ಬಿಬಿಎಂಪಿ ಮೇಯರ್ ಸ್ಥಾನಕ್ಕೆ ತೀವ್ರ ಲಾಬಿ
ಬೆಂಗಳೂರು, ಸೆ.2 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮೇಯರ್ ಮತ್ತು ಉಪ ಮೇಯರ್ ಪಟ್ಟಕ್ಕಾಗಿ ತೀವ್ರ ಲಾಬಿ ಆರಂಭವಾಗಿದೆ. ಸೆ.5ರಂದು ನೂತನ ಮೇಯರ್ ಆಯ್ಕೆಯಾಗಿ ಚುನಾವಣೆ ನಡೆಯಲಿದೆ.
ಸೋಮವಾರ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ನಡೆದ ಕೋರ್ ಕಮಿಟಿ ಸಭೆಯಲ್ಲಿಯೂ ಮೇಯರ್ ಆಯ್ಕೆ ಬಗ್ಗೆ ಚರ್ಚೆ ನಡೆಯಿತು. ಆದರೆ, ಯಾವುದೇ ನಿರ್ಧಾರವನ್ನು ಕೈಗೊಂಡಿಲ್ಲ. ಬಿಜೆಪಿ ಈ ಬಾರಿ ಯುವಕರಿಗೆ ಆದ್ಯತೆ ನೀಡಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ.

ಜೆ.ಪಿ.ಪಾರ್ಕ್ ಬಿಬಿಎಂಪಿ ಸದಸ್ಯರಾದ ನಂಜುಡಪ್ಪ ಅವರ ಹೆಸರು ಮೇಯರ್ ಹುದ್ದೆಗೆ ಪ್ರಬಲವಾಗಿ ಕೇಳಿಬರುತ್ತಿದೆ. ಇವರು ಒಕ್ಕಲಿಗ ಜನಾಂಗಕ್ಕೆ ಸೇರಿದವರು ಎಂದು ಕೆಲವು ಬಿಬಿಎಂಪಿ ಸದಸ್ಯರು ಮತ್ತು ಶಾಸಕರು ಲಾಬಿ ಆರಂಭಿಸಿದ್ದಾರೆ. ಮೂಡಲಪಾಳ್ಯ ವಾರ್ಡ್‌ನ ಶಾಂತ ಕುಮಾರಿ ಅವರ ಹೆಸರು ಮೇಯರ್ ಪಟ್ಟಕ್ಕೆ ಕೇಳಿಬರುತ್ತಿದೆ. [ಸೆ.5ರಂದು ಬಿಬಿಎಂಪಿಗೆ ಹೊಸ ಮೇಯರ್]
ಬಿಬಿಎಂಪಿಯ ಮೇಯರ್ ಮತ್ತು ಉಪ ಮೇಯರ್ ಪಟ್ಟವನ್ನು ಈ ಬಾರಿ ಸಾಮಾನ್ಯ ವರ್ಗಕ್ಕೆ ಮೀಸಲಾಗಿಡಲಾಗಿದ್ದು, ಎರಡು ಹುದ್ದೆಗಳಿಗೆ ಭಾರೀ ಲಾಬಿ ಆರಂಭವಾಗಿದೆ. ಹಾಲಿ ಮೇಯರ್ ಆಗಿರುವ ಕಟ್ಟೆ ಸತ್ಯನಾರಾಯಣ ಮತ್ತು ಉಪ ಮೇಯರ್ ಇಂದಿರಾ ಅವರ ಅವಧಿ ಸೆ.3ರಂದು ಕೊನೆಗೊಳ್ಳಲಿದೆ.
ಮಹಾನಗರ ಪಾಲಿಕೆಯ ಕೌನ್ಸಿಲ್‌ನ ಕೊನೆಯ ಅವಧಿ ಇದಾಗಿದ್ದು, 2015ರ ಏಪ್ರಿಲ್‌ನಲ್ಲಿ ಮತ್ತೆ ಪಾಲಿಕೆಗೆ ಚುನಾವಣೆ ನಡೆಯಲಿದೆ. ಆದ್ದರಿಂದ ಆಯ್ಕೆಯಾಗುವ ಮೇಯರ್ ಮತ್ತು ಉಪ ಮೇಯರ್ ಅಧಿಕಾರಾವಧಿ ಆರು ತಿಂಗಳಾಗಿರುತ್ತದೆ. [ಮೇಯರ್, ಉಪ ಮೇಯರ್ ಪಟ್ಟಕ್ಕೆ ಪೈಪೋಟಿ]
ಉಪ ಮೇಯರ್ ಹುದ್ದೆಯು ಸಹ ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವುದರಿಂದ ಮೇಯರ್ ಪಟ್ಟ ಕೈ ತಪ್ಪಿದರೂ ಉಪ ಮೇಯರ್ ಹುದ್ದೆ ಸಿಗಬಹುದು ಎಂದು ಸದಸ್ಯರು ಲಾಬಿ ಆರಂಭಿಸಿದ್ದಾರೆ. ಡಾ.ರಾಜ್‌ಕುಮಾರ್ ವಾರ್ಡ್‌ನ ಗಂಗಭೈರಯ್ಯ, ಬನಶಂಕರಿ ದೇವಸ್ಥಾನದ ಎ.ಎಚ್. ಬಸವರಾಜು, ವಿಜಯನಗರದ ಎಚ್.ರವೀಂದ್ರ ಮತ್ತು ಪಟ್ಟಾಭಿರಾಮನಗರದ ಸಿ.ಕೆ. ರಾಮಮೂರ್ತಿ ಅವರ ಹೆಸರುಗಳು ಮೇಯರ್ ರೇಸ್‌ನಲ್ಲಿ ಕೇಳಿಬರುತ್ತಿವೆ.
ಮೇಯರ್ ಪಟ್ಟಕ್ಕೆ ಪ್ರತಿ ಬಾರಿಯು ದಕ್ಷಿಣ ವಲಯದ ಸದಸ್ಯರನ್ನು ಆಯ್ಕೆ ಮಾಡಲಾಗುತ್ತದೆ. ಆದ್ದರಿಂದ ಈ ಬಾರಿ ಬೇರೆ ವಲಯಗಳಿಗೆ ಆದ್ಯತೆ ನೀಡಬೇಕು ಎಂಬ ಮಾತು ಕೇಳಿಬರುತ್ತಿದೆ. ಮಂಗಳವಾರ ಅಥವ ಬುಧವಾರ ಮೇಯರ್ ಗೌನ್ ಧರಿಸುವವರು ಯಾರು? ಎಂಬ ಪ್ರಶ್ನೆಗೆ ಉತ್ತರ ದೊರೆಯಲಿದೆ.












Click it and Unblock the Notifications