ಜನರ ಅಭಿಪ್ರಾಯ ಆಧರಿಸಿಯೇ ಎಲಿವೇಟೆಡ್ ಕಾರಿಡಾರ್: ರೇವಣ್ಣ ಸ್ಪಷ್ಟನೆ
ಬೆಂಗಳೂರು, ಆಗಸ್ಟ್ 3: ಪ್ರಾಸ್ತಾವಿಕ ಎಲಿವೇಟೆಡ್ ಕಾರಿಡಾರ್ ಅನುಷ್ಠಾನಗೊಳಿಸುವ ಮೊದಲು ಸಾರ್ವಜನಿಕರಿಂದ ಅಹವಾಲು ಆಲಿಸಲು 45ದಿನಗಳ ಕಾಲಾವಕಾಶ ನೀಡಲಾಗುವುದು, ಯೋಜನೆ ಅನುಷ್ಠಾನದಲ್ಲಿ ಯಾವುದೇ ಅವಸರ ಇಲ್ಲ ಎಂದು ಲೋಕೋಪಯೋಗಿ ಸಚಿವ ಎಚ್‌ಡಿ ರೇವಣ್ಣ ಹೇಳಿದರು.
ಬೆಂಗಳೂರಿನಲ್ಲಿ ಈ ಕುರಿತು ಸ್ಪಷ್ಟನೆ ನೀಡಿರುವ ಅವರು ಎಲೆಇವೇಟೆಡ್ ಕಾರಿಡಾರ್ ಯೋಜನೆಯನ್ನು 2006ರಲ್ಲಿ ಎಚ್‌ಡಿ ಕುಮಾರಸ್ವಾಮಿಯವರು ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದಾಗಲೇ ರೂಪಿಸಲಾಗಿತ್ತು.
ಕಾರಣಾಂತರಗಳಿಂದ ಆ ಯೋಜನೆ ಕಾರ್ಯಗತಗೊಂಡಿರಲಿಲ್ಲ. ಇದೀಗ ಸಾರ್ವಜನಿಕರು, ಪರಿಸರವಾದಿಗಳು ಹಾಗೂ ನಗರದ ನಾಗರಿಕರ ಸಲಹೆ ಮತ್ತು ಆಕ್ಷೇಪಗಳನ್ನು ಆಲಿಸಿ ಸೂಕ್ತ ಪರಿಹಾರ ಕಂಡುಕೊಂಡೇ ಈ ಯೋಜನೆ ಅನುಷ್ಠಾನಗೊಳಿಸಲಾಗುವುದು.

ಯೋಜನೆ ಅನುಷ್ಠಾನಕ್ಕೆ 284 ಮರಗಳನ್ನು ಕಡಿಯಲಾಗುತ್ತದೆ ಎಂಬ ವರದಿ ಬಂದಿದೆ, ಆದರೆಮರಗಳನ್ನು ಸಂಪೂರ್ಣವಾಗಿ ನೆಲಸಮಗೊಳಿಸದೆ ರೆಂಬೆಕೊಂಬೆಗಳನ್ನು ಮಾತ್ರ ಕತ್ತರಿಸಿ ಯೋಜನೆಯನ್ನು ಅನುಷ್ಠಾನಗೊಳಿಸಲು ಪ್ರಯತ್ನಿಸಲಾಗುತ್ತದೆ.
ಪರಿಸರಕ್ಕೆ ಹಾಗೂ ನಗರದ ಹಸಿರೀಕರಣಕ್ಕೆ ಧಕ್ಕೆಯಾಗದಂತೆ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡೇ ಯೋಜನೆಯನ್ನು ರೂಪಿಸಲಾಗುತ್ತದೆ.6 ಕಾರಿಡಾರ್ ಯೋಜನೆಗಳಿಗೆ ಮರ ತೆರವುಗೊಳಿಸಬೇಕಾಗುತ್ತದೆ.
ಈ ಯೋಜನೆ ಅನುಷ್ಠಾನಗೊಂಡರೆ ಮಾತ್ರ ಬೆಂಗಳೂರು ನಗರದ ಸಂಚಾರ ಸಂದಣಿ ನಿಯಂತ್ರಣಕ್ಕೆ ತರಲು ಸಾಧ್ಯ, ಈ ಹಿನ್ನೆಲೆಯಲ್ಲಿ ಜನರ ದೃಷ್ಟಿಯಿಂದಲೇ ರೂಪಿಸಲಾಗಿದೆ ಎಂದು ಸಚಿವ ರೇವಣ್ಣ ಸಮರ್ಥಿಸಿಕೊಂಡರು.












Click it and Unblock the Notifications