ಬೆಂಗಳೂರಿನಲ್ಲಿ ಜೋರಾದ ಖರ್ಜೂರ ಮಾರಾಟ- ಒಣಹಣ್ಣುಗಳ ವ್ಯಾಪಾರ ಭರ್ಜರಿ..!
ಬೆಂಗಳೂರು ಮಾರ್ಚ್ 30: ಬೆಂಗಳೂರಿನಲ್ಲಿ ರಂಜಾನ್ ಆಚರಣೆ ಜೋರಾಗಿದೆ. ರಂಜಾನ್ ಬಂತು ಅಂದರೆ ಮಾರುಕಟ್ಟೆಯಲ್ಲಿ ಬಗೆ ಬಗೆಯ ಖರ್ಜೂರಗಳು ಕಾಣಿಸತೊಡಗುತ್ತವೆ. ಹೀಗಾಗಿ ಡ್ರೈಫ್ರೂಟ್ಸ್ ವ್ಯಾಪಾರ ಕೂಡ ಭರ್ಜರಿಯಾಗಿದೆ.
ನಿತ್ಯ ಖರ್ಜೂರ ಸೇವಿಸುವುದರಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳು ಇವೆ. ಇದು ದೇಹಕ್ಕೆ ಹೆಚ್ಚಿನ ಶಕ್ತಿ ನೀಡುವುದರಿಂದ ವಿಶೇಷವಾಗಿ ರಂಜಾನ್ ಉಪವಾಸದ ಸಂದರ್ಭದಲ್ಲಿ ಖರ್ಜೂರಕ್ಕೆ ಬೇಡಿಕೆ ಹೆಚ್ಚಾಗಿರುತ್ತದೆ. ಹೀಗಾಗಿ ಈ ಸಂದರ್ಭದಲ್ಲಿ ಬಗೆ ಬಗೆಯ ಖರ್ಜೂರಗಳು ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತದೆ. ಮಾತ್ರವಲ್ಲದೆ ವಿವಿಧ ಒಣಹಣ್ಣುಗಳ ವ್ಯಾಪಾರ ಭರ್ಜರಿಯಾಗಿ ನಡೆಯುತ್ತದೆ. 500 ಕ್ವಿಂಟಲ್‌ಗೂ ಹೆಚ್ಚು ಖರ್ಜೂರ ಮಾರಾಟವಾಗುವ ನಿರೀಕ್ಷೆಯಿದೆ.

ರಂಜಾನ್ ಮಾಸದಲ್ಲಿ ಉಪವಾಸ ವ್ತರ ಆಚರಿಸುವ ಮುಸ್ಲಿಮರು ಹೆಚ್ಚು ಪೌಷ್ಟಿಕಾಂಶ ನೀಡುವ ಒಣ ಹಣ್ಣುಗಳನ್ನು ಸ್ವೀಕರಿಸುವುದರಿಂದ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಬಂದಿದೆ. ನಗರದ ಮಾರುಕಟ್ಟೆಗೆ ಸೌದಿ ಅರೇಬಿಯಾ, ಇರಾನ್, ಜೋರ್ಡಾನ್, ಬಾಗ್ದಾದ್, ಟ್ಯುನಿಷಿಯಾ, ದಕ್ಷಿಣ ಆಫ್ರಿಕಾ ಜೊತೆಗೆ ಈ ಬಾರಿ ಪ್ಯಾಲೆಸ್ತೀನ್‌ನಿಂದಲೂ ಖರ್ಜೂರ ಬಂದಿವೆ.
| ಡ್ರೈಫ್ರೂಟ್ಸ್ | ದರ(ಕೆಜಿ) |
| ಬಾದಾಮಿ | 680 |
| ಅಕ್ರೂಟ್ | 400 |
| ಗೋಡಂಬಿ | 800 |
| ಪಿಸ್ತಾ | 950 |
| ಒಣದ್ರಾಕ್ಷಿ | 280 |
| ಒಣ ಖರ್ಜೂರ | 320 |
ದೇಶ-ವಿದೇಶದ 42ಕ್ಕೂ ಹೆಚ್ಚು ತರಹೇವಾರಿ ಖರ್ಜೂರ, ಸುಕ್ರಿ, ಕಲ್ಮೀ, ಮರಿಯಮ್, ಅಜೂವಾ, ಮಬರೂಮ್, ಅಸ್ವಾದಿ ಚಾಕೋಲೇಟ್ ಹಾಗೂ ಮೆಡ್ವಾಲ್ ಖರ್ಜೂರಕ್ಕೆ ಬೇಡಿಕೆ ಹೆಚ್ಚಿದೆ. ಕೆಜಿ ಕನಿಷ್ಠ 100 ರಿಂದ ಗರಿಷ್ಠ 1600 ವರೆಗೆ ಮಾರಾಟ ಆಗುತ್ತಿವೆ.

