ಬೆಂಗಳೂರಿನ ಶಾಲೆಯಲ್ಲೂ ಹಿಜಾಬ್ ವಿವಾದ: ಶಿಕ್ಷಕಿ ಅಮಾನತು
ಬೆಂಗಳೂರು, ಫೆಬ್ರವರಿ 12: ಕರಾವಳಿಯಲ್ಲಿ ಹೊತ್ತಿಕೊಂಡ ಹಿಜಾಬ್ ವಿವಾದ ಬೆಂಗಳೂರಿಗೂ ಲಗ್ಗೆ ಇಟ್ಟಿದೆ. ಕಾಲೇಜುಗಳಲ್ಲಿ ಮೊದಲು ಕಾಣಿಸಿಕೊಂಡ ಹಿಜಾಬ್ ವಿವಾದ ಪ್ರೌಢಶಾಲೆಗಳಿಗೂ ವ್ಯಾಪಿಸಿದೆ.
ಚಂದ್ರ ಲೇಔಟ್ ವಿದ್ಯಾಸಾಗರ್ ಪಬ್ಲಿಕ್ ಸ್ಕೂಲ್ ಶಿಕ್ಷಕಿಯು ತರಗತಿಯಲ್ಲಿ ಹಿಜಾಬ್ ಧರಿಸುವಂತಿಲ್ಲ ಎಂದು ಶಿಕ್ಷಕಿ ಬೋರ್ಡ್ ಮೇಲೆ ಬರೆದಿರುವುದೇ ಪೋಷಕರ ಆಕ್ರೋಶಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.

ವಿದ್ಯಾಸಾಗರ್ ಪಬ್ಲಿಕ್ ಸ್ಕೂಲ್ ಬಳಿ ವಿದ್ಯಾರ್ಥಿಗಳ ಜೊತೆಗೆ ಪೋಷಕರು ದೌಡಾಯಿಸಿದ್ದು, ಶಾಲೆ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸ್ಥಳಕ್ಕೆ ಬೆಂಗಳೂರು ದಕ್ಷಿಣ ವಿಭಾಗದ ಡಿಡಿಪಿಐ ರಾಜೇಂದ್ರ ಭೇಟಿ ನೀಡಿದ್ದು, ರಾಜಿ ಸಂಧಾನ ನಡೆಸುತ್ತಿದ್ದಾರೆ.ಪರಿಸ್ಥಿತಿ ನಿಯಂತ್ರಿಸಲು ಪೊಲೀಸರ ಹರಸಾಹಸ:
ಬೆಂಗಳೂರು ಚಂದ್ರ ಲೇಔಟ್‌ನಲ್ಲಿರುವ ವಿದ್ಯಾಸಾಗರ್ ಪಬ್ಲಿಕ್ ಶಾಲೆಗೆ ನುಗ್ಗಿದ ಪೋಷಕರು ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಆಡಳಿತ ಮಂಡಳಿ ಮತ್ತು ಪೋಷಕರ ನಡುವಿನ ವಾಗ್ವಾದದಿಂದ ಮತ್ತಷ್ಟು ಗೊಂದಲ ಸೃಷ್ಟಿಯಾಗಿದ್ದು, ಪರಿಸ್ಥಿತಿ ತಿಳಿಗೊಳಿಸುವ ನಿಟ್ಟಿನಲ್ಲಿ ಪೊಲೀಸರು ಚರ್ಚೆ ನಡೆಸುತ್ತಿದ್ದಾರೆ.
