ಮಗ ಆಗಲಿ, ಮೊಮ್ಮಗನಾಗಲಿ, ತಪ್ಪು ಮಾಡಿದ್ರೆ ಶಿಸ್ತುಕ್ರಮ: ಎಚ್ಡಿಡಿ
ಬೆಂಗಳೂರು, ಜುಲೈ 07: 'ಮಗ ಆಗಲಿ, ಮೊಮ್ಮಗನಾಗಲಿ, ತಪ್ಪು ಮಾಡಿದ್ರೆ ಶಿಸ್ತುಕ್ರಮ ಕೈಗೊಳ್ಳಲಾಗುವುದು' ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ಶುಕ್ರವಾರ ಸಂಜೆ ವೇಳೆಗೆ ಪದ್ಮನಾಭನಗರದ ಸ್ವಗೃಹದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಹುಣಸೂರಿನಲ್ಲಿ ಪ್ರಜ್ವಲ್ ರೇವಣ್ಣ ನೀಡಿದ್ದ ಹೇಳಿಕೆಗೆ ಜೆಡಿಎಸ್ ವರಿಷ್ಠ ದೇವೇಗೌಡ ಅವರು ಶುಕ್ರವಾರ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ.

ರಾಜಕೀಯವಾಗಿ ಬೆಳೆಯಬೇಕೆಂಬ ಉದ್ದೇಶ ಪ್ರಜ್ವಲ್ ರೇವಣ್ಣಗಿದೆ, ಭವಾನಿ, ಅನಿತಾ ಕುಮಾರಸ್ವಾಮಿ ಇಬ್ಬರೂ ಚುನಾವಣೆಗೆ ಸ್ಪರ್ಧಿಸಬಹುದು ಎಂದು ಹೇಳಿದರು.
' ಸೂಟ್ ಕೇಸ್ ತಂದವರಿಗೆ ಮಾತ್ರ ಮುಂದಿನ ಖುರ್ಚಿ ನೀಡುತ್ತಾರೆ. ಪ್ರಾಮಾಣಿಕರಿಗೆ ಹಿಂದಿನ ಖುರ್ಚಿ ನೀಡುತ್ತಾರೆ' ಎಂದು ತಮ್ಮ ಪಕ್ಷದ ವಿರುದ್ಧ ಪ್ರಜ್ವಲ್ ಅವರು ಹುಣಸೂರಿನಲ್ಲಿ ಅಸಮಾಧಾನ ವ್ಯಕ್ತಪಡಿಸಿದರು. ಮುಂದಿನ ಚುನಾವಣೆಯಲ್ಲಿ ಪಕ್ಷಕ್ಕೆ ಹೆಚ್ಚು ಸೀಟು ಗೆಲ್ಲಿಸಿ ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿ ಮಾಡುವುದೇ ನನ್ನ ಗುರಿ. ಹಾಗಾಗಿ ನನ್ನ ಬೆಂಬಲಿಗರು, ಅಭಿಮಾನಿಗಳು ಸಹಕರಿಸಿ ಎಂದು ಹೇಳಿದ್ದರು.
'ಸೂಟ್ ಕೇಸ್ ಸಂಸ್ಕೃತಿ ಹೇಳಿಕೆ ಸಹಿಸಲು ಸಾಧ್ಯವಿಲ್ಲ. ನಿಷ್ಠಾವಂತರನ್ನು ಎಂದಿಗೂ ಪಕ್ಷ ಕೈಬಿಟ್ಟಿಲ್ಲ. ಕಾರ್ಯಕರ್ತರ ಬೆಂಬಲ ಇದ್ದವರಿಗೆ ಮಾತ್ರ ಟಿಕೆಟ್ ನೀಡಲಾಗುವುದು. ಹಾಸನದಲ್ಲಿ ಯಾರು ಸ್ಪರ್ಧಿಸಬೇಕು ಎಂಬುದನ್ನು ಇನ್ನೂ ನಿರ್ಧರಿಸಿಲ್ಲ' ಎಂದು ದೇವೇಗೌಡರು ಹೇಳಿದರು.
ಜೆಡಿಎಸ್ ವರಿಷ್ಠ ದೇವೇಗೌಡ ಅವರ ಸಮ್ಮುಖದಲ್ಲಿ ಅವರ ಮೊಮ್ಮಗ ಪ್ರಜ್ವಲ್ ರೇವಣ್ಣ ಅವರು ಜಾತ್ಯಾತೀತ ಜನತಾದಳಕ್ಕೆ ಸೇರಿ ಇಂದಿಗೆ ಸುಮಾರು ಎರಡೂವರೆ ವರ್ಷಗಳು ಮಾತ್ರ ಕಳೆದಿವೆ. ಇಂಜಿನಿಯರಿಂಗ್ ಓದಿರುವ ಪ್ರಜ್ವಲ್ ಅವರು ರಾಜಕೀಯದಲ್ಲಿ ಅನುಭವ ಪಡೆದು ನಂತರ ಚುನಾವಣೆ ಎದುರಿಸಲಿ ಎಂಬುದು ದೇವೇಗೌಡರ ಆಲೋಚನೆಯಾಗಿದೆ.












Click it and Unblock the Notifications