Heavy Rain In Bengaluru : ಬೆಂಗಳೂರಿನಲ್ಲಿ ತಡರಾತ್ರಿ ವರುಣನ ಅಬ್ಬರ; ತಡೆಗೋಡೆ ಕುಸಿದು ಕಾರು, ಬೈಕ್ ಜಖಂ
ಬೆಂಗಳೂರು, ಅ.20: ಬೆಂಗಳೂರಿನಲ್ಲಿ ಬುಧವಾರ ಸಂಜೆ ಮತ್ತು ರಾತ್ರಿ ಸುರಿದ ಧಾರಾಕಾರ ಮಳೆಗೆ ಸಿಲಿಕಾನ್ ಸಿನಿ ಸ್ತಬ್ಧವಾಗಿದೆ. ಬೆಳ್ಳಂದೂರು ಐಟಿ ವಲಯ ಸೇರಿದಂತೆ ನಗರದ ಪೂರ್ವ, ದಕ್ಷಿಣ ಮತ್ತು ಮಧ್ಯ ಭಾಗದ ಹಲವು ರಸ್ತೆಗಳು ಜಲಾವೃತಗೊಂಡಿವೆ.
ಭಾರಿ ಮಳೆಗೆ ಶೇಷಾದ್ರಿಪುರ ಬಳಿ ಮೆಟ್ರೋ ತಡೆಗೋಡೆ ಕುಸಿದು ಅಲ್ಲಿಯೇ ನಿಲ್ಲಿಸಲಾಗಿದ್ದ ಹಲವು ಕಾರುಗಳು, ಬೈಕ್‌ಗಳು ಜಖಂ ಆಗಿವೆ. ವಾಹನ ಮಾಲೀಕರು ಆತಂಕಕ್ಕೆ ಒಳಗಾಗಿದ್ದಾರೆ. ಸ್ಥಳದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಹವಾಮಾನ ಇಲಾಖೆ ಪ್ರಕಾರ ಬೆಂಗಳೂರಿನ ಉತ್ತರ ಭಾಗದ ರಾಜಮಹಲ್ ಗುಟ್ಟಹಳ್ಳಿಯಲ್ಲಿ 59 ಮಿ.ಮೀ ಮಳೆಯಾಗಿದೆ. ನಗರದಲ್ಲಿ ಹವಾಮಾನ ಇಲಾಖೆಯು ಹಳದಿ ಅಲರ್ಟ್ ಘೋಷಿಸಿದ್ದು, ಭಾರಿ ಮಳೆಯ ಸೂಚನೆ ನೀಡಿದ್ದು, ಮುಂದಿನ ಮೂರು ದಿನಗಳ ಕಾಲ ಭಾರಿ ಮಳೆ ಮುಂದುವರಿಯಲಿದೆ ಎಂದು ತಿಳಿಸಿದೆ.

ಶಿವಾನಂದ ಸರ್ಕಲ್, ವಿಲ್ಸನ್ ಗಾರ್ಡ್, ಶಾಂತಿನಗರ, ರಾಜಾಜಿನಗರ, ಮಲ್ಲೇಶ್ವರಂ, ಡಬಲ್ ರೋಡ್, ಸೌತ್ ಎಂಡ್ ಸರ್ಕಲ್, ಜಯನಗರ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಧಾರಾಕಾರ ಮಳೆಯಾಗಿದ್ದು ರಸ್ತೆಗಳು ಸಂಪೂರ್ಣ ಜಲಾವೃತಗೊಂಡಿದ್ದವು. ರಸ್ತೆ ಮೇಲೆ ನೀರು ನಿಂತು ವಾಹನ ಸವಾರು ಪರದಾಡಬೇಕಾಯಿತು. ಇದರಿಂದ ಭಾರಿ ಟ್ರಾಫಿಕ್ ಜಾಮ್ ಉಂಟಾಗಿತ್ತು.
ತಗ್ಗು ಪ್ರದೇಶಗಳು, ರಸ್ತೆಗಳು, ನೆಲಮಾಳಿಗೆಯ ಪಾರ್ಕಿಂಗ್‌ಗಳು ಜಲಾವೃತವಾಗಿವೆ. ನೀರಿನಲ್ಲಿ ಮುಳುಗಿ ಹಾನಿಗೊಳಗಾದ ವಾಹನಗಳ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡವು. ಸಂಜೆ 7.30 ರ ಸುಮಾರಿಗೆ ಮಳೆ ಪ್ರಾರಂಭವಾದ ಕಾರಣ, ಮನೆಗೆ ಹೋಗುವ ಕಚೇರಿಗೆ ಹೋಗುವವರು ಮೆಟ್ರೋ ನಿಲ್ದಾಣಗಳಲ್ಲಿ ನಿಲ್ಲಬೇಕಾಗಿತ್ತು. ನಂತರ ಕೊಂಡ ಕಾಲ ಬಿಡುವು ಕೊಟ್ಟ ಮಳೆ ಏಕಾಏಕಿ ಮ್ತೆ ಆರ್ಭಟಿಸಲು ಆರಂಭಿಸಿತ್ತು.

ರಾಜಧಾನಿ ಬೆಂಗಳೂರು ಈ ವರ್ಷ ಭಾರಿ ಮಳೆಯ ಎಲ್ಲಾ ದಾಖಲೆಗಳನ್ನು ಮುರಿದಿದೆ. ಮುಂಗಾರು ಪ್ರಾರಂಭವಾದಾಗಿನಿಂದ 1706 ಮಿ.ಮೀ. ಮಳೆ ದಾಖಲಿಸಿದೆ. 2017 ರಲ್ಲಿ,ನಗರದಲ್ಲಿ 1,696 ಮಿಮೀ ಮಳೆಯಾಗಿತ್ತು.












Click it and Unblock the Notifications