ಜಮೀರ್ ಅಹ್ಮದ್ ಖಾನ್ ಸೋಲಿಸಲು ತಂತ್ರ ಹಣೆದ ಕಚ್‌ನ ಬಿಜೆಪಿ ಶಾಸಕ!
ಬೆಂಗಳೂರು, ಏಪ್ರಿಲ್ 28; ಜಮೀರ್ ಅಹ್ಮದ್ ಖಾನ್. ಕರ್ನಾಟಕದಲ್ಲಿ ಮುಸ್ಲಿಂ ಸಮುದಾಯದ ಪ್ರಭಾವಿ ನಾಯಕ. ಈ ಬಾರಿಯ ಚುನಾವಣೆಯಲ್ಲಿ ಬೆಂಗಳೂರಿನ ಚಾಮರಾಜಪೇಟೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ. ಬಿಜೆಪಿ ಪಾಲಿಗೆ ಸಿದ್ದರಾಮಯ್ಯ ಸೋಲಿಸುವುದು ಎಷ್ಟು ಮುಖ್ಯವೋ, ಬೆಂಗಳೂರಲ್ಲಿ ಜಮೀರ್ ಸೋಲಿಸುವುದು ಸಹ ಪ್ರತಿಷ್ಠೆ.
ಚಾಮರಾಜಪೇಟೆ ಕ್ಷೇತ್ರಕ್ಕೆ ಈ ಬಾರಿಯ ಬಿಜೆಪಿಯಿಂದ ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರರಾವ್, ಕಾಂಗ್ರೆಸ್‌ನಿಂದ ಜಮೀರ್ ಅಹ್ಮದ್ ಖಾನ್ ಮತ್ತು ಜೆಡಿಎಸ್‌ನಿಂದ ಗೋವಿಂದರಾಜು ಅಭ್ಯರ್ಥಿಗಳು. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಪ್ತ ವಲಯದ ನಾಯಕ ಜಮೀರ್ ಸೋಲಿಸಲು ಬಿಜೆಪಿ ತಂತ್ರ ಹಣೆಯುತ್ತಿದೆ.

ಬಿಜೆಪಿ ಕಚ್ ವಿಧಾನಸಭಾ ಕ್ಷೇತ್ರದ ಶಾಸಕ ಹಿತೇಶ್‌ರನ್ನು ಚಾಮರಾಜಪೇಟೆ ಕ್ಷೇತ್ರದ ಪ್ರಭಾರಿಯಾಗಿ ನಿಯೋಜನೆ ಮಾಡಿದೆ. ಸಂಸದ ಪಿ. ಸಿ. ಮೋಹನ್ ಮತ್ತು ಪಕ್ಷದ ಅಭ್ಯರ್ಥಿ ಭಾಸ್ಕರರಾವ್ ಜೊತೆ ಸೇರಿ ಅವರು ಚುನಾವಣೆ ಗೆಲ್ಲಲು ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಎಲ್ಲಾ ವಾರ್ಡಿನ ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಗಳ ಜೊತೆ ಚುನಾವಣಾ ಕಾರ್ಯತಂತ್ರದ ಕುರಿತು ಚರ್ಚಿಸಿದರು.
ಜಮೀರ್ ಭದ್ರಕೋಟೆ; ಚಾಮರಾಜಪೇಟೆ ಕ್ಷೇತ್ರ ಜಮೀರ್ ಅಹ್ಮದ್ ಖಾನ್ ಭದ್ರಕೋಟೆ. ಪಕ್ಷಕ್ಕಿಂತ ಹೆಚ್ಚಾಗಿ ವೈಯಕ್ತಿಕ ವರ್ಚಸ್ಸನ್ನು ಅವರು ಹೊಂದಿದ್ದಾರೆ. 2008, 2013ರ ಚುನಾವಣೆಯಲ್ಲಿ ಅವರು ಜೆಡಿಎಸ್‌ನಿಂದ ಗೆದ್ದಿದ್ದರು. ಜೆಡಿಎಸ್ ತೊರೆದ ಬಳಿಕ 2018ರಲ್ಲಿ ಕಾಂಗ್ರೆಸ್‌ನಿಂದ ಕಣಕ್ಕಿಳಿದು ಗೆಲುವು ಸಾಧಿಸಿದ್ದಾರೆ. ಈ ಬಾರಿಯೂ ಅವರು ಪಕ್ಷದ ಅಭ್ಯರ್ಥಿ.

