Heavy Rain: ಬೆಂಗಳೂರು ನಿವಾಸಿಗಳೇ ಎಚ್ಚರ.. ಇನ್ನೂ ಎರಡು ದಿನ ಕಾಡಲಿದೆ ಮಹಾಮಳೆ!
ಬೆಂಗಳೂರಿನ ನಿವಾಸಿಗಳೇ, ಮಧ್ಯರಾತ್ರಿ ಪೂರ್ತಿ ಸುರಿದಿರುವ ಮಳೆಗೆ ನೀವು ಹೆದರಿದ್ದೀರಾ? ಹಾಗಾದರೆ ಒಂದು ಕ್ಷಣ ಇಲ್ಲಿ ಕೇಳಿ, ನಿನ್ನೆ ಬಿದ್ದ ಮಳೆ ಬರೀ ಸ್ಯಾಂಪಲ್. ಇಂದು ಅಂದ್ರೆ ಮಂಗಳವಾರ ಹಾಗೂ ಬುಧವಾರ ಬೆಂಗಳೂರು ನಗರದಲ್ಲಿ ಭಾರಿ ಮಳೆಯಾಗುವ ಸೂಚನೆ ಸಿಕ್ಕಿದೆ. ಹಾಗಾದರೆ ಬೆಂಗಳೂರಿನ ಯಾವ ಯಾವ ಏರಿಯಾಗಳಲ್ಲಿ ಮಳೆ ಬೀಳಲಿದೆ? ಇದರ ಪರಿಣಾಮ ಹೇಗಿರಲಿದೆ? ಬನ್ನಿ ತಿಳಿಯೋಣ.
ಮುಂಗಾರು ಮಳೆ ಕಾಣೆಯಾಗಿ ಕರ್ನಾಟಕ ಬರದ ಬೇಗೆಯಲ್ಲಿ ಬೆಂದು ಹೋಗಿರುವಾಗಲೇ, ಇದೀಗ ಹಿಂಗಾರು ಮಳೆ ಅಬ್ಬರ ಶುರುವಾಗಿದೆ. ಅದರಲ್ಲೂ ರಾಜ್ಯ ರಾಜಧಾನಿ ಬೆಂಗಳೂರು ಭೀಕರ ಮಳೆಗೆ ತತ್ತರಿಸಿ ಹೋಗಿದೆ. ಸೋಮವಾರ ಸಂಜೆ ಶುರುವಾಗಿದ್ದ ಭಾರಿ ಮಳೆ ಮಧ್ಯ ರಾತ್ರಿ ಕೂಡ ನಿಂತಿಲ್ಲ. ಹೀಗೆ ಬಿಟ್ಟೂಬಿಡದೆ ಸುರಿದ ಮಳೆ ಬೆಂಗಳೂರಲ್ಲಿ ಹಲವು ರೀತಿಯ ಅವಾಂತರ ಮಾಡಿರುವ ಸಮಯದಲ್ಲೇ, ಬೆಂಗಳೂರಿನ ನಿವಾಸಿಗಳಿಗೆ ಮತ್ತೊಂದು ಆಘಾತ ನೀಡುವ ಸುದ್ದಿ ಬಂದಿದೆ. ಇದರ ಜೊತೆಗೆ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲೂ ಭಾರಿ ಮಳೆ ಭೀತಿ ಎದುರಾಗಿದೆ.

ಬೆಂಗಳೂರಿನಲ್ಲಿ ಮಳೆಯ ಭಯ!
ನಿನ್ನೆ ಸುರಿದ ಮಳೆಗೆ ಬೆಂಗಳೂರು ಹೃದಯ ಭಾಗವೂ ಸೇರಿ ಶಾಂತಿನಗರ, ಕಲಾಸಿಪಾಳ್ಯ, ಸಿಟಿ ಮಾರ್ಕೇಟ್, ಜಯನಗರ, ವಿಜಯನಗರ, ರಾಜಾಜಿನಗರ, ವಿಲ್ಸನ್ ಗಾರ್ಡನ್, ಎಂಜಿ ರಸ್ತೆ, ವಿವೇಕ ನಗರ, ಕೋರಮಂಗಲ, ಎಚ್‌ಎಸ್‌ಆರ್ ಲೇಔಟ್, ಬೆಳ್ಳಂದೂರು, ಮಾರತ್ ಹಳ್ಳಿ, ವರ್ತೂರು, ಸರ್ಜಾಪುರ, ವೈಟ್ ಫೀಲ್ಡ್ ಹೀಗೆ ಬೆಂಗಳೂರು ಸುತ್ತಮುತ್ತಲ ಜಾಗಗಳು ಕೂಡ ಪರದಾಡಿವೆ. ಪರಿಸ್ಥಿತಿ ಹೀಗಿದ್ದಾಗ ಬೆಂಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ ಇಂದು ಮತ್ತು ನಾಳೆ ಅಂದ್ರೆ, ಮಂಗಳವಾರ & ಬುಧವಾರ ಭಾರಿ ಮಳೆಯಾಗುವ ಸೂಚನೆ ಸಿಕ್ಕಿದೆ.
