಬಿಜೆಪಿ ಗುಡುಗಿದೆ. (ಸಚಿವ ಮಹದೇವಪ್ಪ ಬಂಗಲೆ ನವೀಕರಣ ಖರ್ಚು 46 ಲಕ್ಷ )
90,000 ಫಲಾನುಭವಿಗಳಿಗೆ ನೀಡಬೇಕಾದ ಹಣಕಾಸು ನೆರವನ್ನು ತಡೆಹಿಡಿಯಲಾಗಿದೆ. ಈ ತಡೆ ತೆರವುಗೊಳಿಸವುದಾಗಿ ವಸತಿ ಸಚಿವ ಅಂಬರೀಷ್ ಅವರು 2 ತಿಂಗಳ ಹಿಂದೆಯೇ ವಿಧಾನಪರಿಷತ್ತಿನಲ್ಲಿ ತಿಳಿಸಿದ್ದರು. ಆದರೆ ಅಧಿಕಾರಿಗಳು ಹಣ ಬಿಡುಗಡೆ ಮಾಡಿಲ್ಲ. ಇನ್ನೊಂದು ವಾರದಲ್ಲಿ ಹಣ ಬಿಡುಗಡೆ ಮಾಡಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸುವುದಾಗಿ ಬಿಜೆಪಿ ಮಾಜಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಗುಡುಗಿದ್ದಾರೆ.
'ಸರಕಾರ ಪ್ರತಿ ವರ್ಷ 3 ಲಕ್ಷ ಮನೆ ನಿರ್ಮಿಸುವ ಗುರಿ ಹೊಂದಿದೆ. ಆದರೆ 50 ಸಾವಿರ ಮನೆಗಳನ್ನೂ ನಿರ್ಮಿಸಲು ಅಸಹಾಯಕವಾಗಿದೆ. ಫಲಾನುಭವಿಗಳಿಗೆ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನಲ್ಲಿಯೇ ಹಣ ಪಡೆಯಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ರಾಜ್ಯದಲ್ಲಿ 350 ಶಾಖೆಗಳನ್ನು ಮಾತ್ರ ಆ ಬ್ಯಾಂಕ್ ಹೊಂದಿದೆ. ಹಾಗಾಗಿ ಬೇರೆ ಬ್ಯಾಂಕುಗಳ ಚೆಕ್ಕುಗಳನ್ನು ಸಹ ನೀಡಬೇಕು. ಇದರಿಂದ ಫಲಾನುಭವಿಗಳಿಗೆ ಅನುಕೂಲವಾಗುತ್ತದೆ' ಎಂದು ಪೂಜಾರಿ ಆಗ್ರಹಿಸಿದ್ದಾರೆ.












Click it and Unblock the Notifications