ಕುಟುಂಬ, ರಾಜಕಾರಣದ ಸನ್ನಿವೇಶ ತೆರೆದಿಟ್ಟ ಎಚ್ ಡಿಕೆ-ಅನಿತಾ ಸಂದರ್ಶನ
ಬೆಂಗಳೂರು, ಅಕ್ಟೋಬರ್ 20: "ಪ್ರಜ್ವಲ್ ರೇವಣ್ಣಗೆ ಪ್ರಬುದ್ಧತೆಯ ಕೊರತೆ ಇದೆ. ಪದ ಬಳಕೆ ಮಾಡುವಾಗ ಏನು ಮಾತನಾಡಬೇಕು ಎಂಬ ಬಗ್ಗೆ ಇನ್ನೂ ತಿಳಿದುಕೊಳ್ಳಬೇಕಿದೆ" ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ದೀಪಾವಳಿ ವಿಶೇಷವಾಗಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಅವರ ಪತ್ನಿ ಅನಿತಾ ಸಂದರ್ಶನ ನಡೆಸಿದ ಪಬ್ಲಿಕ್ ಟಿವಿ ಬಳಿ ವಿವಿಧ ವಿಚಾರಗಳನ್ನು ತಿಳಿಸಿದ್ದಾರೆ. ನಿಖಿಲ್ ಗೌಡ ರಾಜಕೀಯ ಪ್ರವೇಶದ ಬಗೆಗಿನ ಪ್ರಶ್ನೆಗೆ ಕುಮಾರಸ್ವಾಮಿ ಹಾಗೂ ಅನಿತಾ ಅವರ ನಿಲುವಿನಲ್ಲಿ ವ್ಯತ್ಯಾಸವಿರುವುದು ತುಂಬ ಸ್ಪಷ್ಟವಾಗಿ ಕಂಡುಬಂತು.
ನಿಖಿಲ್ ಸಿನಿಮಾದಲ್ಲಿ ತನ್ನ ಭವಿಷ್ಯ ರೂಪಿಸಿಕೊಳ್ಳಲಿ. ರಾಜಕೀಯಕ್ಕೆ ಬರುವುದು ಬೇಡ ಎಂಬುದು ಕುಮಾರಸ್ವಾಮಿ ಅವರ ಮಾತುಗಳಾಗಿದ್ದವು. ಒಂದು ವೇಳೆ ರಾಜಕಾರಣಕ್ಕೆ ಬರುವುದು ನಿಖಿಲ್ ಆಸೆಯಾಗಿದ್ದರೆ ಬರಲಿ ಬಿಡಿ ಎಂಬ ನಿಲುವು ಅನಿತಾ ಅವರದ್ದಾಗಿತ್ತು. ಆದರೆ ಮುಂಬರುವ ವಿಧಾನಸಭಾ ಚುನಾವಣೆಗೆ ಪ್ರಚಾರದಲ್ಲಿ ಮಾತ್ರ ತಮ್ಮ ಮಗ ಕಾಣಿಸಿಕೊಳ್ಳುತ್ತಾನೆ ಎಂದರು ಕುಮಾರಸ್ವಾಮಿ.
ತಮ್ಮ ಅನಾರೋಗ್ಯದ ಬಗ್ಗೆ, ದೇಹದ ತೂಕ ಇಳಿಸಿಕೊಂಡಿರುವ ಬಗ್ಗೆ, ಆಹಾರ ಸೇವನೆ ವಿಚಾರದಲ್ಲಿ ಅನುಸರಿಸುತ್ತಿರುವ ಪಥ್ಯ ಹಾಗೂ ಸಮಯ ಪಾಲನೆ ಬಗ್ಗೆ ಕೂಡ ಕುಮಾರಸ್ವಾಮಿ ಅವರು ಹೇಳಿಕೊಂಡರು.

ಹಾಸನ ಲೋಕಸಭೆಗೆ ಪ್ರಜ್ವಲ್
ಪ್ರಜ್ವಲ್ ರೇವಣ್ಣನಿಗೆ ಉತ್ಸಾಹ ಇದೆ. ಆದರೆ ಚಿಕ್ಕ ವಯಸ್ಸು ಆದ್ದರಿಂದ ಮೆಚ್ಯೂರಿಟಿ ಕೊರತೆ ಇದೆ. ಇನ್ನು ಸ್ವಲ್ಪ ವಯಸ್ಸಾಗುತ್ತಾ ಪ್ರಬುದ್ಧತೆ ಬರುತ್ತದೆ. ಹಾಸನ ಲೋಕಸಭೆ ಕ್ಷೇತ್ರಕ್ಕೆ ಪ್ರಜ್ವಲ್ ಸ್ಪರ್ಧೆ ಮಾಡಲಿ ಎಂಬ ಆಸೆ ದೇವೇಗೌಡರಿಗೆ ಇದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಮೈತ್ರಿಗಾಗಿ ಕಾಂಗ್ರೆಸ್- ಬಿಜೆಪಿ ಪ್ರಯತ್ನ
ಈಗಿನ ಸನ್ನಿವೇಶದಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಬರುವುದು ಕಷ್ಟ ಇದೆ ಎಂಬ ವಿಶ್ಲೇಷಣೆ ಇದೆ. ಆದ್ದರಿಂದ ಕಾಂಗ್ರೆಸ್ ಹಾಗೂ ಬಿಜೆಪಿಯಿಂದ ಜೆಡಿಎಸ್ ಜತೆಗೆ ಮೈತ್ರಿಗೆ ಪ್ರಯತ್ನಗಳನ್ನು ಆರಂಭಿಸಿದ್ದಾರೆ. ನಿಮ್ಮ ತಂದೆ ಕಾಂಗ್ರೆಸ್ ಬೆಂಬಲಕ್ಕೆ ಮುಂದಾಗುತ್ತಾರೆ. ಆದರೆ ನೀವು ಬಿಜೆಪಿಗೆ ಬೆಂಬಲ ನೀಡಿ ಎನ್ನುತ್ತಿದ್ದಾರೆ. ಇವೆಲ್ಲ ನಾಲ್ಕು ಗೋಡೆಗಳ ಮಧ್ಯೆ ನಡೆಯುತ್ತಿರುವ ಚರ್ಚೆ ಎಂದು ಎಚ್ ಡಿಕೆ ಮಾತನಾಡಿದ್ದಾರೆ.

