ಹೆಬ್ಬಾಳದಿಂದ ಸಿಲ್ಕ್ ಬೋರ್ಡ್ ಮಾರ್ಗದಲ್ಲಿ ಸಂಚರಿಸಲಿವೆ ಡಬಲ್ ಡೆಕ್ಕರ್ ಎಲೆಕ್ಟ್ರಿಕ್ ಬಸ್ಸುಗಳು- ಟಿಕೆಟ್ ದರ, ಅಂಕಿಅಂಶ,ಮಾಹಿತಿ
ಮುಂದಿನ ತಿಂಗಳು ಡಬಲ್ ಡೆಕ್ಕರ್ ಎಲೆಕ್ಟ್ರಿಕ್ ಬಸ್‌ಗಳು ಬೆಂಗಳೂರಿನ ರಸ್ತೆಗಳಿಗೆ ಇಳಿಯಲಿವೆ. ಮೊದಲ ಐದು ಎಲೆಕ್ಟ್ರಿಕ್ ಬಸ್‌ಗಳು ಹೆಬ್ಬಾಳ- ಸಿಲ್ಕ್ ಬೋರ್ಡ್ ಮಾರ್ಗದಲ್ಲಿ ಸಂಚರಿಸಲಿವೆ. ಇವುಗಳ ಟಿಕೆಟ್ ದರ, ಆಸನ ಸಾಮರ್ಥ್ಯ, ಅಂಕಿಅಂಶ, ಮಾಹಿತಿ ತಿಳಿಯಿರಿ
ಬೆಂಗಳೂರು, ಫೆಬ್ರವರಿ 20: ಬೆಂಗಳೂರಿನ ಮೊದಲ ಎಸಿ ಡಬಲ್ ಡೆಕ್ಕರ್ ಎಲೆಕ್ಟ್ರಿಕ್ ಬಸ್‌ಗಾಗಿ ಪ್ರಯಾಣಿಕರು ಕುತೂಹಲದಿಂದ ಕಾಯುತ್ತಿದ್ದಾರೆ. ಈ ಬಸ್ಸುಗಳು ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಲಿವೆ. ಮುಂದಿನ ತಿಂಗಳು ಡಬಲ್ ಡೆಕ್ಕರ್ ಎಲೆಕ್ಟ್ರಿಕ್ ಬಸ್‌ಗಳು ಬೆಂಗಳೂರಿನ ರಸ್ತೆಗಳಿಗೆ ಇಳಿಯಲಿವೆ ಎಂದು ಬಿಎಂಟಿಸಿ ಮಾಹಿತಿ ನೀಡಿದೆ.

ಡೀಸೆಲ್ ಬಸ್‌ಗಳ ಬದಲು ಇ ಬಸ್‌ಗಳು
ಮುಂಬರುವ ತಿಂಗಳುಗಳಲ್ಲಿ ಬೆಂಗಳೂರಿನ ಎಲ್ಲಾ ಡೀಸೆಲ್ ಬಸ್‌ಗಳನ್ನು EV ಗಳೊಂದಿಗೆ ಬದಲಾಯಿಸುವ ಗುರಿಯನ್ನು BMTC ಹೊಂದಿದೆ. ಇದರ ಸಲುವಾಗಿ ಬೆಂಗಳೂರು ಮಹಾನಗರದಲ್ಲಿ ಎಲೆಕ್ಟ್ರಿಕ್ ಬಸ್‌ಗಳ ಸಂಖ್ಯೆಯನ್ನು ಹೆಚ್ಚಿಸಲಿದೆ. ಎಲೆಕ್ಟ್ರಿಕ್ ಬಸ್‌ಗಳ ಹಲವಾರು ಉತ್ಪಾದಕ ಕಂಪನಿಗಳಿಗೆ ಬಿಎಂಟಿಸಿ ಒಪ್ಪಂದ ಮಾಡಿಕೊಂಡಿದೆ. ಮಾರ್ಚ್‌ನಲ್ಲಿ ಬಸ್ ಸೇವೆಗಳು ಪ್ರಾರಂಭವಾಗುವ ನಿರೀಕ್ಷೆಯಿದೆ ಎಂದು ಬಿಎಂಟಿಸಿ ತಿಳಿಸಿದೆ.