ಕ್ಷೇತ್ರವನ್ನು ಜಮೀರ್ ಹಿಡಿತದಿಂದ ಮುಕ್ತಗೊಳಿಸಲು ಬಿಜೆಪಿ ಮತ್ತು ಜೆಡಿಎಸ್ ತಂತ್ರ ರೂಪಿಸುತ್ತಿವೆ. ಅದರಲ್ಲೂ ಜೆಡಿಎಸ್ ಪಕ್ಷ ಜಮೀರ್ ಸೋಲಿಸಲು ಕಾಂಗ್ರೆಸ್ ಮುಖಂಡ ಗೋವಿಂದರಾಜು ಹಾಗೂ ಅವರ ಬೆಂಬಲಿಗರನ್ನು ಸೆಳೆದಿದೆ. ಎಚ್. ಡಿ. ಕುಮಾರಸ್ವಾಮಿ ಆಪ್ತರಾಗಿದ್ದ ಜಮೀರ್ ಬಳಿಕ ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡಮತದಾನ ಮಾಡಿ ಪಕ್ಷದಿಂದ ಹೊರಬಂದರು. ಆಗಿನಿಂದಲೇ ಅವರನ್ನು ಸೋಲಿಸಲು ಪಕ್ಷ ಪ್ರಯತ್ನ ನಡೆಸುತ್ತಲೇ ಇದೆ.
ಲಹರಿ ಆಡಿಯೋ ಸಂಸ್ಥೆಯ ಮಾಲೀಕ ಲಹರಿ ವೇಲು ಚಾಮರಾಜಪೇಟೆ ಬಿಜೆಪಿ ಟಿಕೆಟ್ ಪಡೆಯಲಿದ್ದಾರೆ ಎಂಬ ಸುದ್ದಿ ಇತ್ತು. ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರರಾವ್ ಎಎಪಿಯಲ್ಲಿದ್ದರು. ಅವರು ಬಿಜೆಪಿ ಸೇರಿದ ಬಳಿಕ ಬಸವನಗುಡಿ ಅಭ್ಯರ್ಥಿಯಾಗಲಿದ್ದಾರೆ ಎಂದು ಅಂದಾಜಿಸಲಾಗಿತ್ತು. ಆದರೆ ಬಿಜೆಪಿ ಚಾಮರಾಜಪೇಟೆಯಲ್ಲಿ ಅವರನ್ನು ಕಣಕ್ಕಿಳಿಸಿದೆ. ಜಮೀರ್ ಸೋಲಿಸುವುದುದ ಅಷ್ಟು ಸುಲಭದ ಮಾತಲ್ಲ, ಕ್ಷೇತ್ರದಲ್ಲಿ ಬಿಜೆಪಿ ಅಂತಹ ಪ್ರಭಾವ ಹೊಂದಿಲ್ಲ.
ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಗಣೇಶ ಚತುರ್ಥಿ ಆಚರಣೆ, ಸ್ವಾತಂತ್ರ ದಿನಾಚರಣೆ ಆಚರಣೆ ಮುಂತಾದ ವಿವಾದಗಳನ್ನು ಬಳಕೆ ಮಾಡಿಕೊಂಡು ಈ ಬಾರಿ ಗೆಲುವು ಸಾಧಿಸಬೇಕು ಎಂಬುದು ಬಿಜೆಪಿಯ ಲೆಕ್ಕಾಚಾರವಾಗಿದೆ. ಆದರೆ ಸಂದರ್ಶನಗಳಲ್ಲಿ ನನಗೆ ಎದುರಾಳಿಯೇ ಇಲ್ಲ ಎಂದು ಜಮೀರ್ ಅಹ್ಮದ್ ಖಾನ್ ಹೇಳುತ್ತಿದ್ದಾರೆ.
ಕ್ಷೇತ್ರದ ಕಾನೂನು ಸುವ್ಯವಸ್ಥೆ, ಮೂಲ ಸೌಕರ್ಯಗಳ ಕೊರತೆ ಮುಂತಾದ ವಿಚಾರಗಳನ್ನು ಮುಂದಿಟ್ಟುಕೊಂಡು ಬಿಜೆಪಿ ವ್ಯವಸ್ಥತವಾಗಿ ಜಮೀರ್ ಸೋಲಿಸಲು ತಂತ್ರ ರೂಪಿಸುತ್ತಿದೆ. ಹಿಂದಿನ ಚುನಾವಣೆಗಳಷ್ಟು ಸುಲಭವಾಗಿಲ್ಲ ಈ ಚುನಾವಣೆ ಎಂಬುದು ಸ್ಥಳೀಯರ ಮಾತು.
ಕಳೆದ ಮೂರು ಚುನಾವಣೆಯಲ್ಲಿ ಚಾಮರಾಜಪೇಟೆಯಲ್ಲಿ ಬಿಜೆಪಿ ಪಡೆದ ಮತಗಳು ಹೀಗಿವೆ. 2018ರಲ್ಲಿ ಎಂ. ಲಕ್ಷ್ಮೀ ನಾರಾಯಣ 32,202 ಮತ ಪಡೆದಿದ್ದರು. ಜಮೀರ್ 65,339 ಮತ ಪಡೆದು ಜಯಗಳಿಸಿದ್ದರು. 2013ರ ಚುನಾವಣೆಯಲ್ಲಿ ಬಿ. ವಿ. ಗಣೇಶ್ 17,720 ಮತಗಳನ್ನು ಪಡೆದಿದ್ದರು. ಜಮೀರ್ (ಜೆಡಿಎಸ್ ಅಭ್ಯರ್ಥಿ) 56,339 ಮತಗಳಿಸಿದ್ದರು. 2008ರಲ್ಲಿ ವಿ. ಎಸ್. ಶ್ಯಾಮ ಸುಂದರ್ 23,414 ಮತಗಳನ್ನು ಪಡೆದಿದ್ದರು. ಜೆಡಿಎಸ್‌ನ ಜಮೀರ್ 43,004 ಮತ ಪಡೆದು ಜಯಗಳಿಸಿದ್ದರು.
2005ರಿಂದ ಜಮೀರ್ ಅಹ್ಮದ್ ಖಾನ್ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಜೆಡಿಎಸ್‌ನಿಂದ ಕಣಕ್ಕಿಳಿದು ಗೆಲುವು ಸಾಧಿಸುತ್ತಿದ್ದ ಅವರು ಈಗ ಕಾಂಗ್ರೆಸ್ ಪಕ್ಷದಲ್ಲಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಅವರನ್ನು ಬಿಜೆಪಿ ಹೇಗೆ ಕಟ್ಟಿ ಹಾಕಲಿದೆ? ಎಂದು ಕಾದು ನೋಡಬೇಕಿದೆ.












Click it and Unblock the Notifications