ಕರ್ನಾಟಕದ 6 ಜಿಲ್ಲೆಗಳಲ್ಲಿ ಅಲರ್ಟ್!
ಅಂದಹಾಗೆ ಕರ್ನಾಟಕದ ಒಟ್ಟು 6 ಜಿಲ್ಲೆಗಳಲ್ಲಿ ಮಂಗಳವಾರ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಚಿಕ್ಕಮಗಳೂರು ಸೇರಿ ಉಡುಪಿ, ದಕ್ಷಿಣ ಕನ್ನಡ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಲ್ಲಿ ಈಗ ಭಾರಿ ಮಳೆ ಬೀಳುವ ಮುನ್ಸೂಚನೆ ಸಿಕ್ಕಿದೆ. ಹಾಗೇ ಈ ಜಿಲ್ಲೆಗಳಲ್ಲಿ ಹಳದಿ ಎಚ್ಚರಿಕೆಯನ್ನ ಕೂಡ ಘೋಷಿಸಲಾಗಿದೆ. ನವೆಂಬರ್ 7 & 8 ರಂದು ಕರಾವಳಿ ಜಿಲ್ಲೆಗಳ ಕೆಲ ಭಾಗಗಳಲ್ಲಿ ಸುಮಾರು 64.5 ಮಿಲಿಮೀಟರ್‌ನಿಂದ ಹಿಡಿದು 115.5 ಮಿಲಿಮೀಟರ್ ತನಕ ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಮತ್ತೆ ಗುಡುಗು, ಮಿಂಚು?
ಮತ್ತೊಂದು ಕಡೆ ಈಗಿನ ಮಾಹಿತಿ ಪ್ರಕಾರ, ರಾಜಧಾನಿ ಬೆಂಗಳೂರಿನಲ್ಲಿ ಇಂದು & ನಾಳೆ ಅಂದ್ರೆ ಮಂಗಳವಾರ, ಬುಧವಾರ ಮೋಡ ಕವಿದ ವಾತಾವರಣ ಇರಲಿದೆ. ಈ ವಾತಾವರಣ ಸಂಜೆಯ ವೇಳೆಗೆ ಬದಲಾಗಿ, ಮಳೆ ಬೀಳಲಿದೆ ಎನ್ನಲಾಗಿದೆ. ಜೊತೆಗೆ ರಾತ್ರಿ ಸಮಯದಲ್ಲಿ ಭಾರಿ ಮಳೆ ಬೀಳುವ ಬಗ್ಗೆ ಮುನ್ನೆಚ್ಚರಿಕೆ ನೀಡಲಾಗಿದೆ. ಗುಡುಗು & ಸಿಡಿಲೂ ಸೇರಿ ಭಾರಿ ಗಾಳಿ ಮತ್ತು ಮಳೆ ಬೀಳುವ ಮುನ್ಸೂಚನೆಯನ್ನ ಈಗ ಹವಾಮಾನ ಇಲಾಖೆ ನೀಡಿದೆ.
ಒಟ್ನಲ್ಲಿ ಇದೀಗ ರಾತ್ರಿ ಬಿದ್ದಿರುವ ಮಳೆಗೆ ಬೆಂಗಳೂರಿನ ನಿವಾಸಿಗಳು ಬೆಚ್ಚಿಬಿದ್ದಾರೆ. ಹೀಗೆ ಪರಿಸ್ಥಿತಿ ಕೈಮೀರಿ ಹೋಗಿರುವ ಸಮಯದಲ್ಲೇ, ಮುಂದಿನ 2 ದಿನ ಕಾಲ ಇದೇ ರೀತಿ ಮಳೆ ಬೀಳುವ ಬಗ್ಗೆ ಮುನ್ನೆಚ್ಚರಿಕೆ ನೀಡಲಾಗಿದೆ. ಹೀಗಾಗಿ ನೀವು ಕಚೇರಿಗೆ ಅಥವಾ ಸಂಜೆ ವೇಳೆ ಹೊರಗಡೆ ಹೋಗುವ ಪ್ಲ್ಯಾನ್ ಇದ್ದರೆ ಸ್ವಲ್ಪ ಅಲರ್ಟ್ ಆಗಿರಿ. ಅದರಲ್ಲೂ ಮಂಗಳವಾರ & ಬುಧವಾರ ಭಾರಿ ಮಳೆ ಮುನ್ಸೂಚನೆ ಸಿಕ್ಕಿದ್ದು ಸ್ವಲ್ಪ ಎಡವಟ್ಟಾಗಿ ಹೊರಗಡೆ ಹೋದ ಸಮಯದಲ್ಲಿ ಮಳೆಯಲ್ಲಿ ಸಿಲುಕಿದರೂ ಮಹಾಮಳೆ ನಿಮ್ಮನ್ನ ಕಾಡುವ ಸಾಧ್ಯತೆ ಇರುತ್ತೆ. ಹೀಗಾಗಿ ಅಗತ್ಯ ಇದ್ದರೆ ಮಾತ್ರ ಹೊರಗೆ ಹೋಗಲು ಪ್ಲ್ಯಾನ್ ಮಾಡಿ.












Click it and Unblock the Notifications