ಆಟದ ಮೈದಾನ ಪಾಲಿಕೆಗೆ ಪಡೆಯಲು ಸಚಿವ ಅಶೋಕ್ ಪ್ರಯತ್ನಕ್ಕೆ ಬ್ರೇಕ್..!
ಬೆಂಗಳೂರು ಏ.12. ಪದ್ಮನಾಭನಗರ ಬಡಾವಣೆಯ ಮುಖ್ಯರಸ್ತೆಯಲ್ಲಿರುವ ಕಾರ್ಮೆಲ್ ಕನ್ನಡ ಶಾಲೆಗೆ ಅಂಟಿಕೊಂಡ ಅಂದಾಜು ಮೂರು ಸಾವಿರ ಚದರಡಿಯ ಆಟದ ಮೈದಾನವನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿಗೆ) ಪಡೆಯುವ ಕಂದಾಯ ಸಚಿವ ಆರ್. ಅಶೋಕ ಪ್ರಯತ್ನಕ್ಕೆ ಹಿನ್ನೆಡೆಯಾಗಿದೆ.
ಆ ಜಾಗವನ್ನು ಹಸ್ತಾಂತರಿಸಬೇಕೆಂದು ಕೋರಿ ಬಿಬಿಎಂಪಿ, ಬಿಡಿಎಗೆ (ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ) ಬರೆದಿರುವ ಪತ್ರ ಮತ್ತು ಹಸ್ತಾಂತರ ಪ್ರಕ್ರಿಯೆಗೆ ಹೈಕೋರ್ಟ್ ಮಂಗಳವಾರ ಮಧ್ಯಂತರ ತಡೆ ನೀಡಿದೆ.
ಜಯನಗರ ಕೋ-ಆಪರೇಟಿವ್ ಹೌಸಿಂಗ್ ಸೊಸೈಟಿ ಲಿಮಿಟೆಡ್ ಕಾರ್ಯದರ್ಶಿ ಎಂ.ಶಿವಣ್ಣ ಸಲ್ಲಿಸಿರುವ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ನೀಡಿದೆ. ವಾದ ಆಲಿಸಿದ ಬಳಿಕ ನ್ಯಾಯಪೀಠ, ಬಿಬಿಎಂಪಿ ದಕ್ಷಿಣ ವಲಯದ ಯೋಜನಾ ವಿಭಾಗದ ಕಾರ್ಯಪಾಲಕ ಎಂಜಿನಿಯರ್, ಬಿಡಿಎ ಸಹಾಯಕ ಕಾರ್ಯಪಾಲಕ ಎಂಜನಿಯರ್ ಮತ್ತು ಬಿಡಿಎ ಪ್ರದೇಶಾಧಿಕಾರಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿ ವಿಚಾರಣೆ ಮುಂದೂಡಿತು.

ಅರ್ಜಿದಾರರ ಆಕ್ಷೇಪವೇಕೆ?: ಅರ್ಜಿದಾರರ ಪರ ವಕೀಲರು, ಖಾಸಗಿ ಕನ್ನಡ ಮಾಧ್ಯಮ ಶಾಲೆಯಾದ ಕಾರ್ಮೆಲ್ ವಿದ್ಯಾಸಂಸ್ಥೆಯಲ್ಲಿ ಎಲ್.ಕೆ.ಜಿ.ಯಿಂದ ಏಳನೇ ತರಗತಿಯವರಿಗೆ ಸುಮಾರು 400 ಮಕ್ಕಳು ಕಲಿಯುತ್ತಿದ್ದಾರೆ. 15 ಜನರ ಬೋಧಕ ಸಿಬ್ಬಂದಿ ಇದ್ದು, ಏಕಾಏಕಿ ಈ ಜಾಗವನ್ನು ಬಿಡಿಎ ತನಗೆ ಹಸ್ತಾಂತರಿಸಬೇಕು ಎಂದು ಬಿಬಿಎಂಪಿ ಕೋರಿದೆ. ಇದರ ಹಿಂದೆ ಕಂದಾಯ ಸಚಿವ ಆರ್.ಅಶೋಕ್ ಕೈವಾಡ ಇದೆ, ಹಾಗಾಗಿ ಆ ಜಾಗದ ಪರಭಾರೆ ಪ್ರಕ್ರಿಯೆ ರದ್ದುಗೊಳಿಸಬೇಕು' ಎಂದು ಕೋರಿದರು.
