Gruha Jyothi Scheme: ಬಾಡಿಗೆ ಮನೆ ಬದಲಾಯಿಸುವಿರಾ? ಗೃಹ ಜ್ಯೋತಿ ನೋಂದಣಿ ಈಗ ಸುಲಭ..
ಬೆಂಗಳೂರು,ಫೆಬ್ರವರಿ 8: ರಾಜ್ಯ ಸರ್ಕಾರದ ಪ್ರಮುಖ ಗ್ಯಾರಂಟಿ ಯೋಜನೆಗಳಲ್ಲಿ ಗೃಹ ಜ್ಯೋತಿ ಕೂಡ ಒಂದು. ಇದರ ಪ್ರಯೋಜನವನ್ನು ರಾಜ್ಯದ ಜನ ಪಡೆಯುತ್ತಿದ್ದಾರೆ. ಆದರೆ ಬಾಡಿಗೆ ಮನೆಯಲ್ಲಿ ಇರುವವರು ಇದರ ಪ್ರಯೋಜನ ಪಡೆಯುತ್ತಿದ್ದಾರಾದರೂ ಮನೆ ಬದಲಾಯಿಸುವಾಗ ಇದರ ಸಮಸ್ಯೆ ಕಾಡತೊಡಗಿದೆ.
ಗ್ರಾಹಕರು ಮನೆ ಬದಲಾಯಿಸುವಾಗ ತಮ್ಮ ಗೃಹ ಜ್ಯೋತಿ ನೋಂದಣಿಗಳನ್ನು ಮುಂದುವರಿಸಲು ಸಾಧ್ಯವಾಗದಿರುವ ಬಗ್ಗೆ ದೂರುಗಳನ್ನು ನೀಡುತ್ತಿದ್ದಾರೆ. ಗ್ರಾಹಕರಿಂದ ಹಲವಾರು ದೂರುಗಳನ್ನು ಸ್ವೀಕರಿಸಿದ ನಂತರ ಇಂಧನ ಇಲಾಖೆಯು ಸೇವಾ ಸಿಂಧು ಪೋರ್ಟಲ್‌ನಲ್ಲಿ ಈ ನೋಂದಣಿಗಳನ್ನು ಡಿ-ಲಿಂಕ್ ಮಾಡುವ ಸೌಲಭ್ಯವನ್ನು ಒದಗಿಸಲಾಗುವುದು ಎಂದು ಘೋಷಿಸಿದೆ. ಹಾಗಾದರೆ ಏನಿದು ಡಿ-ಲಿಂಕ್ ಸೌಲಭ್ಯ? ಇದನ್ನು ಬಳಸಿಕೊಳ್ಳುವುದು ಹೇಗೆ ಎಂದು ತಿಳಿಯೋಣ.

ಗೃಹ ಜ್ಯೋತಿ ಯೋಜನೆ ಫಲಾನುಭವಿಗಳು ಇನ್ನು ಮುಂದೆ ಬಾಡಿಗೆ ಮನೆ ಬದಲಾವಣೆ ಮಾಡಿದರೆ ಚಿಂತಿಸಬೇಕಿಲ್ಲ. ಮನೆ ಬದಲಾಯಿಸಿದವರು ಕೂಡಲೇ ಹಳೆ ಮನೆಯ ವಿಳಾಸ ವಿದ್ಯುತ್ ಸಂಪರ್ಕವನ್ನು ರದ್ದುಪಡಿಸಿ, ಹೊಸ ಮನೆಯ ವಿಳಾಸಕ್ಕೆ ಯೋಜನೆಯ ಫಲ ಪಡೆಯಬಹುದು. ಇದಕ್ಕಾಗಿ ಇಂಧನ ಇಲಾಖೆಯು ಡಿ-ಲಿಂಕ್ ಆಯ್ಕೆ ನೀಡಿದೆ.
