ಕುದುರೆ ಏರಿ ಗಸ್ತು ಹೊರಟ ಬೆಂಗಳೂರು ನಗರ ಪೊಲೀಸರು!
ಬೆಂಗಳೂರು, ಫೆಬ್ರವರಿ 07: ಉದ್ಯಾನ ನಗರಿ ಬೆಂಗಳೂರಿನಲ್ಲಿ ಪೊಲೀಸರು ವಾಹನಗಳನ್ನು ಬಳಕೆ ಮಾಡಿಕೊಂಡು ಗಸ್ತು ಮಾಡುತ್ತಾರೆ. ಹೊಯ್ಸಳ ಗಸ್ತು ವಾಹನಗಳು ರಸ್ತೆಯಲ್ಲಿ ಕಾಣಿಸುತ್ತವೆ. ಆದರೆ ಈಗ ಪೊಲೀಸರು ಕುದುರೆ ಏರಿ ಗಸ್ತು ಆರಂಭಿಸಿದ್ದಾರೆ. ಇದು ಪ್ರಾಯೋಗಿಕವಾಗಿ ಜಾರಿಗೆ ಬಂದಿದೆ.
ಬೆಂಗಳೂರಿನ ಆಯ್ದ ಕೆಲವು ರಸ್ತೆಗಳಲ್ಲಿ ಅಶ್ವಾರೋಹಿ ಪೊಲೀಸರು ಫೆಬ್ರವರಿ 5ರಿಂದ ಗಸ್ತು ಆರಂಭಿಸಿದ್ದಾರೆ. ಇಂತಹ ಪೊಲೀಸರ ಗಸ್ತು ವ್ಯವಸ್ಥೆ ಈಗಾಗಲೇ ಮೈಸೂರು ನಗರದಲ್ಲಿ ಇದೆ. ಇದೇ ಮಾದರಿಯಲ್ಲಿ ಬೆಂಗಳೂರು ನಗರದಲ್ಲಿಯೂ ಗಸ್ತು ಆರಂಭಗೊಂಡಿದೆ.

ನಗರದಲ್ಲಿ ಅಶ್ವಾರೋಹಿ ತರಬೇತಿ ಪಡೆದ ಪೊಲೀಸರು ಗಸ್ತು ತಿರುಗುವ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ. ಪ್ರಾಯೋಗಿಕವಾಗಿ ವಿಧಾನಸೌಧ, ಕಬ್ಬನ್ ಪಾರ್ಕ್ ಸುತ್ತಮುತ್ತಲೂ ಪೊಲೀಸರು ಗಸ್ತು ಆರಂಭಿಸಿದ್ದಾರೆ, ಜನರು ಸಹ ಈ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪ್ರಾಯೋಗಿಕವಾಗಿ ಜಾರಿ; ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ನಗರದಲ್ಲಿ ಪೊಲೀಸರು ಕುದುರೆ ಏರಿ ಗಸ್ತು ಆರಂಭಿಸಲಿದ್ದಾರೆ ಎಂದು ಹಿಂದೆ ಹೇಳಿದ್ದರು. ಶೀಘ್ರವೇ ಪ್ರಾಯೋಗಿಕವಾಗಿ ಈ ಸೇವೆ ಆರಂಭಿಸಲಾಗುತ್ತದೆ ಎಂದು ಮಾಹಿತಿ ನೀಡಿದ್ದರು.
ಬಿ. ದಯಾನಂದ್ ಮಾತನಾಡಿ, "ಜನದಟ್ಟಣೆ ನಡುವೆ ಅನುಚಿತ ವರ್ತನೆ ತೋರುವ ಹಾಗೂ ಅಪರಾಧ ಕೃತ್ಯಗಳನ್ನು ಎಸಗುವವರ ಮೇಲೆ ಹದ್ದಿನ ಕಣ್ಣಿಡಲು ಅಶ್ವಾರೋಹಿ ಪೊಲೀಸ್ ಗಸ್ತು ಆಯ್ದ ಸ್ಥಳಗಳಲ್ಲಿ ಕಾರ್ಯನಿರ್ವಹಿಸಲಿದೆ" ತಿಳಿಸಿದ್ದರು.
