BS Yeddyurappa: ಬಿಎಸ್‌ವೈ ವಿರುದ್ಧದ ಡಿನೋಟಿಫಿಕೇಷನ್ ಪ್ರಕರಣ ರದ್ದು ಮಾಡಿದ ಹೈಕೋರ್ಟ್
ಬೆಂಗಳೂರು, ಜೂನ್ 7: ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ವಿರುದ್ಧದ ಭೂ ಡಿನೋಟಿಫಿಕೇಷನ್ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ರದ್ದುಪಡಿಸಿದೆ. 2015ರಲ್ಲಿ ಲೋಕಾಯುಕ್ತ ಪೊಲೀಸರಿಗೆ ಈ ಪ್ರಕರಣ ಸಂಬಂಧ ದೂರು ನೀಡಲಾಗಿತ್ತು.
ಸಿಎಜಿ ವರದಿ ಆಧರಿಸಿ 15 ಪಕ್ರರಣಗಳನ್ನು ಹೈಕೋರ್ಟ್ ರದ್ದು ಮಾಡಿತ್ತು. ಹಿಂದಿನ ತೀರ್ಪನ್ನು ಆಧರಿಸಿ ಹೈಕೋರ್ಟ್ 19 ಡಿಸೆಂಬರ್ 2015ರ ಪ್ರಕರಣವನ್ನು ರದ್ದು ಮಾಡಿದ್ದು, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ರಿಲೀಫ್ ಸಿಕ್ಕಂತಾಗಿದೆ.

ಭಾರತದ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (ಸಿಎಜಿ) ವರದಿಯ ಆಧಾರದ ಮೇಲೆ ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ಅನ್ನು ರದ್ದುಗೊಳಿಸುವಂತೆ ಕೋರಿ ಮಾಜಿ ಸಿಎಂ ಮಾಡಿದ ಮನವಿಯ ಮೇರೆಗೆ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು ಈ ಆದೇಶ ನೀಡಿದ್ದಾರೆ.
2015ರಲ್ಲಿ ನ್ಯಾಯಾಲಯದ ಸಮನ್ವಯ ಪೀಠವು ಕ್ರಿಮಿನಲ್ ಪ್ರಕರಣಕ್ಕೆ ಸಿಎಜಿ ವರದಿ ಆಧಾರವಾಗಲು ಸಾಧ್ಯವಿಲ್ಲ ಮತ್ತು ಸಿಎಜಿ ತನಿಖೆಯಲ್ಲಿ ಭಾಗಿಯಾಗಲು ಸಾಧ್ಯವಿಲ್ಲ ಎಂದು ತೀರ್ಪು ನೀಡಿದ್ದು, 2015 ರಲ್ಲಿ ನ್ಯಾಯಾಲಯದ ಸಮನ್ವಯ ಪೀಠವು ಈಗಾಗಲೇ ಆರೋಪಗಳನ್ನು ಪರಿಹರಿಸಿದೆ ಎಂದು ಯಡಿಯೂರಪ್ಪ ಪರ ವಕೀಲ ಸಂದೀಪ್ ಎಸ್ ಪಾಟೀಲ್ ನ್ಯಾಯಾಲಯಕ್ಕೆ ತಿಳಿಸಿದರು.
ಕರ್ನಾಟಕ ರಾಜ್ಯದ ಪರ ವಕೀಲರಾದ ಬಿ.ಎಸ್.ಪ್ರಸಾದ್ ಮತ್ತು ಕೆ.ಪಿ.ಯಶೋಧ ವಾದ ಮಂಡಿಸಿದರು. ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಎಚ್ ಶಾಂತಿ ಭೂಷಣ್ ಸಿಎಜಿ ಪರವಾಗಿ ವಾದ ಮಂಡಿಸಿದರು.
ಏನಿದು ಪ್ರಕರಣ?
ಬಿಎಸ್ ಯಡಿಯೂರಪ್ಪನವರು 2006-07ರ ಅವಧಿಯಲ್ಲಿ ಉಪಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕಾನೂನಿಗೆ ವಿರುದ್ಧವಾಗಿ ಬೆಳ್ಳಂದೂರು ಮತ್ತು ದೇವರಬೀಸನಹಳ್ಳಿ ಗ್ರಾಮಗಳಲ್ಲಿ ಎಂಟು ಎಕರೆ ಹತ್ತು ಗುಂಟೆ ಜಮೀನನ್ನು ಡಿನೋಟಿಫೈ ಮಾಡಿದ್ದಾರೆ ಎಂದು ಆರೋಪಿಸಿ ವಾಸುದೇವ ರೆಡ್ಡಿ ಎನ್ನುವವರು 2013ರಲ್ಲಿ ನ್ಯಾಯಾಲಯದಲ್ಲಿ ಖಾಸಗಿಯಾಗಿ ದೂರು ನೀಡಿದ್ದರು.
ಕೋರ್ಟ್ ಆದೇಶ ನೀಡಿದ ಬಳಿಕ 2015ರ ಫೆಬ್ರವರಿ 21ರಂದು ಲೋಕಾಯುಕ್ತ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದ್ದರು, ಆದರೆ ತನಿಖೆಯಲ್ಲಿ ಯಾವುದೇ ಪ್ರಗತಿ ಕಂಡು ಬರದ ಕಾರಣ ಪ್ರಕರಣ ರದ್ದು ಮಾಡಬೇಕೆಂದು ಬಿಎಸ್ ಯಡಿಯೂರಪ್ಪ ಹೈಕೋರ್ಟ್‌ಗೆ ಮನವಿ ಮಾಡಿ ಅರ್ಜಿ ಸಲ್ಲಿಸಿದ್ದರು.
2020ರಲ್ಲಿ ಹೈಕೋರ್ಟ್ ಬಿಎಸ್‌ವೈ ಸಲ್ಲಿಸಿದ್ದ ಅರ್ಜಿಯನ್ನ ವಜಾ ಮಾಡಿದ್ದಲ್ಲದೆ, ತನಿಖೆಯನ್ನು ಸಮರ್ಪಕವಾಗಿ ನಡೆಸದ ಪೊಲೀಸರನ್ನು ಹೈಕೋರ್ಟ್ ನ್ಯಾಯಮೂರ್ತಿ ಜಾನ್ ಮೈಕಲ್ ಕುನ್ಹಾ ಅವರು ತರಾಟೆಗೆ ತೆಗೆದುಕೊಂಡಿದ್ದರು. ಉದ್ದೇಶಪೂರ್ವಕವಾಗಿ ತನಿಖೆಯನ್ನು ನಿಧಾನವಾಗಿ ಮಾಡಲಾಗುತ್ತಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದರು.












Click it and Unblock the Notifications