'ಸ್ವಿಚ್ ಮೊಬಿಲಿಟಿ' ಇಂದ ಐದು ಡಬಲ್ ಡೆಕ್ಕರ್ ಇ ಬಸ್
ಅಶೋಕ್ ಲೇಲ್ಯಾಂಡ್ ಕಂಪನಿಯ ಇವಿ ಅಂಗಸಂಸ್ಥೆಯಾದ 'ಸ್ವಿಚ್ ಮೊಬಿಲಿಟಿ' ಐದು ಡಬಲ್ ಡೆಕ್ಕರ್ ಎಸಿ ಇ-ಬಸ್‌ಗಳ ಹರಾಜು ಪ್ರಕ್ರಿಯೆಯಲ್ಲಿ 10 ಕೋಟಿ ರೂ.ಗಳ ಬೆಲೆಯಲ್ಲಿ ಬಸ್‌ಗಳನ್ನು ಮಾಡಿಕೊಡುವುದಾಗಿ ತಿಳಿಸಿದೆ. ಈ ಕುರಿತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ) ಮೂಲಗಳು ತಿಳಿಸಿವೆ. ಬಿಡ್‌ಗೆ ಅರ್ಜಿ ಸಲ್ಲಿಸಲು ಗುರುವಾರ ಕೊನೆಯ ದಿನಾಂಕವಾಗಿತ್ತು.

ಮುಂಬೈನಲ್ಲಿ ಭಾರತದ ಮೊದಲ ಇ ಡಬಲ್ ಡೆಕ್ಕರ್
'Switch EiV 22, ಭಾರತದ ಮೊದಲ ಎಲೆಕ್ಟ್ರಿಕ್ ಎಸಿ ಡಬಲ್-ಡೆಕ್ಕರ್ ಬಸ್ ಅನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಗಿದೆ. ಮುಂಬೈನ 'ಬೆಸ್ಟ್' ಸಂಸ್ಥೆಯು ಈಗಾಗಲೇ 200 ಎಲೆಕ್ಟ್ರಿಕ್ ಡಬಲ್ ಡೆಕ್ಕರ್‌ಗಳಿಗೆ ಆರ್ಡರ್ ಮಾಡಿದೆ. ಅಂತಹ 22 ಬಸ್‌ಗಳ ಮೊದಲ ಸೆಟ್ ಈಗ ಕಾರ್ಯನಿರ್ವಹಿಸುತ್ತಿದೆ. ಚುನಾವಣಾ ನೀತಿ ಸಂಹಿತೆ ಪ್ರಾರಂಭವಾಗುವ ಮೊದಲು ಎಸಿ ಡಬಲ್ ಡೆಕ್ಕರ್ ಇ-ಬಸ್ ಅನ್ನು ಹೊರತರುವುದು ನಮ್ಮ ಯೋಜನೆಯಾಗಿದೆ.' ಎಂದು ಬಿಎಂಟಿಸಿ ಮೂಲಗಳು ತಿಳಿಸಿವೆ.

ಹೆಬ್ಬಾಳ-ಸಿಲ್ಕ್ ಬೋರ್ಡ್ ಮಾರ್ಗದಲ್ಲಿ ಮೊದಲ ಇ ಬಸ್
ಈ ಕುರಿತು 'ಟೈಮ್ಸ್ ಆಫ್ ಇಂಡಿಯಾ' ಪತ್ರಿಕೆಗೆ ಮಾತನಾಡಿರುವ BMTC ನಿರ್ದೇಶಕ ಸೂರ್ಯ ಸೇನ್, 'ನಾವು ಮಾರ್ಚ್ ವೇಳೆಗೆ ಮೊದಲ ಎಸಿ ಡಬಲ್ ಡೆಕ್ಕರ್ ಎಲೆಕ್ಟ್ರಿಕ್ ಬಸ್ ಮತ್ತು ಏಪ್ರಿಲ್-ಮೇ ವೇಳೆಗೆ ಉಳಿದ ನಾಲ್ಕನ್ನು ಪಡೆಯಬಹುದು. ನಾವು ಹೆಬ್ಬಾಳ-ಸಿಲ್ಕ್ ಬೋರ್ಡ್‌ನಲ್ಲಿ ಕಾರ್ಯನಿರ್ವಹಿಸಲು ಯೋಚಿಸುತ್ತಿದ್ದೇವೆ. ಈ ಮೂಲಕ ನಿಯಮಿತ ಪ್ರಯಾಣಿಕರ ಸೇವೆ ನೀಡಲಿದ್ದೇವೆ. ವಜ್ರ (ವೋಲ್ವೋ ಎಸಿ) ದರದಂತೆಯೇ ಡಬಲ್ ಡೆಕ್ಕರ್ ಇ ಬಸ್‌ಗಳ ಟಿಕೆಟ್ ದರವಿರುತ್ತದೆ' ಎಂದು ಮಾಹಿತಿ ನೀಡಿದ್ದಾರೆ. ಇತ್ತೀಚೆಗೆ, DULT ನಿಧಿಯನ್ನು ಬಳಸಿಕೊಂಡು ಐದು ಡಬಲ್ ಡೆಕ್ಕರ್ AC ಇ-ಬಸ್‌ಗಳನ್ನು ಸ್ವಾಧೀನಪಡಿಸಿಕೊಳ್ಳಲು BMTC ಈ ಟೆಂಡರ್ ಅನ್ನು ನೀಡಿದೆ.

