ಆರೋಗ್ಯ ಸಚಿವರಿಗೆ ಅನಾರೋಗ್ಯ; ಕಲಾಪಕ್ಕೆ ಹಾಜರಾಗಲ್ಲ ಡಾ. ಸುಧಾಕರ್
ಬೆಂಗಳೂರು, ಸೆಪ್ಟೆಂಬರ್ 15: ವಿಧಾನಸೌಧದಲ್ಲಿ ನಡೆಯುತ್ತಿರುವ ಮುಂಗಾರು ಅಧಿವೇಶನದಲ್ಲಿ ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಭಾಗವಹಿಸದಿರಲು ಕಾರಣವೇನು ಎಂಬುದನ್ನು ತಿಳಿಸಿದ್ದಾರೆ.
ಬಿಜೆಪಿಯ ಜನೋತ್ಸೋವ ಕಾರ್ಯಕ್ರಮದ ಉಸ್ತುವಾರಿ ವಹಿಸಿಕೊಂಡಿದ್ದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್, ಪಕ್ಷದ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಿರ್ವಹಿಸಿದ್ದರು. ಅದಕ್ಕಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಪಕ್ಷದ ನಾಯಕರಿಂದ ಶಹಬ್ಬಾಶ್ ಗಿರಿ ಅನ್ನು ಸಂಪಾದಿಸಿಕೊಂಡಿದ್ದರು.
ಅದೇ ಆರೋಗ್ಯ ಸಚಿವರು ಇದೀಗ ಮುಂಗಾರು ಅಧಿವೇಶನದಿಂದ ಅಂತರ ಕಾಯ್ದುಕೊಂಡಿದ್ದಾರೆ. ಕಳೆದ ಸೋಮವಾರದಿಂದ ಆರಂಭವಾಗಿರುವ ಮುಂಗಾರು ಅಧಿವೇಶನದಲ್ಲಿ ಆರೋಗ್ಯ ಸಚಿವರೇ ಕಾಣಿಸಿಕೊಳ್ಳುತ್ತಿಲ್ಲ. ತಾವು ಮುಂಗಾರು ಕಲಾಪಕ್ಕೆ ಬಾರದಿರಲು ತಮ್ಮ ಅನಾರೋಗ್ಯವೇ ಕಾರಣ ಎಂದು ಸಚಿವ ಡಾ. ಕೆ. ಸುಧಾಕರ್ ತಿಳಿಸಿದ್ದಾರೆ.

ವಿಶ್ರಾಂತಿ ತೆಗೆದುಕೊಳ್ಳಲು ಸೂಚಿಸಿರುವ ವೈದ್ಯರು: "ಅನಾರೋಗ್ಯ ಹಿನ್ನೆಲೆಯಲ್ಲಿ ವೈದ್ಯರು ಕೆಲವು ದಿನಗಳ ಕಾಲ ವಿಶ್ರಾಂತಿ ತೆಗೆದುಕೊಳ್ಳುವಂತೆ ಸೂಚನೆ ನೀಡಿದ್ದಾರೆ. ಈ ಕಾರಣಕ್ಕಾಗಿ ಸದನದ ಕಲಾಪದಲ್ಲಿ ಭಾಗವಹಿಸಲು ಸಾಧ್ಯವಾಗದೇ ಇರುವುದಕ್ಕೆ ವಿಷಾದವಿದೆ. ಆದಷ್ಟು ಶೀಘ್ರದಲ್ಲೇ ಕರ್ತವ್ಯಕ್ಕೆ ಹಾಜರಾಗುತ್ತೇನೆ. ನಿಮ್ಮ ಹಾರೈಕೆ ಇರಲಿ," ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಟ್ವೀಟ್ ಮಾಡಿದ್ದಾರೆ.
ದೊಡ್ಡಬಳ್ಳಾಪುರದಲ್ಲಿ ನಡೆದಿದ್ದ ಬಿಜೆಪಿ ಜನೋತ್ಸವ: ಸೆಪ್ಟೆಂಬರ್ 10ರ ಶನಿವಾರದಂದು ಬಿಜೆಪಿ ಸರ್ಕಾರ ಮೂರು ವರ್ಷ ಪೂರೈಸಿದ ಹಿನ್ನೆಲೆ ಜನಸ್ಪಂದನೆ ಸಮಾವೇಶವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸುವ ಜವಾಬ್ದಾರಿ ಅನ್ನು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಹೆಗಲಿಗೆ ವಹಿಸಲಾಗಿತ್ತು. ಬಿಜೆಪಿಯ ಜನಸ್ಪಂದನೆ ಕಾರ್ಯಕ್ರಮದ ಬೆನ್ನಲ್ಲೇ ಅವರಲ್ಲಿ ಅನಾರೋಗ್ಯದ ಸಮಸ್ಯೆ ಕಾಣಿಸಿಕೊಂಡಿದೆ. ಹೀಗಾಗಿ ಸಚಿವರು ವಿಶ್ರಾಂತಿಯ ಮೊರೆ ಹೋಗಿದ್ದಾರೆ.












Click it and Unblock the Notifications