'ಹೆಚ್ಚಿನ ಸಂಬಳ ಅನ್ನೋದು ಒಂದು ಟ್ರ್ಯಾಪ್': ಮಹಾನಗರಗಳಲ್ಲಿ ಸುಖವಾಗಿ ಬದುಕಲು ತಿಂಗಳಿಗೆ 1.5-2 ಲಕ್ಷ ರೂ. ಸಾಕು ಎಂದ ಯುವಕ
ಬೆಂಗಳೂರಿನಂತಹ ಮಹಾನಗರಗಳಲ್ಲಿ ನೆಮ್ಮದಿಯ ಜೀವನ ನಡೆಸಲು ನಿಮಗೆ ಎಷ್ಟು ಹಣ ಬೇಕು? ಹೆಚ್ಚಿನ ಸಂಬಳದ ಆಸೆ ನಮ್ಮನ್ನ ಯಾವ ಹಂತಕ್ಕೆ ಕೊಂಡೊಯ್ಯುತ್ತದೆ? ಕಾರ್ಪೊರೇಟ್ ಜಗತ್ತಿನಲ್ಲಿ ಸದಾ ಹೆಚ್ಚಿನ ಪ್ಯಾಕೇಜ್ (CTC) ಮತ್ತು ಪ್ರಮೋಷನ್‌ಗಳ ಬೆನ್ನಟ್ಟಿ ಹೋಗುವವರ ಸಂಖ್ಯೆಯೇ ಹೆಚ್ಚು. ಆದರೆ, ಎಂಬಿಎ ಪದವೀಧರ ಮೋಹಿತ್ ತಲ್ರೇಜಾ ಎಂಬುವವರು ಮಾಡಿರುವ ಇನ್‌ಸ್ಟಾಗ್ರಾಮ್ ವಿಡಿಯೋವೊಂದು ಇದೀಗ ವೃತ್ತಿಜೀವನದ ಮಹತ್ವಾಕಾಂಕ್ಷೆ, ಆರೋಗ್ಯ ಮತ್ತು ವೈಯಕ್ತಿಕ ನೆಮ್ಮದಿಯ ಬಗ್ಗೆ ಹೊಸ ಚರ್ಚೆಯೊಂದನ್ನ ಹುಟ್ಟುಹಾಕಿದೆ.
ನಗರ ಪ್ರದೇಶದಲ್ಲಿ ವಾಸಿಸುವ ವೃತ್ತಿಪರರು ತಿಂಗಳಿಗೆ 1.5 ಲಕ್ಷದಿಂದ 2 ಲಕ್ಷ ರೂಪಾಯಿಗಳವರೆಗೆ ಸಂಪಾದಿಸಿದರೆ ಸಾಕು, ಆ ಬಳಿಕವೂ ಹೆಚ್ಚಿನ ಹಣಕ್ಕಾಗಿ ಓಡುವುದು ಒಂದು ರೀತಿಯ 'ಬಲೆ'(ಟ್ರ್ಯಾಪ್) ಇದ್ದಂತೆ ಎಂದು ಅವರು ಎಚ್ಚರಿಸಿದ್ದಾರೆ.

ಮಹಾನಗರಗಳಲ್ಲಿ ಐಡಿಯಲ್ ವೇತನ
ಮೋಹಿತ್ ಅವರ ಪ್ರಕಾರ, ನಗರ ಪ್ರದೇಶದಲ್ಲಿ ವಾಸಿಸುವ ಉದ್ಯೋಗಿಗಳಿಗೆ ತಮ್ಮ ಆರ್ಥಿಕತೆ ಬಗ್ಗೆ ಸ್ಪಷ್ಟತೆ ಇರಬೇಕು. ಓಟದ ಸ್ಪರ್ಧೆಯಂತೆ ಹಣದ ಹಿಂದೆ ಓಡಬಾರದು. 1.5 ರಿಂದ 2 ಲಕ್ಷ ರೂಪಾಯಿ. ಮಾಸಿಕ ಆದಾಯವು ಮಹಾನಗರಗಳಲ್ಲಿ ಕುಟುಂಬವನ್ನ ಉತ್ತಮವಾಗಿ ನಿರ್ವಹಿಸಲು ಮತ್ತು ಆರಾಮದಾಯಕ ಜೀವನಶೈಲಿಯನ್ನ ಕಾಪಾಡಿಕೊಳ್ಳಲು ಸಾಕಷ್ಟು ಆರ್ಥಿಕ ಭದ್ರತೆಯನ್ನ ಒದಗಿಸುತ್ತದೆ.
ಈ ಹಂತವನ್ನ ತಲುಪಿದ ಬಳಿಕವೂ ವಿಪರೀತವಾಗಿ ದುಡಿಯುವುದು ಹಲವು ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತದೆ.
