ಬೆಂಗಳೂರು: ಸುಲಿಗೆಗೆ ಯತ್ನಿಸಿದ ಇಬ್ಬರು ರೌಡಿಗಳ ಕೊಲೆ

ಮಾಗಡಿ ರಸ್ತೆಯ ತುಂಗಾನಗರ ಬ್ಯಾಡರಹಳ್ಳಿಯಲ್ಲಿ ಶನಿವಾರ ರಾತ್ರಿ ಈ ಘಟನೆ ನಡೆದಿದ್ದು, ರಾಜಗೋಪಾಲನಗರದ ಫಿರೋಜ್ ಬಾಬು ಅಲಿಯಾಸ್ ಮತ್ತಿಬಾಬು (26) ಗಂಗೊಂಡನಹಳ್ಳಿ ನಿವಾಸಿ ಸುರೇಶ್ ಬಾಬು ಅಲಿಯಾಸ್ ಕರುಡ ಸುರೇಶ್ (28) ಕೊಲೆಯಾದವರು.
ತುಂಗಾನಗರದ ಹೆರಿಟೇಜ್ ಕಲ್ಯಾಣ ಮಂಟಪದಲ್ಲಿ ರಾಜಗೋಪಾಲನಗರದ ಯುವಕ ಹಾಗೂ ಅಂದ್ರಹಳ್ಳಿ ಯುವತಿಯ ಜೊತೆ ಮದುವೆ ಸಮಾರಂಭ ನಡೆಯತ್ತಿತ್ತು. ವಧು ಮತ್ತು ವರನ ಕೆಲ ಸಂಬಂಧಿಕರು ಹಾಗೂ ಪರಿಚಿತ ವ್ಯಕ್ತಿಗಳು ಮಂಟಪದ ಕೊಠಡಿಯೊಂದರಲ್ಲಿ ಜೂಜಾಟದಲ್ಲಿ ತೊಡಗಿದ್ದರು. ರಾತ್ರಿ ಎರಡುವರೆ ಗಂಟೆಗೆ ಮತ್ತಿಬಾಬು ಮತ್ತು ಕರುಡ ಸುರೇಶ್ ನೇತೃತ್ವದಲ್ಲಿ ನಾಲ್ಕೈದು ಮಂದಿ ದುಷ್ಕರ್ಮಿಗಳು ಮಾರಕಾಸ್ತ್ರಗಳೊಂದಿಗೆ ಕಲ್ಯಾಣ ಮಂಟಪವನ್ನು ನುಗ್ಗಿದ್ದಾರೆ.
ದುಷ್ಕರ್ಮಿಗಳ ತಂಡ ಆ ಕೊಠಡಿಗೆ ತೆರಳಿ, ಹಣ ನೀಡುವಂತೆ ಮಾರಕಾಸ್ತ್ರಗಳಿಂದ ಬೆದರಿಸಿದೆ. ಆದರೆ, ಅವರು ಹಣ ಕೊಡಲು ಒಪ್ಪದಿದ್ದಾಗ ಪರಸ್ಪರರ ನಡುವೆ ಜಗಳ ಆರಂಭವಾಗಿದೆ. ಪರಿಸ್ಥಿತಿ ವಿಕೋಪಕ್ಕೆ ಹೋಗಿ ಹೊಡೆದಾಡುವ ಮಟ್ಟಕ್ಕೆ ತಿರುಗಿದೆ. ಈ ಸಂದರ್ಭದಲ್ಲಿ ವಧು ಮತ್ತು ವರನ ಕಡೆಯವರು ಮಧ್ಯಪ್ರವೇಶಿಸಿ ಗಲಾಟೆಯನ್ನು ಶಮನ ಮಾಡಲು ಪ್ರಯತ್ನಿಸಿದ್ದಾರೆ.
ಮಂಟಪದಿಂದ ಹೊರ ಬಂದು ದುಷ್ಕರ್ಮಿಗಳು ಕೆಲವರ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಅಲ್ಲಿಂದ ವಧು ಮತ್ತು ವರನ ಕಡೆಯವರು ಕಲ್ಲು ತೂರುವ ಮೂಲಕ ಪ್ರತಿದಾಳಿ ನಡೆಸಿದ್ದಾರೆ. ಮಧುವೆಗೆ ಅಗಮಿಸಿದ ಸಂಬಂಧಿಗಳ ಸಂಖ್ಯೆ ಹೆಚ್ಚಾಗಿ ಕೆಲ ದುಷ್ಕರ್ಮಿಗಳು ತಪ್ಪಿಸಿಕೊಂಡು ಓಡಿದ್ದಾರೆ .
ಈ ಸಂದರ್ಭದಲ್ಲಿ ಪರಾರಿಯಾಗಲು ಯತ್ನಿಸಿದ ಮತ್ತಿಬಾಬು ಮತ್ತು ಸುರೇಶ್ ಅವರನ್ನು ಹಿಡಿದುಕೊಂಡ ಸಂಬಂಧಿಗಳು ಸಿಮೆಂಟ್ ಇಟ್ಟಿಗೆಗಳನ್ನು ಅವರ ತಲೆ ಮೇಲೆ ಎತ್ತಿ ಹಾಕಿದ್ದಾರೆ. ಇಟ್ಟಿಗೆಯ ಹೊಡೆತಕ್ಕೆ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ್ದಾರೆ.[ಅಪಾರ್ಟ್ ಮೆಂಟಿನಲ್ಲಿ ಅಟ್ಟಾಡಿಸಿ ಎಚ್ಆರ್ ಹತ್ಯೆ]
ಘಟನೆ ಸಂಬಂಧವಾಗಿ ವಧುವರನ ಕಡೆಯವರನ್ನು ವಿಚಾರಿಸಲಾಗಿದೆ. ತಾವರೆಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.[ಬೆಂಗಳೂರು: ಮಗಳ ಮೇಲೆ ತಂದೆಯಿಂದಲೇ ಅತ್ಯಾಚಾರ]
ರಾಜಗೋಪಾಲ ನಗರದ ಪೊಲೀಸ್ ಠಾಣೆಯ ರೌಡಿ ಶೀಟರ್‌ಗಳ ಪಟ್ಟಿಯಲ್ಲಿ ಇವರಿಬ್ಬರ ಹೆಸರು ಈ ಹಿಂದೆ ದಾಖಲಾಗಿತ್ತು. ಬಿಜಾಪುರ ಮೂಲದ ಸುರೇಶ್ ನಗರದಲ್ಲಿ ವೆಲ್ಡರ್ ಆಗಿದ್ದರೆ, ಬಾಬು ವಾಹನ ಮಾರಾಟದ ಬ್ರೋಕರ್ ಆಗಿ ಕೆಲಸ ಮಾಡುತ್ತಿದ್ದ.












Click it and Unblock the Notifications