ಪೀಣ್ಯ ಫ್ಲೈ ಓವರ್ ಬಂದ್; ವಾಹನ ಸವಾರರಿಗೆ ಸಂಚಾರ ದಟ್ಟಣೆ ಬಿಸಿ
ಬೆಂಗಳೂರು, ಡಿಸೆಂಬರ್ 26; ಬೆಂಗಳೂರು ನಗರದ ಪೀಣ್ಯ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ರಾಷ್ಟ್ರೀಯ ಹೆದ್ದಾರಿ 4ರ ಎಲಿವೇಟೆಡ್ ಹೈವೇಯಲ್ಲಿ ವಾಹನ ಸಂಚಾರ ಬಂದ್ ಮಾಡಲಾಗಿದೆ. ಇದರಿಂದಾಗಿ ವಾಹನ ಸವಾರರಿಗೆ ಸಂಚಾರ ದಟ್ಟಣೆ ಬಿಸಿ ತಟ್ಟಿದೆ.
ಬೆಂಗಳೂರು ನಗರ ಸಂಚಾರಿ ಪೊಲೀಸರು ಡಾ. ಶಿವಕುಮಾರ ಸ್ವಾಮೀಜಿ ಮೇಲ್ಸೇತುವೆಯನ್ನು ಒಂದು ವಾರದ ಮಟ್ಟಿಗೆ ಬಂದ್ ಮಾಡಿ ಆದೇಶ ಹೊರಡಿಸಿದ್ದಾರೆ. ಬೆಂಗಳೂರು-ತುಮಕೂರು ರಸ್ತೆ ಹೆಚ್ಚು ವಾಹನ ಸಂಚಾರ ದಟ್ಟಣೆಯಿಂದ ಕೂಡಿದ್ದು, ಫ್ಲೈ ಓವರ್ ಬಂದ್ ಆಗಿದ್ದರಿಂದ ಟ್ರಾಫಿಕ್ ಜಾಮ್ ಉಂಟಾಗಿದೆ.
ಪೀಣ್ಯ ಎಲಿವೇಟೆಡ್ ಹೈವೇ (ಡಾ. ಶಿವಕುಮಾರ ಸ್ವಾಮೀಜಿ ಮೇಲ್ಸೇತುವೆ)ಯ ಪಿಲ್ಲರ್ ನಂ 102 ಮತ್ತು 103ರ ಮಧ್ಯೆ 8ನೇ ಮೈಲಿಯ ಸ್ವಾತಿ ಪೆಟ್ರೋಲ್ ಬಂಕ್ ಬಳಿ ಫ್ಲೈ ಓವರ್‌ಗೆ ಅಳವಡಿಸಿರುವ ಕೇಬಲ್ ತುರ್ತಾಗಿ ದುರಸ್ಥಿ ಮಾಡಬೇಕಿದೆ.

ಭಾನುವಾರದಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್‌ಎಐ) ಅಧಿಕಾರಿಗಳು ದುರಸ್ಥಿ ಕಾರ್ಯ ಕೈಗೊಂಡಿದ್ದಾರೆ. ಆದ್ದರಿಂದ ಒಂದು ವಾರದ ಮಟ್ಟಿಗೆ ಫ್ಲೈ ಓವರ್ ಮೇಲೆ ವಾಹನ ಸಂಚಾರ ನಿಷೇಧಿಸಿ ಸಂಚಾರಿ ಪೊಲೀಸರು ಆದೇಶ ಹೊರಡಿಸಿದ್ದಾರೆ.