ಎಲ್ಲಾ ಧರ್ಮೀಯರೂ ಮಾರುಕಟ್ಟೆಗೆ ಬಂದು ಬಗೆಬಗೆಯ ಖರ್ಜೂರ ಖರೀದಿಸುತ್ತಿದ್ದಾರೆ. ಈ ಬಾರಿ 500 ಕ್ವಿಂಟಲ್‌ಗೂ ಹೆಚ್ಚು ಖರ್ಜೂರ ಮಾರಾಟವಾಗುವ ನಿರೀಕ್ಷೆಯಲ್ಲಿದ್ದೇವೆ. ಅವರ ಜೊತೆಗೆ ಅಂಜೂರ ಸೇರಿದಂತೆ ಇತರ ಒಣಹಣ್ಣುಗಳೂ ಹೆಚ್ಚು ಖರೀದಿ ಆಗುತ್ತಿವೆ ಎಂದು ವ್ಯಾಪಾರಿಗಳು ಹೇಳಿದರು.
ಇಸ್ರೇಲ್ ಖರ್ಜೂರಕ್ಕಿಲ್ಲ ಮಾರುಕಟ್ಟೆ:
ರಸೆಲ್ ಮಾರುಕಟ್ಟೆ ವ್ಯಾಪಾರಿಗಳ ಸಂಘದ ಕಾರ್ಯದರ್ಶಿ ಮಹ್ಮದ್ ಇದ್ರಿಸ್ ಚೌಧರಿ ಮಾತನಾಡಿ, ಖರ್ಜೂರ ಮಾರಾಟ ಜೋರಾಗಿದೆ. ಇಸ್ರೇಲ್ ಖರ್ಜೂರ ವಹಿವಾಟು ಮಾಡಲು ವ್ಯಾಪಾರಸ್ಥರಿಗೆ ಆಸಕ್ತಿ ಇಲ್ಲ. ಚಿಕ್ಕಮಕ್ಕಳು ಯುದ್ಧದಲ್ಲಿ ಕೊಲ್ಲಲ್ಪಡುತ್ತಿದ್ದಾರೆ. ಹೀಗಾಗಿ ಮುಸ್ಲಿಂ ದೇಶಗಳು ಇಸ್ರೇಲ್‌ನಲ್ಲಿ ಹೆಚ್ಚಾಗಿ ಬೆಳೆಯುವ ಮೆಡ್ಜೋಲ್ ಬ್ರ್ಯಾಂಡ್‌ನ ಖರ್ಜೂರ ಖರೀದಿಸುತ್ತಿಲ್ಲ. ಮುಸ್ಲಿಂ ದೇಶಗಳಿಮದಲೇ ಖರ್ಜೂರ ಬರುವುದರಿಂದ ಸಮ್ಮಲ್ಲಿನ ಮಾರುಕಟ್ಟೆಗಳಿಗೂ ಇಸ್ರೇಲ್ ಖರ್ಜೂರ ಬಂದಿಲ್ಲ ಎಂದರು.
ಖರ್ಜೂರ ಆರೋಗ್ಯ ಪ್ರಯೋಜನಗಳು:
ಖರ್ಜೂರವು ಫೈಬರ್, ಪೊಟ್ಯಾಸಿಯಮ್ ಮತ್ತು ಉತ್ಕರ್ಷಣ ನಿರೋಧಕಗಳಿಂದ ಕೂಡಿದೆ. ಇದೊಂದು ಡ್ರೈಫ್ರೂಟ್ಸ್ ಆಗಿದ್ದು, ನಿಮಗೆ ಸಕ್ಕರೆಭರಿತ ಆಹಾರ ತಿನ್ನಲು ಇಷ್ಟವಿಲ್ಲದಿದ್ದರೆ, ನೈಸರ್ಗಿಕ ಸಿಹಿತಿಂಡಿಗಾಗಿ ನೀವು ಖರ್ಜೂರವನ್ನು ತಿನ್ನಬಹುದು. ಇದರ ಸೇವನೆ ಆರೋಗ್ಯಕ್ಕೆ ಉತ್ತಮವಾಗಿದ್ದು, ದೇಹಕ್ಕೆ ಸಾಕಷ್ಟು ಶಕ್ತಿಯನ್ನು ನೀಡುತ್ತದೆ. ಖರ್ಜೂರವು ಕಬ್ಬಿಣ ಮತ್ತು ಮೆಗ್ನೀಸಿಯಮ್‌ನಂತಹ ವಿಟಮಿನ್‌ಗಳು ಮತ್ತು ಖನಿಜಗಳ ಉತ್ತಮ ಮೂಲವಾಗಿದೆ. ಇದು ಮೂಳೆ ಆರೋಗ್ಯ, ಮಲಬದ್ಧತೆ ನಿವಾರಣೆ, ಮೆದುಳಿನ ಆರೋಗ್ಯ, ತೂಕ ಇಳಿಸಲು, ಹೃದಯದ ಆರೋಗ್ಯಕ್ಕೂ ಖರ್ಜೂರ ಸಹಕಾರಿಯಾಗಿದೆ.












Click it and Unblock the Notifications