ಮುನ್ಸೂಚನೆ :ಇನ್ನೆರಡು ದಿನ ಬಿರುಗಾಳಿ ಮಳೆ ಸಾಧ್ಯತೆ
ಬೆಂಗಳೂರು, ಜೂ.1: ನಗರದ ವಿವಿಧೆಡೆ ಕಳೆದ ರಾತ್ರಿ ಸುರಿದ ಬಿರುಗಾಳಿ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಹಲವೆದೆ ಸಂಚಾರ, ವಿದ್ಯುತ್ ಪೂರೈಕೆ ವ್ಯತ್ಯಯ ಕಂಡು ಬಂದಿದೆ. ಟ್ರಾಫಿಕ್ ದಟ್ಟಣೆ ನಿವಾರಿಸಿ ಸುಗಮ ಸಂಚಾರ ಕಲ್ಪಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.
ರಾಜ್ಯದ ಹಲವೆಡೆ ಕೂಡಾ ವ್ಯಾಪಕ ಮಳೆ ಸುರಿದಿದೆ. ಜೂ. 3 ರ ತನಕ ಬಿರುಗಾಳಿ ಸಹಿತ ಮಳೆ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ನಿರ್ದೇಶಕ ಬಿ.ಪುಟ್ಟಣ್ಣ ಹೇಳಿದ್ದಾರೆ.
ಜಯನಗರ, ತಿಪ್ಪಸಂದ್ರ, ಚನ್ನಸಂದ್ರ ಸೇರಿದಂತೆ ವಿವಿಧೆಡೆ 13 ಮರಗಳು ಧರೆಗುರುಳಿದ್ದು ಸಂಚಾರಕ್ಕೆ ವ್ಯತ್ಯಯವಾಯಿತು. ಜಯನಗರದಲ್ಲಿ 2 ಮರ, ಕಂಠೀರವ ಕ್ರೀಡಾಂಗಣದ ಬಳಿ 1, ಎನ್.ಆರ್.ಕಾಲೋನಿ 5ನೇ ಕ್ರಾಸ್ 1, ತಿಪ್ಪಸಂದ್ರ 1, ಮಲ್ಲೇಶ್ವರ 18ನೇ ಕ್ರಾಸ್ 1, ಗಾಂಧಿನಗರ 1, ಜಾಲಹಳ್ಳಿ ಶಾರದಾಂಬಾ ನಗರದಲ್ಲಿ 1 ಕೆ.ಜಿ. ರಸ್ತೆಯಲ್ಲಿ 1 ಮರ ಬಿದ್ದಿದೆ. ಬಾಳೆಕುಂದ್ರಿ ವೃತ್ತದಲ್ಲಿ ಆಟೋ ಮೇಲೆ ಮರ ಬಿದ್ದು, ಆಟೋ ಸಂಪೂರ್ಣ ಜಖಂಗೊಂಡಿದೆ.

ಸಂಚಾರ ದಟ್ಟಣೆ: ಮರ ಬಿದ್ದ ಹಿನ್ನೆಲೆಯ ಲ್ಲಿ ಕೆಲವು ರಸ್ತೆಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು. ರಾತ್ರಿ 9.15ರ ಸುಮಾರಿಗೆ ದಿಢೀರ್ ಭಾರೀ ಗಾಳಿ ಮಳೆ ಸುರಿದಿದೆ. ರಸ್ತೆಯಲ್ಲಿ ನೀರು ನಿಂತ ಪರಿಣಾಮ ನಗರದ ಹಲವೆಡೆ ವಾಹನ ಸಂಚಾರ ನಿಧಾನವಾಗಿತ್ತು. ಮಹದೇವ ಪುರ, ಆನೇಕಲ್, ಜಿಗಣಿ, ರಾಜರಾಜೇಶ್ವರಿ ನಗರ, ಜ್ಞಾನಭಾರತಿ, ಬೊಮ್ಮನಹಳ್ಳಿ ಸೇರಿದಂತೆ ಹಲವೆಡೆ ಸರಾಸರಿ 15-18 ಮಿ.ಮೀ ಮಳೆಯಾಗಿರುವ ವರದಿ ಬಂದಿದೆ.
ಮೆಜೆಸ್ಟಿಕ್, ಕೆ.ಜಿ ರಸ್ತೆ, ಉಪ್ಪಾರಪೇಟೆ, ಓಕಳಿಪುರ, ಮಲ್ಲೇಶ್ವರ, ಕೆ.ಆರ್ ಸರ್ಕಲ್, ಕೋರಮಂಗಲ, ಶಿವಾಜಿನಗರ, ಆಡುಗೋಡಿ, ಕೆ.ಆರ್ ಮಾರ್ಕೆಟ್, ವಿಲ್ಸನ್ ಗಾರ್ಡನ್, ಚಾಮರಾಜಪೇಟೆ, ಮೈಸೂರು ರಸ್ತೆ ಸೇರಿದಂತೆ ಹಲವೆಡೆ ರಸ್ತೆಯಲ್ಲಿ ನೀರು ನಿಂತಿದ್ದರಿಂದ ಟ್ರಾಫಿಕ್ ದಟ್ಟಣೆ ಹೆಚ್ಚಾಗಿತ್ತು.
ರಾಜ್ಯದಲ್ಲಿ ಮಳೆಗೆ ನಾಲ್ವರ ಬಲಿ : ಹಾಸನದ ಹಳೇಬೀಡು ಸಮೀಪದ ದ್ಯಾವಪ್ಪನಹಳ್ಳಿಯಲ್ಲಿ ಮಳೆದಿಂದ ಕಡಿದು ಬಿದ್ದಿದ್ದ ವಿದ್ಯುತ್ ತಂತಿ ಮುಟ್ಟಿದ ಮೋಹನ್, ಗೀತಾ ದಂಪತಿ ಸಾವನ್ನಪ್ಪಿದ್ದಾರೆ. ಚಾಮರಾಜನಗರ ಯಳಂದೂರು ಗ್ರಾಮದ ಗುಂಬಳ್ಳಿಯಲ್ಲಿ ಚಿಕ್ಕಣ್ಣೇಗೌಡ, ಬಳ್ಳಾರಿಯ ಸಂಡೂರಿನ ಕೃಷ್ಣಾನಗರದಲ್ಲಿ ಪಂಪಾವತಿ ಎಂಬುವರು ಸಿಡಿಲಿಗೆ ಬಲಿಯಾಗಿದ್ದಾರೆ.
ರಾಜ್ಯದ ದಕ್ಷಿಣ ಒಳನಾಡಿನ ಕೆಲವೆಡೆ ಹಾಗೂ ಉತ್ತರ ಒಳನಾಡಿನ ಅಲ್ಲಲ್ಲಿ ಮಳೆ ವ್ಯಾಪಕವಾಗಿದ್ದು ಜೂ.3 ರ ತನಕ ಮುಂದುವರೆಯಲಿದೆ. ಕರಾವಳಿಯಲ್ಲಿ ಒಣ ಹವೆ ಮುಂದುವರೆದಿದ್ದು, ಜೂ.3 ರ ವೇಳೆ ಕರಾವಳಿ ಸೇರಿದಂತೆ ರಾಜ್ಯದೆಲ್ಲೆಡೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ನಿರ್ದೇಶಕ ಬಿ. ಪುಟ್ಟಣ್ಣ ಹೇಳಿದ್ದಾರೆ.












Click it and Unblock the Notifications