65 ಮಂದಿ ಕುಳಿತುಕೊಳ್ಳವ ಸಾಮರ್ಥ್ಯ
ಭಾರತದಲ್ಲಿ ತಯಾರಿಸಲಾದ ಸ್ವಿಚ್‌ನ ಎಲೆಕ್ಟ್ರಿಕ್ ಎಸಿ ಡಬಲ್ ಡೆಕ್ಕರ್ ಬಸ್‌ಗಳ ಬ್ಯಾಟರಿ ಅವಧಿಯನ್ನು 250 ಕಿಲೋಮೀಟರ್‌ಗಳವರೆಗೆ ನಿಗದಿ ಮಾಡಲಾಗಿದೆ. ವಿಶಾಲವಾದ ಮುಂಭಾಗ ಮತ್ತು ಹಿಂಭಾಗದ ಬಾಗಿಲುಗಳು, ಎರಡು ಮೆಟ್ಟಿಲುಗಳು ಮತ್ತು ತುರ್ತು ಪ್ರವೇಶದ್ವಾರವು EiV 22 ಇ-ಬಸ್‌ನ ಎಲ್ಲಾ ಅಂಶಗಳಾಗಿವೆ. 65 ಮಂದಿ ಕುಳಿತುಕೊಳ್ಳಲು ಇದು ಸಾಕಾಗುತ್ತದೆ.

ಡಬಲ್ ಡೆಕ್ಕರ್ ಟಿಕೆಟ್ ದರ
ಮೊದಲ ಡಬಲ್ ಡೆಕ್ಕರ್‌ಗಳನ್ನು ಹೆಬ್ಬಾಳ-ಸಿಲ್ಕ್ ಬೋರ್ಡ್ ಮಾರ್ಗದಲ್ಲಿ ಸಾಮಾನ್ಯ ಪ್ರಯಾಣಿಕರ ಸೇವೆಗಾಗಿ ಬಳಸಲಾಗುವುದು. ದರವು ವಜ್ರ (ವೋಲ್ವೋ ಎಸಿ) ದರದಂತೆಯೇ ಇರುತ್ತದೆ. ಇದರ ಮಾಸಿಕ ಸದಸ್ಯತ್ವದ ಬೆಲೆ ₹1,800, ದೈನಂದಿನ ವಜ್ರ ಪಾಸ್ ಬೆಲೆ ₹120 ಆಗಿದೆ.

80 ನಿಮಿಷಗಳಲ್ಲಿ ಚಾರ್ಜ್
ಎಲೆಕ್ಟ್ರಿಕ್ ಡಬಲ್ ಡೆಕ್ಕರ್ ಬಸ್ 65 ಆಸನ ಸಾಮರ್ಥ್ಯವನ್ನು ಹೊಂದಿದೆ. ಇದು ಸಿಸಿಟಿವಿ ಕ್ಯಾಮೆರಾಗಳು ಮತ್ತು ಸ್ವಯಂಚಾಲಿತ ಬಾಗಿಲುಗಳನ್ನು ಹೊಂದಿದೆ. ಇದನ್ನು 80 ನಿಮಿಷಗಳಲ್ಲಿ ಚಾರ್ಜ್ ಮಾಡಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ) 75 ಎಲೆಕ್ಟ್ರಿಕ್ ಬಸ್‌ಗಳಿಗೆ ಕಳೆದ ಆಗಷ್ಟ್‌ನಲ್ಲಿ ಚಾಲನೆ ನೀಡಿದರು.












Click it and Unblock the Notifications