ಬೆಂಗಳೂರಿನ ವೆಂಕಟೇಶ್ವರಸ್ವಾಮಿ ದೇಗುಲ ಮೊರೆ ಹೋದ ಹೆಚ್‌ಡಿ ರೇವಣ್ಣ
ಬೆಂಗಳೂರು ಮೇ 31: ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿದೇಶದಿಂದ ಬೆಂಗಳೂರಿಗೆ ಆಗಮಿಸುತ್ತಿದ್ದಂತೆ ಇತ್ತ ತಂದೆ ಹೆಚ್‌ಡಿ ರೇವಣ್ಣ ದೇವರ ಮೊರೆ ಹೋಗಿದ್ದಾರೆ. ಇಂದು ಬೆಳ್ಳಂಬೆಳಿಗ್ಗೆ ಹೆಚ್‌ಡಿ ರೇವಣ್ಣ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಹೌದು.. ಇಂದು ಬೆಳಿಗ್ಗೆ ಬೆಂಗಳೂರಿನ ವೆಂಕಟೇಶ್ವರಸ್ವಾಮಿ ದೇಗುಲಕ್ಕೆ ತೆರಳಿದ ಮಾಜಿ ಸಚಿವ ಹೆಚ್‌ಡಿ ರೇವಣ್ಣ ವಿಶೇಷ ಪೂಜೆ ಸಲ್ಲಿಸಿದ್ದಾರೆ. ದೇಗುಲಕ್ಕೆ ಭೇಟಿ ನೀಡಿ ಪುತ್ರನನ್ನು ಸಂಕಷ್ಟದಿಂದ ಪಾರು ಮಾಡುವಂತೆ ದೇವರಿಗೆ ಪೂಜೆ ಸಲ್ಲಿಸಿದ್ದಾರೆ ಎನ್ನಲಾಗುತ್ತಿದೆ.

ಕಳೆದ ದಿನ ಮಧ್ಯ ರಾತ್ರಿ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಎಸ್‌ಐಟಿ ಅಧಿಕಾರಿಗಳು ಬಂಧಿಸಿದ್ದಾರೆ. ಅತ್ಯಾಚಾರದ ಆರೋಪ ಹೊತ್ತಿರುವ ಪ್ರಜ್ವಲ್ ಹಾಸನ ಲೋಕಸಭಾ ಚುನಾವಣೆ ಬಳಿಕ ವಿದೇಶಕ್ಕೆ ತೆರಳಿದ್ದರು.
ಪ್ರಜ್ವಲ್ ತಲೆಮರಿಸಿಕೊಂಡಿದ್ದಾರೆ ಅವರನ್ನು ಬಂಧಿಸಿಬೇಕು ಎನ್ನುವ ಒತ್ತಾಯಗಳು ಹೆಚ್ಚಾಗುತ್ತಿದ್ದಂತೆ ರಾಜ್ಯ ಸರ್ಕಾರ ಅಶ್ಲೀಲ ವಿಡಿಯೋ ತನಿಖೆಗೆ ಎಸ್‌ಐಟಿ ತಂಡವನ್ನು ರಚನೆ ಮಾಡಿದೆ.
ಈ ತಂಡ ಪ್ರಜ್ವಲ್ ರೇವಣ್ಣಗೆ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ಜಾರಿ ಮಾಡಿತ್ತು. ಅಲ್ಲದೆ ಪ್ರಜ್ವಲ್ ವಿರುದ್ಧ ದೂರು ನೀಡಿದ್ದ ಸಂತ್ರಸ್ತ ಮಹಿಳೆಯನ್ನು ಅಪಹರಣ ಮಾಡಿದ್ದಾರೆನ್ನುವ ಆರೋಪದ ಮೇಲೆ ಜೆಡಿಎಸ್ ಶಾಸಕ ಹೆಚ್‌ಡಿ ರೇವಣ್ಣ ಅವರನ್ನೂ ಬಂಧಿಸಲಾಗಿತ್ತು. ಸದ್ಯ ಅವರು ಈಗ ಜಾಮೀನಿನ ಮೇಲೆ ಹೊರಬಂದಿದ್ದಾರೆ.