ಪ್ರಕರಣದ ಹಿನ್ನೆಲೆ ಏನು?: 'ಬಿಬಿಎಂಪಿಯ 182ನೇ ವಾರ್ಡ್‌ನಲ್ಲಿ ಕಾರ್ಮೆಲ್ ಶಾಲೆ ನಡೆಸಲು ಬಿಡಿಎ ವತಿಯಿಂದ ಅನುಮತಿ ನೀಡಿದೆ. ಅನುಮತಿಯ ಅವಧಿ 2022ರ ಫೆಬ್ರವರಿಗೆ ಮುಕ್ತಾಯಗೊಂಡಿದೆ, ಮುಂದಿನ ಅವಧಿಗೆ ವಿದ್ಯಾಸಂಸ್ಥೆ ನಡೆಸಲು ಅನುಮತಿ ನೀಡಬಾರದೆಂದು ಸಚಿವರು ಸೂಚಿಸಿರುತ್ತಾರೆಂದು ಬಿಬಿಎಂಪಿ ಅಧಿಕಾರಿಗಳು ಬಿಡಿಎಗೆ ಪತ್ರ ಬರೆದು ಮೈದಾನವನ್ನು ಹಸ್ತಾಂತರಿಸಲು ಕೋರಿದ್ದಾರೆ.
'ಸಾರ್ವಜನಿಕರು ಹಾಗೂ ಪಾಲಿಕೆಯ ಆಸ್ತಿಯನ್ನು ಸಂರಕ್ಷಿಸುವ ಹಿತದೃಷ್ಟಿಯಿಂದ ಈ ಪ್ರದೇಶದಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವುದು ಅತ್ಯವಶ್ಯವಿದೆ ಎಂದು ಬಿಬಿಎಂಪಿ ದಕ್ಷಿಣ ವಲಯದ ಯೋಜನಾ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಪತ್ರದಲ್ಲಿ ಹೇಳಿದ್ದಾರೆ.
ಆ ಹಸ್ತಾಂತರ ಪ್ರಕ್ರಿಯೆ ಪ್ರಶ್ನಿಸಿರುವ ಅರ್ಜಿದಾರರು, 'ಪದ್ಮನಾಭನಗರ ಲೇ ಔಟ್ ಸಮಗ್ರ ಅಭಿವೃದ್ಧಿಗೆ ಸಂಬಂಧ ಸೊಸೈಟಿ ಬಿಡಿಎ ವತಿಯಿಂದ ಅನುಮತಿ ಪಡೆದಿದೆ. ಈ ಅನುಮತಿಯನ್ನು 30 ವರ್ಷಗಳ ಗುತ್ತಿಗೆ ಆಧಾರದಲ್ಲಿ ನೀಡಲಾಗಿದೆ. ಈ 30 ವರ್ಷಗಳ ಅನುಮತಿ ನವೀಕರಣಕ್ಕೆ ಸಂಬಂಧಿಸಿದ ಪ್ರಕ್ರಿಯೆ ಇನ್ನೂ ಬಾಕಿ ಇರುವ ಮಧ್ಯದಲ್ಲೇ ಬಿಬಿಎಂಪಿ ದಕ್ಷಿಣ ವಲಯದ ಯೋಜನಾ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಅವರು, ಜಾಗ ಒಪ್ಪಿಸುವಂತೆ ಬಿಡಿಎ ಅಧಿಕಾರಿಗಳ ಮೇಲೆ ಒತ್ತಡ ಹಾಕುತ್ತಿದ್ದಾರೆ ಎಂದು ಅರ್ಜಿಯಲ್ಲಿ ಆರೋಪಿಸಿದ್ದಾರೆ.












Click it and Unblock the Notifications