ಆಸ್ತಿ ಕಸಿದು ತಂದೆಯನ್ನೇ ಬೀದಿಗೆ ತಳ್ಳಿದ್ದ ಮಕ್ಕಳಿಗೆ ಹೈಕೋರ್ಟ್ ಶಾಸ್ತಿ
ಬೆಂಗಳೂರು, ನವೆಂಬರ್ 10: ಆಸ್ತಿ ಕಸಿದು ಬೀದಿಗೆ ತಳ್ಳಿದ್ದ ಮಕ್ಕಳಿಗೆ ಹೈಕೋರ್ಟ್ ಸರಿಯಾಗಿ ತರಾಟೆ ತೆಗೆದುಕೊಂಡಿತು. ಅಷ್ಟೇ ಅಲ್ಲದೆ ವಾರದಲ್ಲೇ ತಂದೆಗೆ ಆಸ್ತಿ ವಾಪಸ್ ಕೊಡಿಸುವಂತೆ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಹೈಕೋರ್ಟ್ ತಾಕೀತು ಮಾಡಿತು.
ತಮ್ಮ ಆಸ್ತಿ ಮಗನ ವಶದಲ್ಲಿದೆ ಅದನ್ನು ಹಿಂದಿರುಗಿಸುವಂತೆ ಮಾಡಿ ಎಂದು 71 ವರ್ಷದ ಪಟೇಲ್ ಶಿವಲಿಂಗೇಗೌಡ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಶುಕ್ರವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ ವೀರಪ್ಪ ಅವರಿದ್ದ ಪೀಠ, ಅರ್ಜಿದಾರರ ಮಕ್ಕಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿತು.
ಅರ್ಜಿದಾರ ತಂದೆಯ ದುಸ್ಥಿತಿ ಕಂಡು ಮರುಕ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳು ಶಿವಲಿಂಗೇಗೌಡ ಸ್ವಯಾರ್ಜಿತ ಆಸ್ತಿ ಅನುಭವಿಸಲು ಸಂತ್ರಸ್ತರು ಅವರ ಜೀವಿತಾವಧಿಯಲ್ಲಿ ಯಾರೂ ಈ ಆಸ್ತಿಯನ್ನು ಮಾರಾಟ ಮಾಡುವಂತಿಲ್ಲ ಎಂಉ ಉಪವಿಭಾಗಾಧಿಕಾರಿ 2017ರ ಸೆಪ್ಟೆಂಬರ್ 14ರಂದು ಹೊರಡಿಸಿದ ಆದೇಶವನ್ನು ಒಂದು ವಾರದಲ್ಲಿ ಅನುಷ್ಠಾನಕ್ಕೆ ತರಬೇಕು ಎಂದು ಎಸ್‌ಪಿಗೆ ತಾಕೀತು ಮಾಡಿದರು.

ಉಪ ವಿಭಾಗಾಧಿಕಾರಿ ಆದೇಶವನ್ನು ಇಲ್ಲಿಯವರೆಗೆ ಕರ್ತವ್ಯಲೋಪ ಎಸಗಿದ ಕೆ.ಎಂ. ದೊಡ್ಡಿ ಠಾಣೆಯ ಪೊಲೀಸರ ವಿರುದ್ಧ ಶಿಸ್ತುಕ್ರಮ ಜರುಗಿಸಿ ವರದಿ ಸಲ್ಲಿಸುವಂತೆಯೂ ಪೊಲೀಸ್ ವರಿಷ್ಠಾಧಿಕಾರಿಗೆ ನಿರ್ದೇಶನ ನೀಡಿದರು.












Click it and Unblock the Notifications