ಒಂದು ವಾರದ ಮಟ್ಟಿಗೆ ಪೀಣ್ಯ ಫ್ಲೈ ಓವರ್ ಮೇಲೆ ವಾಹನಗಳ ಸಂಚಾರವನ್ನು ಸಂಪೂರ್ಣ ನಿಷೇಧಿಸಲಾಗಿದೆ. ಇದರಿಂದಾಗಿ ಬೆಂಗಳೂರು-ತುಮಕೂರು ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಗಿದೆ. ಸಂಚಾರ ಪೊಲೀಸರು ಬದಲಿ ಮಾರ್ಗವನ್ನು ಬಳಕೆ ಮಾಡುವಂತೆ ಈಗಾಗಲೇ ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
* ತುಮಕೂರು ಕಡೆಯಿಂದ ಬೆಂಗಳೂರು ನಗರದೊಳಗೆ ಪ್ರವೇಶಿಸುವ ವಾಹನಗಳು ಮಾದಾವರದ ಬಳಿ ಬಲತಿರುವು ಪಡೆದು ನೈಸ್ ರಸ್ತೆಯ ಮೂಲಕ ಬೆಂಗಳೂರು ನಗರಕ್ಕೆ ಪ್ರವೇಶಿಸಬಹುದಾಗಿದೆ.
* ಬೆಂಗಳೂರು ನಗರದ ಕಡೆಯಿಂದ ತುಮಕೂರು ರಸ್ತೆಯ ಮುಖಾಂತರ ಹೊರ ಹೋಗುವ ವಾಹನಗಳು ಗೊರಗುಂಟೆಪಾಳ್ಯದ ಸಿ.ಎಂ.ಟಿ.ಐ ಜಂಕ್ಷನ್‌ನಲ್ಲಿ ಎಡತಿರುವು ಪಡೆದು ರಿಂಗ್ ರಸ್ತೆ ಮೂಲಕ ಸುಮನಹಳ್ಳಿ, ಮಾಗಡಿ ರಸ್ತೆ ಕಡೆ ಸಂಚರಿಸಿ ನೈಸ್ ರಸ್ತೆ ಪ್ರವೇಶಿಸಿ ಬೆಂಗಳೂರಿನಿಂದ ಹೊರ ಹೋಗಬಹುದಾಗಿದೆ.
ಶನಿವಾರ ಸಂಜೆ ರಸ್ತೆ ನಿರ್ವಹಣೆ ಮಾಡುತ್ತಿದ್ದಾಗ ಸ್ಪ್ಯಾಬ್ ಬಿಗಿಗೊಳಿಸುವ ಕೇಬಲ್ ಸಡಿಲವಾಗಿರುವುದು ಪತ್ತೆಯಾಗಿತ್ತು. ತಕ್ಷಣವೇ ಫ್ಲೈ ಓವರ್ ಮೇಲೆ ಎರಡೂ ಕಡೆಯ ಸಂಚಾರ ಸ್ಥಗಿತಗೊಳಿಸಲಾಯಿತು ಮತ್ತು ಬೆಂಗಳೂರು ನಗರ ಸಂಚಾರಿ ಪೊಲೀಸರು ಒಂದು ವಾರಗಳ ಕಾಲ ವಾಹನ ಸಂಚಾರ ನಿಷೇಧಿಸಿದರು.
10 ವರ್ಷದ ಹಿಂದೆ ನಿರ್ಮಾಣ ಮಾಡಲಾದ ಈ ಫ್ಲೈ ಓವರ್‌ಗೆ ಡಾ. ಶಿವಕುಮಾರ ಸ್ವಾಮೀಜಿ ಮೇಲ್ಸೇತುವೆ ಎಂದು ಹೆಸರಿಡಲಾಗಿದೆ. ಈ ಫ್ಲೈ ಓವರ್‌ನಲ್ಲಿ ಒಟ್ಟು 116 ಪಿಲ್ಲರ್‌ಗಳಿವೆ. 102 ಮತ್ತು 103ನೇ ಪಿಲ್ಲರ್ ನಡುವೆ ಕೇಬಲ್ ಸಡಿಲಗೊಂಡಿದೆ.
ಫ್ಲೆ ಓವರ್ ಒಂದು ವಾರದ ಮಟ್ಟಿಗೆ ಬಂದ್ ಆಗಿರುವುದರಿಂದ ವಾಹನ ಸವಾರರು ಕೆಳ ರಸ್ತೆಯಲ್ಲಿ ಸಂಚಾರ ನಡೆಸುವುದು ಅನಿವಾರ್ಯವಾಗಿದೆ. ಇದರಿಂದಾಗಿ ಬೆಂಗಳೂರು-ತುಮಕೂರು ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಗಿದೆ.












Click it and Unblock the Notifications