ಏಕಾಏಕಿ 'ನಮ್ಮ ಮೆಟ್ರೋ' ಬಂದ್ ನಡೆಯುತ್ತಿರುವುದೇಕೆ?
ಬೆಂಗಳೂರು, ಜುಲೈ 7: ಬೆಂಗಳೂರಿನ ಹೆಮ್ಮೆಯ ನಮ್ಮ ಮೆಟ್ರೋಕ್ಕೆ ಇಂದು ಗ್ರಹಣದ ದಿನ! ಮೆಟ್ರೋ ನಂಬಿಕೊಂಡು ನಸುಕಿನಲ್ಲಿ, ನಿದ್ದೆಗಣ್ಣಿನಲ್ಲೇ ಹೊರಟಿದ್ದ ಪ್ರಯಾಣಿಕರನ್ನು ಇಂದು ಸ್ವಾಗತಿಸಿದ್ದು ಮುಚ್ಚಿದ ಮೆಟ್ರೋ ನಿಲ್ದಾಣದ ಬಾಗಿಲುಗಳು!
ಅಷ್ಟಕ್ಕೂ ಯಾವ ಮುನ್ಸೂಚನೆಯನ್ನೂ ನೀಡದೆ, ಏಕಾಏಕಿ ಮೆಟ್ರೋ ಬಂದ್ ಆಗಿದ್ದೇಕೆ? ಇಲ್ಲಿದೆ ವಿವರ.
ಜುಲೈ 6, ಗುರುವಾರದಂದು ಬೆಳಗ್ಗೆ ಮೆಜೆಸ್ಟಿಕ್ ಬಳಿಯ ಪರ್ಪಲ್ ಲೈನ್ ಮೆಟ್ರೋದ ಸರ್ ಎಂ.ವಿಶ್ವೇಶ್ವರಯ್ಯ ಸೆಂಟ್ರಲ್ ಕಾಲೇಜ್ ಮೆಟ್ರೋ ಸ್ಟೇಶನ್ನಿನಲ್ಲಿ ತಾಂತ್ರಿಕ ಕಾರಣಗಳಿಂದಾಗಿ ಲೋಹ ಶೋಧಕ ಯಂತ್ರದ ಕಾರ್ಯ ನಿಂತಿತ್ತು. ಇದರಿಂದಾಗಿ ಕರ್ನಾಟಕ ರಾಜ್ಯ ಕೈಗಾರಿಕಾ ಪಡೆ ಸಿಬ್ಬಂದಿಗಳು((ಕೆಎಸ್ ಐಎಸ್ ಎಫ್)) ಪ್ರಯಾಣಿಕರನ್ನು ತಾವೇ ತಪಾಸಣೆ ಮಾಡಿ ಕಳಿಸುತ್ತಿದ್ದರು. ಈ ಸಂದರ್ಭದಲ್ಲಿ ಬಿಎಂಆರ್ ಸಿಎಲ್ ಸಿಬ್ಬಂದಿ ರಾಕೇಶ್ ಎನ್ನುವವರೂ ಮೆಟ್ರೋ ನಿಲ್ದಾಣಕ್ಕೆ ಬಂದಿದ್ದಾರೆ.
ಆದರೆ ತಾವು ಮೆಟ್ರೋ ಸಿಬ್ಬಂದಿ ಎಂದಿರುವ ರಾಕೇಶ್, ತಪಾಸಣೆಗೆ ಒಪ್ಪದೆ ಹಾಗೆಯೇ ಒಳ ಹೋಗಿದ್ದಾರೆ. ಅದೇ ಸಮಯದಲ್ಲೇ ಲೋಹ ಶೋಧಕ ಯಂತ್ರವೂ ಸರಿಹೋಗಿದೆ. ತಕ್ಷಣವೇ ರಾಕೇಶ್ ಅವರನ್ನು ವಾಪಾಸ್ ಕರೆಸಿ, ಅವರ ಬ್ಯಾಗ್ ಅನ್ನು ಯಂತ್ರದಲ್ಲಿಟ್ಟು ತಪಾಸಣೆಗೊಳಪಡಿಸುವಂತೆ ಹೇಳಿದ್ದಾರೆ. ಇದಕ್ಕೆ ರಾಕೇಶ್ ಒಪ್ಪದಿದ್ದಾಗ ಮಾತಿನ ಚಕಮಕಿ ನಡೆದು, ಕೈಗಾರಿಕಾ ಪಡೆ ಭದ್ರತಾ ಸಿಬ್ಬಂದಿ, ರಾಕೇಶ್ ಗೆ ಕಪಾಳ ಮೋಕ್ಷ ಮಾಡಿದ್ದಾರೆ.

