ನೀತಿ ಸಂಹಿತೆ ನೆಪದಲ್ಲಿ ಆಟೋ ಚಾಲಕರಿಗೆ ಕಿರುಕುಳ: ಗಂಭೀರ ಆರೋಪ ಮಾಡಿದ ಎಎಪಿ, ಏಕೆ? ಕಾರಣ ತಿಳಿಯಿರಿ
ಬೆಂಗಳೂರು, ಏಪ್ರಿಲ್ 09: ಭಾರತೀಯ ಚುನಾವಣೆ ಆಯೋಗ ಕಳೆದ ತಿಂಗಳೂರು ಮಾರ್ಚ್ 29ರಂದು ಕರ್ನಾಟಕ ಸಾರ್ವತ್ರಿಕ ಚುನಾವಣೆ ಘೋಷಣೆ ಮಾಡಿತ್ತು. ಅಂದಿನಿಂದಲೇ ರಾಜ್ಯದಲ್ಲಿ ನೀತಿ ಸಂಹಿತೆಗೆ ಜಾರಿಗೆ ಬಂತು. ಇದೀಗ ನೀತಿ ಸಂಹಿತೆ ನೆಪ ಮಾಡಿಕೊಂಡು ಆಟೋ ಚಾಲಕರಿಗೆ ಕಿರುಕುಳ ನೀಡಲಾಗುತ್ತಿದೆ.
ಹೀಗೆಂದು ಆಮ್ ಆದ್ಮಿ ಪಕ್ಷವು (AAP) ಆರೋಪಿಸಿದೆ. ಈ ಕುರಿತು ಎಎಪಿ ಪಕ್ಷದ ರಾಜ್ಯ ಆಟೋ ಚಾಲಕರ ಘಟಕದ ಅಧ್ಯಕ್ಷ ಅಯೂಬ್ ಖಾನ್ ಅವರು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಅಯೂಬ್ ಖಾನ್ ಅವರು, ಬೆಂಗಳೂರು ಸೇರಿದಂತೆ ರಾಜಕೀಯ ಪಕ್ಷಗಳ ಸ್ಟಿಕ್ಕರ್ ಅಂಟಿಸಿರುವ ಕಾರಣಕ್ಕೆ ವಶಪಡಡಿಸಿಕೊಳ್ಳಲಾದ ಆಟೋಗಳನ್ನು ಪೊಲೀಸರು ಶೀಘ್ರವೇ ಹಿಂದಿರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.
ಚುನಾವಣಾ ನೀತಿ ಸಂಹಿತೆ ಘೋಷಣೆಯ ಬಳಿಕ ರಾಜಕೀಯ ಪಕ್ಷಗಳ ಸ್ಟಿಕ್ಕರ್ ಅಂಟಿಸಿಕೊಂಡಿರುವ ಆಟೋ ಚಾಲಕರ ವಿರುದ್ಧ ಪೊಲೀಸರು ಮಾರ್ಚ್ 29 ರಿಂದಲೇ ಕ್ರಮ ಕೈಗೊಳ್ಳುತ್ತಿದ್ದಾರೆ. ಪ್ರತಿ ಆಟೋಗೆ 5,000 ರೂಪಾಯಿ ದಂಡ ವಿಧಿಸಲಾಗುತ್ತಿದೆ. ದಂಡ ಕಟ್ಟಲು ಸಾಧ್ಯವಾಗದ ಚಾಲಕರ ಆಟೋಗಳನ್ನು ವಶಪಡಿಸಿಕೊಳ್ಳುತ್ತಿದ್ದಾರೆ ಎಂದು ಅವರು ಪೊಲೀಸರ ನಡೆ ಖಂಡಿಸಿದರು.
ನೀತಿ ಸಂಹಿತೆ ಸಂಬಂಧ ಪೊಲೀಸರು ಮೊದಲೇ ಎಚ್ಚರಿಕೆ ನೀಡಬೇಕಿತ್ತು. ಆದರೆ ಈ ಬಗ್ಗೆ ಎಚ್ಚರಿಕೆ ನೀಡದೇ ಹೀಗೆ ಏಕಾಏಕಿ ಕ್ರಮ ಕೈಗೊಳ್ಳುವುದು ಅಮಾನವೀಯ. ನೀತಿ ಸಂಹಿತೆ ನೆಪದಲ್ಲಿ ಬಡ ಹಾಗೂ ಮಧ್ಯಮ ವರ್ಗದ ಆಟೋ ಚಾಲಕರಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಅವರು ಗಂಭೀರವಾಗಿ ಆಪಾದಿಸಿದರು.

40ಕ್ಕೂ ಹೆಚ್ಚು ಆಟೋಗಳು ಪೊಲೀಸರ ವಶ
ದಂಡ ಕಟ್ಟಲು ಸಾಧ್ಯವಾಗದ ಚಾಲಕರ ಸುಮಾರು 40ಕ್ಕೂ ಹೆಚ್ಚು ಆಟೋಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಶೀಘ್ರವೇ ಈ ಆಟೋಗಳನ್ನು ಬಿಟ್ಟು ಕಳುಹಿಸಬೇಕು. ಇಲ್ಲದಿದ್ದರೆ ಆದಾಯವಿಲ್ಲದೇ ಅವರ ಇಡೀ ಕುಟುಂಬ ತೀವ್ರ ಸಂಕಷ್ಟಕ್ಕೆ ಸಿಲುಕುತ್ತದೆ. ಹಣ ಮಾಡುವುದೇ ಪೊಲೀಸರ ಉದ್ದೇಶವಾಗಿದ್ದರೆ, ನಾವು ಜನರಿಂದ ಹಣ ಸಂಗ್ರಹಿಸಿ ಕೊಡುತ್ತೇವೆ ಎಂದು ಅವರು ಪೊಲೀಸರ ವಿರುದ್ಧ ಗುಡುಗಿದರು.