ಹಿಜಾಬ್ ಬಗ್ಗೆ ಮಾತನಾಡಿಲ್ಲ ಎಂದ ಶಿಕ್ಷಕಿ:
ಹಿಜಾಬ್ ಧರಿಸದಂತೆ ವಿದ್ಯಾರ್ಥಿಗಳ ಎದುರು ಬೋರ್ಡ್ ಮೇಲೆ ಬರೆದಿದ್ದಾರೆ ಎಂದು ಆರೋಪಿಸಲಾದ ಶಿಕ್ಷಕಿ ಜೊತೆಗೆ ಶಿಕ್ಷಣಾಧಿಕಾರಿ ಬೈಲಾಂಜನಪ್ಪ ಚರ್ಚೆ ನಡೆಸಿದ್ದಾರೆ. "ಶಿಕ್ಷಕಿ ಶಶಿಕಲಾ ಬಳಿ ಘಟನೆ ಕುರಿತು ಮಾಹಿತಿ ಪಡೆದುಕೊಂಡಿದ್ದೇನೆ. ಶಾಲೆಯಲ್ಲಿ ಪಾಠವನ್ನು ಬಿಟ್ಟು ಬೇರೆ ಯಾವ ವಿಷಯದ ಬಗ್ಗೆ ಪ್ರಸ್ತಾಪಿಸಿಲ್ಲ. ಹಿಜಾಬ್ ವಿವಾದದ ಬಗ್ಗೆ ತರಗತಿಯಲ್ಲಿ ಮಾತನಾಡಿಲ್ಲ ಎಂಬುದಾಗಿ ಶಿಕ್ಷಕಿ ತಿಳಿಸಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬೈಲಾಂಜನಪ್ಪ ಸ್ಪಷ್ಟನೆ ನೀಡಿದ್ದಾರೆ.
ವಿದ್ಯಾಸಾಗರ್ ಪಬ್ಲಿಕ್ ಸ್ಕೂಲ್ ಶಿಕ್ಷಕಿ ಶಶಿಕಲಾ ಅಮಾನತು:
ಬೆಂಗಳೂರು ಚಂದ್ರ ಲೇಔಟ್‌ನಲ್ಲಿರುವ ವಿದ್ಯಾಸಾಗರ್ ಪಬ್ಲಿಕ್ ಶಾಲೆಯಲ್ಲಿ ಹಿಜಾಬ್ ಗಲಾಟೆಗೆ ಕಾರಣರಾದರು ಎಂಬ ಆರೋಪದ ಹಿನ್ನೆಲೆ ಶಿಕ್ಷಕಿ ಶಶಿಕಲಾರನ್ನು ಅಮಾನತುಗೊಳಿಸಲಾಗಿದೆ. ಬೋರ್ಡ್ ಮೇಲೆ ಸಾಂಕೇತಿಕ ಬರಹದ ಬಗ್ಗೆ ವಿದ್ಯಾರ್ಥಿಗಳಲ್ಲಿನ ಗೊಂದಲವೇ ಗಲಾಟೆಗೆ ಕಾರಣವಾಗಿದೆ. ಬೋರ್ಡ್ ಮೇಲೆ ಬರೆದ ಬರಹದ ಬಗ್ಗೆ ವಿದ್ಯಾರ್ಥಿಗಳು ಪೋಷಕರಿಗೆ ತಿಳಿಸಿದ್ದು, ಶುಕ್ರವಾರ ಪೋಷಕರ ಆಕ್ರೋಶಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.
ಶಾಂತಿ, ಸಾಮರಸ್ಯ ಕಾಪಾಡಿಕೊಳ್ಳಲು ಸೂಚನೆ:
ರಾಜ್ಯದ ಕಾಲೇಜುಗಳಲ್ಲಿ ಹಿಜಾಬ್ ಮತ್ತು ಕೇಸರಿ ಶಾಲು ಧರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ಆದೇಶವನ್ನು ಪ್ರಕಟಿಸಿದೆ. ಫೆಬ್ರವರಿ 10ರಂದು ಮೌಖಿಕವಾಗಿ ಆದೇಶ ನೀಡಿದ್ದ ಹೈಕೋರ್ಟ್ ಪೂರ್ಣಪೀಠವು ಶುಕ್ರವಾರ ಅಧಿಕೃತವಾಗಿ ಆದೇಶ ಹೊರಡಿಸಿದೆ.
"ನಮ್ಮದು ನಾಗರಿಕ ಸಮಾಜವಾಗಿದ್ದು, ಧರ್ಮ, ಸಂಸ್ಕೃತಿ ಹೆಸರಿನಲ್ಲಿ ಶಾಂತಿ ಮತ್ತು ಸಾಮರಸ್ಯಕ್ಕೆ ಧಕ್ಕೆ ಸರಿಯಲ್ಲ. ಯಾವುದೇ ವ್ಯಕ್ತಿಗಳು ಇಂತಹ ಕೃತ್ಯಗಳನ್ನು ನಡೆಸಲು ಅವಕಾಶವಿರುವುದಿಲ್ಲ. ಪ್ರತಿಭಟನೆಗಳಿಂದ ಶಾಲಾ-ಕಾಲೇಜುಗಳನ್ನು ಬಂದ್ ಮಾಡಬಾರದು. ಶಿಕ್ಷಣ ಸಂಸ್ಥೆಯ ಅನಿರ್ಧಿಷ್ಟ ಬಂದ್ ಸಂತಸದ ಸಂಗತಿಯಲ್ಲ ಎಂದು ಹೈಕೋರ್ಟ್ ತಿಳಿಸಿದೆ.