ಹೆಚ್ಚಿನ ವೇತನದ ಬಲೆ
ತಿಂಗಳಿಗೆ 2 ಲಕ್ಷದ ಗಡಿ ದಾಟಿದ ನಂತರವೂ ಹಣದ ಹಿಂದೆ ಓಡುವುದು ಒಂದು ಟ್ರ್ಯಾಪ್ ಇದ್ದಂತೆ. "ನೀವು ಹೆಚ್ಚಿನ ವೇತನದ ಬೆನ್ನೇರಿದಷ್ಟೂ, ವೃತ್ತಿಯಲ್ಲಿ ಮೇಲೇರಲು ಬಯಸಿದಷ್ಟೂ ಹೆಚ್ಚು ತ್ಯಾಗಗಳನ್ನ ಮಾಡಬೇಕಾಗುತ್ತದೆ. ಇದರಿಂದ ನಿಮ್ಮ ವೈಯಕ್ತಿಕ ಜೀವನ, ಆರೋಗ್ಯ ಮತ್ತು ಕುಟುಂಬಕ್ಕೆ ಕೊಡಬೇಕಾದ ಸಮಯ ಕೈತಪ್ಪಿ ಹೋಗುತ್ತದೆ " ಎಂದು ಮೋಹಿತ್ ಎಚ್ಚರಿಸಿದ್ದಾರೆ.
ಕೇವಲ ಹಣಕ್ಕಾಗಿ ನಿಮ್ಮ ಅಮೂಲ್ಯ ಸಮಯವನ್ನ ಮಾರಿಕೊಳ್ಳುವುದು ಹೆಚ್ಚು ದಿನ ನೆಮ್ಮದಿ ನೀಡುವುದಿಲ್ಲ.
ವೃತ್ತಿಜೀವನದಲ್ಲಿ ವರ್ಕ್ ಲೈಫ್ ಬ್ಯಾಲೆನ್ಸ್ ಕಂಡುಕೊಳ್ಳುವುದು ಹೇಗೆ?
ವೃತ್ತಿಜೀವನವನ್ನ ಎರಡು ಹಂತಗಳಾಗಿ ವಿಂಗಡಿಸಲು ಮೋಹಿತ್ ಸಲಹೆ ನೀಡುತ್ತಾರೆ. ಮೊದಲನೇ ಹಂತದಲ್ಲಿ, ನಿಮ್ಮ ಗುರಿಯಾಗಿರುವ 1.5 ರಿಂದ 2 ಲಕ್ಷ ರೂಪಾಯಿ ಸಂಬಳದ ಮಿತಿಯನ್ನ ಆದಷ್ಟು ಬೇಗ ತಲುಪಲು ಕಷ್ಟಪಟ್ಟು ಶ್ರಮಿಸಿ.
ಒಮ್ಮೆ ಈ ಆರ್ಥಿಕ ಭದ್ರತೆ ಸಿಕ್ಕ ನಂತರ , ನಿಮ್ಮ ವೃತ್ತಿಜೀವನವನ್ನ ಅದರ ಪಾಡಿಗೆ ಸಹಜ ಗತಿಯಲ್ಲಿ ಸಾಗಲು ಬಿಡಿ. ಎರಡನೇ ಹಂತದಲ್ಲಿ ಹಣದ ಹಿಂದೆ ಓಡುವ ಬದಲು, ನಿಮ್ಮ ಗಮನವನ್ನು ಆರೋಗ್ಯ , ಕುಟುಂಬ ಮತ್ತು ಹೊಸ ಕೌಶಲ್ಯಗಳನ್ನ ಕಲಿಯುವತ್ತ ಹರಿಸಬೇಕು.
ಕೇವಲ ಇನ್ನೊಬ್ಬರನ್ನು ಅಂದರೆ ಕಂಪನಿ ಮಾಲೀಕರನ್ನ ಶ್ರೀಮಂತರನ್ನಾಗಿ ಮಾಡಲು ಹಗಲಿರುಳು ದುಡಿಯುವ ತತ್ವ ದೀರ್ಘಕಾಲದ ತೃಪ್ತಿಯನ್ನ ನೀಡುವುದಿಲ್ಲ. 9-ರಿಂದ-5 ರ ಕಾರ್ಪೊರೇಟ್ ಕೆಲಸದ ಹೊರತಾಗಿಯೂ ಹೊಸತೇನನ್ನಾದರೂ ಕಲಿಯುವುದು ಅಥವಾ ಸ್ವಂತ ಆದಾಯದ ಮೂಲವನ್ನ ಸೃಷ್ಟಿಸಿಕೊಳ್ಳುವುದು ಹೆಚ್ಚು ತೃಪ್ತಿ ನೀಡುತ್ತದೆ . ಯಶಸ್ಸನ್ನ ಕೇವಲ ಕಾರ್ಪೊರೇಟ್ ಹುದ್ದೆಗಳು ಅಥವಾ ಅಪ್ರೈಸಲ್ ಶೇಕಡಾವಾರು ಆಧಾರದ ಮೇಲೆ ಅಳೆಯಬಾರದು ಎಂದು ಮೋಹಿತ್ ಹೇಳಿದ್ದಾರೆ.
ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದ್ದು, ಹಲವು ನೆಟ್ಟಿಗರು ಮೋಹಿತ್ ಅವರ ವಾದವನ್ನು ಬೆಂಬಲಿಸಿದ್ದಾರೆ. "ನಿಜಕ್ಕೂ ಇದೊಂದು ವಾಸ್ತವಿಕ ಮತ್ತು ರಿಫ್ರೆಶ್ ಆಗಿರುವ ದೃಷ್ಟಿಕೋನ" ಎಂದು ಕಮೆಂಟ್ ಮಾಡುವ ಮೂಲಕ ಯುವಕನ ಮಾತಿಗೆ ದನಿಗೂಡಿಸಿದ್ದಾರೆ.


Click it and Unblock the Notifications