ಜನರ ರಕ್ಷಣೆಗಿರುವ ಪೊಲೀಸರೇ ಈ ರೀತಿ ಹಗಲು ದರೋಡೆಗೆ ಇಳಿದಿರುವುದು ಖಂಡನೀಯ. ಪ್ರಭಾವಿ ವ್ಯಕ್ತಿಗಳು ಗಂಭೀರ ತಪ್ಪು ಮಾಡಿದರೂ ಕ್ರಮ ಕೈಗೊಳ್ಳಲು ಮೀನಮೇಷ ಎಣಿಸುವ ಪೊಲೀಸರು ಜನಸಾಮಾನ್ಯರು ಹಾಗೂ ಆಟೋ ಚಾಲಕರ ಮೇಲೆ ಮಾತ್ರ ನಿರ್ದಾಕ್ಷಿಣ್ಯವಾಗಿ ಕಠಿಣ ಕ್ರಮ ಜರುಗಿಸುತ್ತಿದ್ದಾರೆ. ವಶಪಡಿಸಿಕೊಂಡ ಆಟೋಗಳನ್ನು ಚಾಲಕರಿಗೆ ಹಿಂದಿರುಗಿಸದಿದ್ದರೆ ಪ್ರತಿಭಟನೆ ನಡೆಸಲಾಗುವುದು ಎಂದು ಅಯೂಬ್ ಖಾನ್ ಎಚ್ಚರಿಕೆ ನೀಡಿದರು.
ಜೆಡಿಎಸ್ ಮುಖಂಡ ಎಎಪಿ ಸೇರ್ಪಡೆ
ಜೆಡಿಎಸ್ ರಾಜ್ಯ ಪರಿಷತ್ ಸದಸ್ಯ ಡಾ. ತಿಪ್ಪೇಸ್ವಾಮಿ ವೆಂಕಟೇಶ್ ವಿ.ಟಿ.ಎಸ್.ರವರು ಆಮ್ ಆದ್ಮಿ ಪಾರ್ಟಿ ರಾಜ್ಯಾಧ್ಯಕ್ಷರಾದ ಪೃಥ್ವಿ ರೆಡ್ಡಿ ಹಾಗೂ ರಾಜ್ಯ ಸಂವಹನಾ ಉಸ್ತುವಾರಿಗಳಾದ ಬ್ರಿಜೇಶ್ ಕಾಳಪ್ಪ ಸಮ್ಮುಖದಲ್ಲಿ ಆಮ್ ಆದ್ಮಿ ಪಾರ್ಟಿಗೆ ಶನಿವಾರ ಸೇರ್ಪಡೆಯಾದರು.
ಆಮ್ ಆದ್ಮಿ ಪಾರ್ಟಿಯ ರಾಜ್ಯ ಕಚೇರಿಯಲ್ಲಿ ಡಾ. ತಿಪ್ಪೇಸ್ವಾಮಿ ವೆಂಕಟೇಶ್‌ರವರನ್ನು ಪಕ್ಷಕ್ಕೆ ಸ್ವಾಗತಿಸಲಾಯಿತು. ಈ ವೇಳೆ ಮಾತನಾಡಿದ ಎಎಪಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ, ಡಾ. ತಿಪ್ಪೇಸ್ವಾಮಿ ವೆಂಕಟೇಶ್‌ರವರು ಕೃಷಿಯಲ್ಲಿ ಬಿಎಸ್ಸಿ, ಎಂಬಿಎ ಹಾಗೂ ಪಿಜಿಡಿಎಇಎಂ ಶಿಕ್ಷಣ ಪಡೆದಿದ್ದಾರೆ. ಕೆಎಸ್‌ಆರ್‌ಟಿಸಿ, ಬಿಬಿಎಂಪಿ, ಎಸ್‌ಬಿಐ ಹಾಗೂ ಕೃಷಿ ಇಲಾಖೆಯಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ.
ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ತಮ್ಮ 40ನೇ ವಯಸ್ಸಿನಲ್ಲಿ ಸರ್ಕಾರಿ ನೌಕರಿಯನ್ನು ತ್ಯಜಿಸಿ ರಾಜಕೀಯ ಪ್ರವೇಶಿಸಿದ್ದರು. ಇಂತಹ ಸುಶಿಕ್ಷಿತ ಹಾಗೂ ಜನಪರ ಕಾಳಜಿಯುಳ್ಳ ನಾಯಕರು ನಮ್ಮ ಪಕ್ಷಕ್ಕೆ ಸೇರ್ಪಡೆ ಆಗುತ್ತಿರುವುದು ಸಂತಸ ತಂದಿದೆ ಎಂದು ಹೇಳಿದರು.












Click it and Unblock the Notifications