ಅಲ್ಲದೆ ಇದೇ ವಿಚಾರದಲ್ಲಿ ಹೆಚ್‌ಡಿ ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಅವರಿಗೂ ಬಂಧನದ ಭೀತಿ ಎದುರಾಗಿದೆ. ಹೀಗೆ ಹೆಚ್‌ಡಿ ರೇವಣ್ಣ ಅವರ ಕುಟುಂಬಸ್ಥರ ಮೇಲೆ ಆರೋಪಗಳ ಸರಮಾಲೆಯೇ ಇದ್ದು ಈ ಸಂಕಷ್ಟದಿಂದ ಪಾರಾಗಲು ರೇವಣ್ಣ ದೇವರ ಮೊರೆ ಹೋಗಿದ್ದಾರೆ.
ಆಧ್ಯಾತ್ಮವನ್ನು ಹೆಚ್ಚಾಗಿ ನಂಬುವ ರೇವಣ್ಣ ಪುತ್ರನ ಪೆನ್‌ಡ್ರೈವ್ ಬಹಿರಂಗವಾಗಿ ಕುಟುಂಬಸ್ಥರ ಮೇಲೆ ಆರೋಪಗಳು ಹೆಚ್ಚಾಗುತ್ತಿದ್ದಂತೆ ಟೆಂಪಲ್ ರನ್ ಶುರು ಮಾಡಿದ್ದಾರೆ.
ತಮ್ಮ ನಿವಾಸದಲ್ಲಿ ಈಗಾಗಲೇ ಹೋಮ ಹವನ ಕೂಡ ಮಾಡಿಸಿದ್ದಾರೆ. ತಾವು ಬಂಧನವಾಗಿ ವಾಪಸ್ ಆದ ಬಳಿಕ ನಾನಾ ದೇವಸ್ಥಾನಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ನಡೆಸುತ್ತಿದ್ದಾರೆ.

ಇಷ್ಟು ಮಾತ್ರವಲ್ಲದೆ ತಮ್ಮ ಪುತ್ರ ಯಾವ ಸಮಯಕ್ಕೆ ವಿದೇಶದಿಂದ ಬೆಂಗಳೂರಿಗೆ ಆಗಮಿಸುವುದು ಉತ್ತಮ ಎಂದು ರೇವಣ್ಣ ಅವರು ಜ್ಯೋತಿಷ್ಯಗಳ ಬಳಿ ಶುಭ ಸಮಯ ಕೇಳಿದ್ದರು. ಅದರ ಪ್ರಕಾರವಾಗಿಯೇ ಪ್ರಜ್ವಲ್ ರೇವಣ್ಣ ಬೆಂಗಳೂರಿಗೆ ವಾಪಾಸ್ಸಾಗಿದ್ದಾರೆ.
ಇಂದು ಬೆಳಿಗ್ಗೆ 10 ಗಂಟೆಯ ನಂತರ ಪ್ರಜ್ವಲ್ ಎಸ್‌ಐಟಿ ವಿಚಾರಣೆಗೆ ಹಾಜಾರಾದರೆ ಅವರ ಜಾತಕ ದೋಷ ಕಡಿಮೆಯಾಗಿ ಶತ್ರುಗಳು ಮಿತ್ರರಾಗುತ್ತಾರೆಂದು ಜಾತಕದಲ್ಲಿರುವುದರಿಂದ ರೇವಣ್ಣ ತಮ್ಮ ಪುತ್ರನನ್ನು ಆಗಮನಕ್ಕೆ ಮುಹೂರ್ತ ಫಿಕ್ಸ್ ಮಾಡಿದ್ದರು. ಅದರಂತೆ ಇಂದು ಪ್ರಜ್ವಲ್ ವಿಚಾರಣೆಗೆ ಹಾಜರಾಗಲಿದ್ದಾರೆ.
ಒಟ್ಟಿನಲ್ಲಿ ಸದಾ ಲಿಂಬೆಹಣ್ಣು ಇಟ್ಟುಕೊಂಡು ಓಡಾಡುತ್ತಿದ್ದ ಹೆಚ್‌ಡಿ ರೇವಣ್ಣ ಈಗ ಎದುರಾಗಿರುವ ಸಂಕಷ್ಟವನ್ನು ಎದುರಿಸಲು ದೇವರ ಮೊರೆ ಹೋಗಿದ್ದಾರೆ. ಅವರ ಪ್ರಾರ್ಥನೆ ಫಲಿಸುತ್ತಾರೆ? ಅವರಂದುಕೊಂಡಿದ್ದೆಲ್ಲವೂ ನಡೆಯುತ್ತಾರೆ? ಅವರಿಗೆ ದೇವರು ಕರುಣಿಸುತ್ತಾನಾ ಕಾದು ನೋಡಬೇಕಿದೆ.












Click it and Unblock the Notifications