ಚನ್ನಪಟ್ಟಣದಿಂದ ಅನಿತಾ ಸ್ಪರ್ಧೆ
ಕಳೆದ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಅಲ್ಪ ಮತಗಳ ಅಂತರದಿಂದ ಅನಿತಾ ಅವರು ಚನ್ನಪಟ್ಟಣದಲ್ಲಿ ಸೋತಿದ್ದರು. ಈ ಬಾರಿ ಅಲ್ಲಿಂದ ಸ್ಪರ್ಧೆ ಮಾಡಬೇಕು ಎಂಬುದು ಅಲ್ಲಿನ ಜನರ ಅಭಿಲಾಷೆ ಹಾಗೂ ಅಲ್ಲಿಂದ ಸ್ಪರ್ಧಿಸಲು ಅಭ್ಯರ್ಥಿಗಳು ಕೂಡ ಇಲ್ಲ ಎಂದರು ಅನಿತಾ. ಸ್ಪರ್ಧೆಗೆ ಪುಷ್ಟಿ ನೀಡುವಂತೆಯೇ ಕುಮಾರಸ್ವಾಮಿ ಮಾತನಾಡಿದರು.

ಅಪ್ಪನ ಆರೋಗ್ಯದ ಬಗ್ಗೆ ಕಾಳಜಿ
ನಿಖಿಲ್ ಚುನಾವಣೆ ಪ್ರಚಾರಕ್ಕೆ ಬರುವುದು ಕೂಡ ನನಗೆ ಇಷ್ಟ ಇಲ್ಲ. ಆದರೆ ನನ್ನ ಆರೋಗ್ಯದ ಬಗ್ಗೆ ಇರುವ ಕಾಳಜಿಯಿಂದ ಪ್ರಚಾರಕ್ಕೆ ಬರಲು ಮುಂದಾಗಿದ್ದಾನೆ. ಈ ರಾಜ್ಯಕ್ಕಾಗಿ ಏನು ಮಾಡಬೇಕು ಎಂಬ ಕನಸು ಇಟ್ಟುಕೊಂಡಿದ್ದೀನೋ ಅದು ಜೆಡಿಎಸ್ ಅಧಿಕಾರಕ್ಕೆ ಬಂದರಷ್ಟೇ ಸಾಕಾರ ಮಾಡಲು ಸಾಧ್ಯ. ಆದ್ದರಿಂದ ನಿಖಿಲ್ ಪ್ರಚಾರ ಮಾಡಲು ನಿರ್ಧರಿಸಿದ್ದಾನೆ ಎಂದರು.

ವಂಶಾಡಳಿತ ವರ್ಸಸ್ ಅಭಿವೃದ್ಧಿ
ಗುಜರಾತಿನ ಚುನಾವಣೆ ಪ್ರಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವಂಶಾಡಳಿತ ವರ್ಸಸ್ ಅಭಿವೃದ್ಧಿ ಎಂಬ ಮಾತನ್ನು ಉದಾಹರಿಸಿದ ಕುಮಾರಸ್ವಾಮಿ, ಎಲ್ಲಿ ಕುಟುಂಬ ರಾಜಕಾರಣ ಇಲ್ಲ ಹೇಳಿ? ಸಿದ್ದರಾಮಯ್ಯ ಅವರು ತಮ್ಮ ಮಗ ಯತೀಂದ್ರನನ್ನು ರಾಜಕಾರಣಕ್ಕೆ ಕರೆತರಬೇಕು ಅಂತಿದ್ದಾರೆ. ಎಚ್.ಸಿ.ಮಹದೇವಪ್ಪ ಅವರಿಗೆ ತಮ್ಮ ಮಗನನ್ನು ಕರೆದುಕೊಂಡು ಬರಬೇಕು. ಈ ರೀತಿ ಎಲ್ಲ ಪಕ್ಷದಲ್ಲೂ ಇದೆ ಎಂದರು.












Click it and Unblock the Notifications