ಕಾಲೇಜಿನ ತರಗತಿಯೊಳಗೆ ಧರ್ಮದನುಸಾರವಾಗಿ ಸ್ಕಾರ್ಫ್, ಹಿಜಾಬ್, ಶಾಲು ಸೇರಿದಂತೆ ಯಾವುದೇ ಬಾವುಟಗಳನ್ನು ತೆಗೆದುಕೊಂಡು ಹೋಗುವಂತಿಲ್ಲ. ನಾವು ಎಲ್ಲಾ ವಿದ್ಯಾರ್ಥಿಗಳಿಗೂ ನಾವು ನಿರ್ಬಂಧ ಹೇರುತ್ತಿದ್ದೇವೆ. ತುರ್ತು ಅಗತ್ಯತೆ ಆಧಾರದ ಮೇಲೆ ವಿಚಾರಣೆ ನಡೆಸಲಾಗುತ್ತಿದೆ. ವಿದ್ಯಾರ್ಥಿಗಳ ಉನ್ನತ ಶಿಕ್ಷಣ ಪ್ರವೇಶಕ್ಕೆ ಈಗಾಗಲೇ ಸಮಯ ನಿಗದಿಯಾಗಿದೆ. ಈ ಹಂತದಲ್ಲಿ ವಿಳಂಬಧೋರಣೆ ತೋರಿದರೆ ಶಿಕ್ಷಣಕ್ಕೆ ಧಕ್ಕೆ ಆಗಲಿದೆ. ಕರ್ನಾಟಕದಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷ ಇನ್ನೇನೂ ಅಂತ್ಯವಾಗುತ್ತಿದೆ. ಈ ಸಂಬಂಧಪಟ್ಟವರು ಶಾಂತಿ ಮತ್ತು ಸಾಮರಸ್ಯ ಕಾಪಾಡಿಕೊಳ್ಳಬೇಕಿದೆ. ಆದ್ದರಿಂದ ಭವಿಷ್ಯದ ಶಿಕ್ಷಣಕ್ಕೆ ಧಕ್ಕೆ ಆಗದಂತೆ ಕ್ರಮ ತೆಗೆದುಕೊಳ್ಳಬೇಕಿದೆ. ಆದಷ್ಟು ಬೇಗ ಕಾಲೇಜುಗಳನ್ನು ಆರಂಭಿಸಬೇಕು ಎಂದು ಹೈಕೋರ್ಟ್ ತಿಳಿಸಿದೆ.
ಸೋಮವಾರ ಮಧ್ಯಾಹ್ನ 2.30ಕ್ಕೆ ವಿಚಾರಣೆ:
ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಗುರುವಾರ ವಿಚಾರಣೆಯನ್ನು ಆರಂಭಿಸಿರುವ ವಿಸ್ತೃತ ನ್ಯಾಯಪೀಠ, ಹಿಜಾಬ್, ಕೇಸರಿ ಶಾಲು ಸೇರಿದಂತೆ ಯಾವುದೇ ಧರ್ಮವನ್ನು ಸೂಚಿಸುವ ವಸ್ತ್ರವನ್ನು ಧರಿಸಲು ಯಾವ ವಿದ್ಯಾರ್ಥಿ ಮೇಲೂ ಒತ್ತಡ ಹೇರಬಾರದು ಎಂದು ಮೌಖಿಕವಾಗಿ ಹೇಳಿತ್ತು. ಆ ಕುರಿತು ಆದೇಶ ನೀಡುವುದಾಗಿ ಹೇಳಿರುವ ನ್ಯಾಯಪೀಠ ವಿಚಾರಣೆ ಸೋಮವಾರ ಮಧ್ಯಾಹ್ನ 2.30ಕ್ಕೆ ಮುಂದೂಡಿತ್ತು.












Click it and Unblock the Notifications