ಆರಂಭವಾಯ್ತು ಗಲಾಟೆ!
ಅತ್ತ ಕೈಗಾರಿಕಾ ಪಡೆ ಸಿಬ್ಬಂದಿ ರಾಕೇಶ್ ಅವರಿಗೆ ಕಪಾಳಮೋಕ್ಷ ಮಾಡಿ, ಗುದ್ದಿದ ಸುದ್ದಿ ಕೇಳುತ್ತಿದ್ದಂತೆಯೇ ಮೆಟ್ರೋ ಸಿಬ್ಬಂದಿಗಳೆಲ್ಲ ಒಟ್ಟಾಗಿ ಕೈಗಾರಿಕಾ ಪಡೆ ಸಿಬ್ಬಂದಿ ಜೊತೆ ಜಗಳ ಆರಂಭಿಸಿದ್ದಾರೆ. ನಂತರ ಮೆಟ್ರೋ ನಿಲ್ದಾಣದಿಂದ ಆಚೆ ಹೋಗಿದ್ದ ರಾಕೇಶ್, ಒಂದಷ್ಟು ಜನರ ಗುಂಪು ಕಟ್ಟಿಕೊಂಡು ಬಂದು ಮತ್ತೆ ಜಗಳ ಆರಂಭಿಸಿದ್ದಾರೆ. ಈ ಸಂದರ್ಭದಲ್ಲಿ ರಾಕೇಶ್ ಮತ್ತವರ ಗುಂಪು ಒಬ್ಬ ಮಹಿಳಾ ಸಿಬ್ಬಂದಿ ಸೇರಿದಂತೆ ಮೂವರು ಕೈಗಾರಿಕಾ ಪಡೆ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ.

ಮುಷ್ಕರಕ್ಕೆ ಕಾರಣ ಮೆಟ್ರೋ ಸಿಬ್ಬಂದಿಯ ಬಂಧನ
ಜಗಳ ಅತಿರೇಕಕ್ಕೆ ಹೋಗುತ್ತಿದ್ದಂತೆಯೇ ಹಲಸೂರು ಪೊಲೀಸ್ ಠಾಣೆಯಲ್ಲಿ ಕೆಎಸ್ ಐಎಸ್ಎಫ್ ಸಿಬ್ಬಂದಿ, ನಮ್ಮ ಮೆಟ್ರೋ ಸಿಬ್ಬಂದಿಗಳ ವಿರುದ್ಧ ದೂರು ನೀಡಿದ್ದರು. ದೂರಿನನ್ವಯ ರಾಕೇಶ್ ಸೇರಿದಂತೆ ಹಲವು ಬಿಎಂಆರ್ ಸಿ ಎಲ್ ಸಿಬ್ಬಂದಿಗಳನ್ನು ಪೊಲೀಸರು ಬಂಧಿಸಿದ್ದು, ಇವರನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಯುತ್ತಿದೆ. ಈ ಕಾರಣಕ್ಕಾಗಿಯೇ ಮೆಟ್ರೋ ಬಂದ್ ಆಗಿದೆ.

ಸಿಸಿಟಿವಿ ಕ್ಯಾಮೆರಾ ಪರಿಶೀಲನೆ
ಘಟನೆಗೆ ಸಂಬಂಧಿಸಿದ ದೃಶ್ಯಗಳು ಮೆಟ್ರೋ ನಿಲ್ದಾಣದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದು, ಇವನ್ನು ಪೊಲಿಸರು ಪರಿಶೀಲನೆ ನಡೆಸುತ್ತಿದ್ದಾರೆ.ಘಟನೆಗೆ ಸಂಬಂಧಿಸಿದಂತೆ ಬಿಎಂಆರ್ ಸಿಎಲ್ ಮತ್ತು ಕೈಗಾರಿಕಾ ಪಡೆ ಸಿಬ್ಬಂದಿ (ಕೆಎಸ್ ಐಎಸ್ ಎಫ್) ಇಬ್ಬರ ಕಡೆಯಿಂದಲೂ ದೂರು ದಾಖಲಾಗಿದ್ದು, ಇಬ್ಬರು ಕೆಎಸ್ ಐಎಸ್ ಎಫ್ ಸಿಬ್ಬಂದಿಗಳನ್ನೂ ಬಂಧಿಸಲಾಗಿದೆ.

ವಸಂತ ರಾವ್ ಏನಂತಾರೆ?
ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಬಿಎಂಆರ್ ಸಿಎಲ್ ನ ಸಾರ್ವಜನಿಕ ಸಂಪರ್ಕಾಧಿಕಾರಿ ಯು.ಎ. ವಸಂತ ರಾವ್, 'ಮೆಟ್ರೋ ಸಿಬ್ಬಂದಿಗಳೆಲ್ಲ ತಮ್ಮ ಸಹೋದ್ಯೋಗಿಗಳನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಅವರನ್ನು ಬಿಡುಗಡೆಗೊಳಿಸುವವರೆಗೂ ಕೆಲಸಕ್ಕೆ ಹಾಜರಾಗುವುದಿಲ್ಲ ಎನ್ನುತ್ತಿದ್ದಾರೆ. ನಾವು ಈ ಸಮಸ್ಯೆಗೆ ಆದಷ್ಟು ಶೀಘ್ರ ಪರಿಹಾರ ಕಂಡುಕೊಳ್ಳುತ್ತೇವೆ. ರೈಲ್ವೇ ಸೇವೆಯನ್ನು ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗೆ ಆರಂಭಿಸಲು ಪ್ರಯತ್ನಿಸುತ್ತೇವೆ' ಎಂದಿದ್ದಾರೆ.












Click it and Unblock the Notifications