ಹೌದು.. ನಾನಾ ಕಾರಣಕ್ಕೆ ಮನೆ ಬದಲಾಯಿಸುವವವರಿಗೆ ಹೊಸ ಮನೆಯ ಆರ್ಆರ್ ಸಂಖ್ಯೆಗೆ ತಮ್ಮ ಆಧಾರ್ ಜೋಡಣೆ ಮಾಡಿ ಗೃಹ ಜ್ಯೋತಿ ಯೋಜನೆಯ ಸೌಲಭ್ಯ ಪಡೆಯಲು ಆಗುತ್ತಿರಲಿಲ್ಲ. ಜೊತೆಗೆ. ಈ ಹಿಂದೆ ಇದ್ದ ಮನೆಯ ವಿದ್ಯುತ್ ಸಂಪರ್ಕಕ್ಕೆ ಜೋಡಣೆಯಾಗಿದ್ದ ಆಧಾರ್ ಸಂಖ್ಯೆಯನ್ನು ರದ್ದುಪಡಿಸಲು ಆಗುತ್ತಿರಲಿಲ್ಲ. ಈ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಹೊಸ ಬಾಡಿಗೆ ಮನೆಯ ಆರ್ಆರ್ ಸಂಖ್ಯೆಗೆ ಸುಲಭವಾಗಿ ನೋಂದಣಿ ಮಾಡಿಕೊಳ್ಳುವ ಸೌಲಭ್ಯ ಕಲ್ಪಿಸಲಾಗಿದೆ. ಸೇವಾ ಸಿಂಧು ತಂತ್ರಾಂಶದಲ್ಲಿ ಫಲಾನುಭವಿಗಳು ಬದಲಾವಣೆ ಮಾಡಿಕೊಳ್ಳಬಹುದು.
ಡಿ-ಲಿಂಕ್ ಎಂದರೇನು?
ಯಾವುದೇ ಫಲಾನುಭವಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು ಗೃಹ ಜ್ಯೋತಿ ಯೋಜನೆಯ ಸೇವೆ ಪಡೆಯುತ್ತಿದ್ದರೆ, ಈಗ ಬಾಡಿಗೆ ಮನೆಯನ್ನು ಬದಲಾಯಿಸಿದ್ದರೆ ಹಳೆ ನೊಂದಣಿಯನ್ನು ರದ್ದುಪಡಿಸಿಕೊಂಡು ಮತ್ತೆ ಹೊಸ ಮನೆಯ ಆರ್ಆರ್ ಸಂಖ್ಯೆ ಜೊತೆಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಇದನ್ನು ಡಿ ಲಿಂಕ್ ಪ್ರಕ್ರಿಯೆ ಎನ್ನಲಾಗುತ್ತದೆ. ಹಳೆ ಮನೆಯ ವಿದ್ಯುತ್ ಸಂಪರ್ಕದ ಆರ್‌ಆರ್ ನಂಬರ್‌ಗೆ ಜೋಡಿಸಿದ್ದ ಆಧಾರ್ ಸಂಖ್ಯೆಯನ್ನು ಡಿ ಲಿಂಕ್ ಮಾಡಬಹುದು. ಈ ನಿಟ್ಟಿನಲ್ಲಿ ವ್ಯವಸ್ಥೆ ಮಾಡುವಂತೆ ಎಲ್ಲಾ ವಿದ್ಯುತ್ ಸರಬರಾಜು ಕಂಪನಿಗಳಿಗೆ (ಎಸ್ಕಾಂ) ಇಲಾಖೆ ತಿಳಿಸಿದೆ.

"ನಮ್ಮ ಗ್ರಾಹಕರು ಮನೆಗಳನ್ನು ಬದಲಾಯಿಸಿದಾಗ ಗೃಹ ಜ್ಯೋತಿಯ ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗದಿರುವ ಬಗ್ಗೆ ನಾವು ಹಲವಾರು ದೂರುