ಹಿಜಾಬ್ ವಿವಾದ: ಆಂತರಿಕ ಸಮಸ್ಯೆ ಬಗ್ಗೆ ವಿದೇಶಗಳ ಹೇಳಿಕೆ ಸ್ವಾಗತಾರ್ಹವಲ್ಲ ಎಂದ ಎಂಇಎ
ನವದೆಹಲಿ, ಫೆಬ್ರವರಿ 12: ಕರ್ನಾಟಕದಲ್ಲಿ ಹಿಜಾಬ್ ಗದ್ದಲದ ಕುರಿತು ಇತರೆ ರಾಷ್ಟ್ರಗಳ ಕಾಮೆಂಟ್‌ಗಳಿಗೆ ಸಂಬಂಧಿಸಿದಂತೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿಕೆ ಬಿಡುಗಡೆ ಮಾಡಿದ್ದು, 'ನಮ್ಮ ಆಂತರಿಕ ವಿಷಯಗಳ ಕುರಿತು ಪ್ರೇರಿತ ಕಾಮೆಂಟ್‌ಗಳು ಸ್ವಾಗತಾರ್ಹವಲ್ಲ' ಎಂದು ಹೇಳಿದೆ. ಈ ವಿಷಯವು ಕರ್ನಾಟಕ ಹೈಕೋರ್ಟ್‌ನಿಂದ ನ್ಯಾಯಾಂಗ ವಿಚಾರಣೆಯಲ್ಲಿದೆ ಎಂದು ಎಂಇಎ ತಿಳಿಸಿದೆ.
"ಕರ್ನಾಟಕದ ಕೆಲವು ಶಿಕ್ಷಣ ಸಂಸ್ಥೆಗಳಲ್ಲಿ ಡ್ರೆಸ್ ಕೋಡ್‌ಗೆ ಸಂಬಂಧಿಸಿದ ವಿಷಯವು ಕರ್ನಾಟಕದ ಗೌರವಾನ್ವಿತ ಹೈಕೋರ್ಟ್‌ನಿಂದ ನ್ಯಾಯಾಂಗ ವಿಚಾರಣೆಯಲ್ಲಿದೆ. ನಮ್ಮ ಸಾಂವಿಧಾನಿಕ ಚೌಕಟ್ಟು ಮತ್ತು ಕಾರ್ಯವಿಧಾನ, ಹಾಗೆ ನಮ್ಮ ಪ್ರಜಾಸತ್ತಾತ್ಮಕ ನೀತಿ ಮತ್ತು ರಾಜಕೀಯ ಸಮಸ್ಯೆಗಳನ್ನು ಪರಿಗಣಿಸುವ ಮತ್ತು ಪರಿಹರಿಸುವ ಸಂದರ್ಭವಾಗಿದೆ. ಭಾರತದ ಬಗ್ಗೆ ಸರಿಯಾಗಿ ತಿಳಿದುಕೊಂಡವರು ಉತ್ತಮ ಅಭಿಪ್ರಾಯವನ್ನು ಹೊಂದಿರುತ್ತಾರೆ. ನಮ್ಮ ಆಂತರಿಕ ಸಮಸ್ಯೆಗಳ ಕುರಿತು ಪ್ರೇರಿತ ಕಾಮೆಂಟ್‌ಗಳು ಸ್ವಾಗತಾರ್ಹವಲ್ಲ," ಎಂಬ ಹೇಳಿಕೆಯನ್ನು ಎಂಇಎ ವಕ್ತಾರ ಅರಿಂದಮ್ ಬಾಗ್ಚಿ ಟ್ವೀಟ್ ಮಾಡಿದ್ದಾರೆ.
2021ರ ಡಿಸೆಂಬರ್ ಅಂತ್ಯದ ವೇಳೆಗೆ ಕೆಲವು ವಿದ್ಯಾರ್ಥಿಗಳು ಹಿಜಾಬ್ ಧರಿಸಿ ಉಡುಪಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಬರಲು ಪ್ರಾರಂಭಿಸಿದಾಗ ಹಿಜಾಬ್ ಗಲಾಟೆ ಪ್ರಾರಂಭವಾಯಿತು. ಇದನ್ನು ವಿರೋಧಿಸಿ ಮತ್ತೊಂದು ಗುಂಪಿನ ವಿದ್ಯಾರ್ಥಿಗಳು ಕೇಸರಿ ಸ್ಕಾರ್ಫ್ ಧರಿಸಿ ಪ್ರತಿಭಟನೆ ನಡೆಸಿದ್ದರು.

ಹಿಜಾಬ್ ಕುರಿತು ವಿಚಾರಣೆಗೆ ಸುಪ್ರೀಂಕೋರ್ಟ್ ನಿರಾಕರಣೆ:
ರಾಜ್ಯದಲ್ಲಿ ಭುಗಿಲೆದ್ದಿರುವ ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್‌ನ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿತು.
ಮಧ್ಯಂತರ ಆದೇಶ ಪ್ರಕಟಿಸಿದ ಕರ್ನಾಟಕ ಹೈಕೋರ್ಟ್:
ರಾಜ್ಯದ ಕಾಲೇಜುಗಳಲ್ಲಿ ಹಿಜಾಬ್ ಮತ್ತು ಕೇಸರಿ ಶಾಲು ಧರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ಆದೇಶ ಪ್ರಕಟಿಸಿದೆ. ಫೆಬ್ರವರಿ 10ರಂದು ಮೌಖಿಕವಾಗಿ ಆದೇಶ ನೀಡಿದ್ದ ಹೈಕೋರ್ಟ್ ಪೂರ್ಣಪೀಠವು ಶುಕ್ರವಾರ ಅಧಿಕೃತವಾಗಿ ಆದೇಶ ಹೊರಡಿಸಿದೆ.
"ನಮ್ಮದು ನಾಗರಿಕ ಸಮಾಜವಾಗಿದ್ದು, ಧರ್ಮ, ಸಂಸ್ಕೃತಿ ಹೆಸರಿನಲ್ಲಿ ಶಾಂತಿ ಮತ್ತು ಸಾಮರಸ್ಯಕ್ಕೆ ಧಕ್ಕೆ ಸರಿಯಲ್ಲ. ಯಾವುದೇ ವ್ಯಕ್ತಿಗಳು ಇಂತಹ ಕೃತ್ಯಗಳನ್ನು ನಡೆಸಲು ಅವಕಾಶವಿರುವುದಿಲ್ಲ. ಪ್ರತಿಭಟನೆಗಳಿಂದ ಶಾಲಾ-ಕಾಲೇಜುಗಳನ್ನು ಬಂದ್ ಮಾಡಬಾರದು. ಶಿಕ್ಷಣ ಸಂಸ್ಥೆಯ ಅನಿರ್ಧಿಷ್ಟ ಬಂದ್ ಸಂತಸದ ಸಂಗತಿಯಲ್ಲ ಎಂದು ಹೈಕೋರ್ಟ್ ತಿಳಿಸಿದೆ.
ಸೋಮವಾರ ಮಧ್ಯಾಹ್ನ 2.30ಕ್ಕೆ ವಿಚಾರಣೆ:
ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಗುರುವಾರ ವಿಚಾರಣೆಯನ್ನು ಆರಂಭಿಸಿರುವ ವಿಸ್ತೃತ ನ್ಯಾಯಪೀಠ, ಹಿಜಾಬ್, ಕೇಸರಿ ಶಾಲು ಸೇರಿದಂತೆ ಯಾವುದೇ ಧರ್ಮವನ್ನು ಸೂಚಿಸುವ ವಸ್ತ್ರವನ್ನು ಧರಿಸಲು ಯಾವ ವಿದ್ಯಾರ್ಥಿ ಮೇಲೂ ಒತ್ತಡ ಹೇರಬಾರದು ಎಂದು ಮೌಖಿಕವಾಗಿ ಹೇಳಿತ್ತು. ಆ ಕುರಿತು ಆದೇಶ ನೀಡುವುದಾಗಿ ಹೇಳಿರುವ ನ್ಯಾಯಪೀಠ ವಿಚಾರಣೆ ಸೋಮವಾರ ಮಧ್ಯಾಹ್ನ 2.30ಕ್ಕೆ ಮುಂದೂಡಿತ್ತು.












Click it and Unblock the Notifications