ಚುನಾವಣಾ ಸಮಯದಲ್ಲಿ ಭಜರಂಗದಳಕ್ಕೆ ದೊಡ್ಡ ಗೆಲುವು: ಭರತ್ ಕುಮಾರ್ ಗಡಿಪಾರು ಆದೇಶ ರದ್ದು
ಬೆಂಗಳೂರು, ಏಪ್ರಿಲ್ 07: ದಕ್ಷಿಣ ಕನ್ನಡ ಜಿಲ್ಲೆಯ ಭಜರಂಗ ದಳ ಮುಖಂಡ ಭರತ್ ಕುಮಾರ್ ಅವರನ್ನು ದಕ್ಷಿಣ ಕನ್ನಡ ಜಿಲ್ಲೆಯಿಂದ ಮೈಸೂರಿಗೆ ಗಡಿಪಾರು ಮಾಡಿ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿದೆ. ಹಾಗಾಗಿ ಭರತ್ ಕುಮಾರ್ ದಕ್ಷಿಣ ಕನ್ನಡ ಜಿಲ್ಲೆ ಪ್ರವೇಶ ಸುಲಭವಾಗಿದೆ.ಇದು ಚುನಾವಣಾ ಸಮಯದಲ್ಲಿ ಭಜರಂಗದಳಕ್ಕೆ ದೊಡ್ಡ ಗೆಲುವಾಗಿದೆ.
35 ವರ್ಷದ ಭರತ್ ಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಪುರಸ್ಕರಿಸಿದೆ. ಅರ್ಜಿ ಮಾನ್ಯ ಮಾಡಿದ ನ್ಯಾಯಾಲಯ, ಮಂಗಳೂರು ಉಪ ವಿಭಾಗಾಧಿಕಾರಿ ಎಸ್.ಜೆ.ಹರ್ಷವರ್ಧನ್; ಕರ್ನಾಟಕ ಪೊಲೀಸ್ ಕಾಯ್ದೆ-1963ರ ಕಲಂ 55 ಮತ್ತು 56ರ ಅಡಿಯಲ್ಲಿ ತಮ್ಮ ಅರೆನ್ಯಾಯಿಕ ಪ್ರಕ್ರಿಯೆಯಲ್ಲಿನ ಅಧಿಕಾರ ಚಲಾಯಿಸಿ ಇದೇ 2ರಂದು ಹೊರಡಿಸಿದ್ದ ಗಡಿಪಾರು ಆದೇಶವನ್ನು ರದ್ದುಗೊಳಿಸಿದ್ದಾರೆ.

ಕಾನೂನು ಬಾಹಿರ ಕ್ರಮ
ಅರ್ಜಿದಾರರ ಪರ ವಾದ ಮಂಡಿಸಿದ ಹೈಕೋರ್ಟ್ ಹಿರಿಯ ವಕೀಲರು "ಭರತ್ ಕುಮಾರ್ ತಮ್ಮ ವಿರುದ್ಧ ಇದ್ದ ಎಂಟು ಕ್ರಿಮಿನಲ್ ಪ್ರಕರಣಗಳಲ್ಲಿ ಈಗಾಗಲೇ ಆರು ಪ್ರಕರಣಗಳಲ್ಲಿ ಖುಲಾಸೆಗೊಂಡಿದ್ದಾರೆ. ಒಂದು ಪ್ರಕರಣದಲ್ಲಿ ನ್ಯಾಯಾಲಯದ ತಡೆ ಆದೇಶ ಇದ್ದು ಇನ್ನೊಂದು ವಿಚಾರಣೆ ಹಂತದಲ್ಲಿದೆ. ಹೀಗಿರುವಾಗ ಮಂಗಳೂರು ಉಪ ವಿಭಾಗಾಧಿಕಾರಿ ಹೊರಡಿಸಿರುವ ಗಡಿಪಾರು ಆದೇಶ ಊಹೆಗಳಿಂದ ಕೂಡಿದೆ. ಭರತ್ ಕುಮಾರ್ ಅಪರಾಧಿಕ ಪ್ರಕರಣಗಳಲ್ಲಿ ಭಾಗಿಯಾಗಬಹುದು ಎಂಬ ಶಂಕೆ ಕಾನೂನು ಬಾಹಿರ. ಆದ್ದರಿಂದ, ಗಡಿಪಾರು ಆದೇಶ ರದ್ದುಪಡಿಸಬೇಕು" ಎಂದು ಪ್ರತಿಪಾದಿಸಿದರು.
ಪ್ರಕರಣದ ಹಿನ್ನೆಲೆ ಏನು..?
ಭರತ್ ಕುಮಾರ್ ಬಂಟ್ವಾಳ ತಾಲೂಕು ಪುದು ಗ್ರಾಮದ ಕುಮ್ಡೇಲು ಮನೆ ನಿವಾಸಿಯಾಗಿದ್ದು ಈತ ರೌಡಿ ಸ್ವಭಾವ ಹೊಂದಿರುತ್ತಾನೆ. ತನ್ನ ಸಹಚರರೊಂದಿಗೆ ಪರಂಗಿಪೇಟೆ, ಕಡೆಗೋಳಿ, ಬಿ.ಸಿ.ರೋಡ್ ಹಾಗೂ ಬಂಟ್ವಾಳ ಪ್ರದೇಶಗಳಲ್ಲಿ ಕೊಲೆ, ಕೊಲೆ ಯತ್ನ, ದೊಂಬಿ, ಹಲ್ಲೆಯಂತಹ ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. 2024ರ ಮಾರ್ಚ್ ಮತ್ತು ಮೇ ಮಧ್ಯದಲ್ಲಿ ಲೋಕಸಭೆಗೆ ಸಾರ್ವತ್ರಿಕ ಚುನಾವಣೆಗಳು ನಡೆಯುತ್ತಿದ್ದು ಈ ಸಮಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದು ಅಗತ್ಯ ಇರುತ್ತದೆ. ಈ ದೃಷ್ಟಿಯಿಂದ ಈತನನ್ನು 2024ರ ಮಾರ್ಚ್ 28ರಿಂದ 2024ರಿಂದ ಜಾರಿಗೆ ಬರುವಂತೆ ಜೂನ್ 30ರವರೆಗೆ ಗಡಿಪಾರು ಮಾಡಲಾಗಿದೆ" ಎಂದು ಆದೇಶಿಸಿದ್ದರು.












Click it and Unblock the Notifications