ಬೆಂಗಳೂರು ನಗರದ ಕೆಲವು ರಸ್ತೆಗಳು ಭಾರೀ ಜನ, ವಾಹನ ದಟ್ಟಣೆಯಿಂದ ಕೂಡಿವೆ. ಈ ರಸ್ತೆಗಳಲ್ಲಿ ಹೊಯ್ಸಳ ವಾಹನಗಳ ಮೂಲಕ ಪೊಲೀಸರು ಗಸ್ತು ಮಾಡುವುದು ಅಸಾಧ್ಯ. ಆದ್ದರಿಂದ ಇಂತಹ ಸ್ಥಳಗಳನ್ನು ಆಯ್ಕೆ ಮಾಡಿಕೊಂಡು ಕುದುರೆ ಬಳಕೆ ಮಾಡಿಕೊಂಡು ಗಸ್ತು ತಿರುಗಲಾಗುತ್ತದೆ.
ಮೈಸೂರು ನಗರದಲ್ಲಿ ಈಗಾಗಲೇ ಕುದುರೆ ಮೂಲಕ ಗಸ್ತು ತಿರುಗುವುದು ಜಾರಿಯಲ್ಲಿದೆ. ಇದೇ ಮಾದರಿಯಲ್ಲಿ ಬೆಂಗಳೂರು ನಗರದಲ್ಲಿ ಪ್ರಾಯೋಗಿಕವಾಗಿ ಕೆಲವು ರಸ್ತೆಗಳನ್ನು ಆಯ್ಕೆ ಮಾಡಿಕೊಂಡು ಗಸ್ತು ಆರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ಬೇರೆ ರಸ್ತೆಗಳಿಗೆ ಸಹ ಇದೇ ಮಾದರಿ ಗಸ್ತು ವಿಸ್ತರಣೆ ಮಾಡಲು ಪೊಲೀಸರು ಚಿಂತನೆ ನಡೆಸಿದ್ದಾರೆ.
ಪೊಲೀಸರು ಕಬ್ಬನ್ ಉದ್ಯಾನ, ವಿಧಾನಸೌಧ, ಮೆಜೆಸ್ಟಿಕ್, ಎಂಜಿ ರಸ್ತೆ ಮತ್ತು ಚರ್ಚ್ ಸ್ಟ್ರೀಟ್‌ಗಳಲ್ಲಿ ಪ್ರಾಯೋಗಿಕವಾಗಿ ಅಶ್ವಾರೋಹಿ ಪೊಲೀಸರ ಗಸ್ತು ಆರಂಭಿಸಲಿದ್ದಾರೆ ಎಂಬ ಮಾಹಿತಿ ಇತ್ತು. ಈಗ ಕಬ್ಬನ್ ಪಾರ್ಕ್‌ನಲ್ಲಿ ಈ ಗಸ್ತು ತಿರುಗುವ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ.
ಪೊಲೀಸರು ಕುದುರೆ ಮೂಲಕ ಗಸ್ತು ತಿರುಗುವ ನಿರ್ವಹಣೆ ನೋಡಿಕೊಳ್ಳಲು ಎಸ್‌ಪಿ ದರ್ಜೆಯ ಅಧಿಕಾರಿ ನಿಯೋಜನೆ ಮಾಡಿದ್ದಾರೆ. ಈ ಗಸ್ತು ಮಾಡಲು ಮೈಸೂರಿನಿಂದ ತರಬೇತಿ ಪಡೆದ ಸಿಬ್ಬಂದಿಯನ್ನು ನಗರಕ್ಕೆ ಕರೆಸಲಾಗಿದೆ.
ಕುದುರೆ ಮೇಲೆ ಕುಳಿತು ಗಸ್ತು ತಿರುಗುವ ಪೊಲೀಸರು ಅಪರಾಧ ಪ್ರಕರಣಗಳ ಮೇಲೆ ಕಣ್ಣಿಡಲಿದ್ದಾರೆ. ನಗರದಲ್ಲಿ ಅಪರಾಧ ಪ್ರಕರಣಗಳಿಗೆ ಕಡಿವಾಣ ಹಾಕಲು ಪೊಲೀಸರು ಹಲವಾರು ಕ್ರಮಗಳನ್ನು ಕೈಗೊಂಡಿದ್ದಾರೆ. ಕೆಲವು ಪ್ರದೇಶಗಳಲ್ಲಿ ನಡಿಗೆ ಗಸ್ತು ಸಹ ಆರಂಭಿಸಿದ್ದಾರೆ.












Click it and Unblock the Notifications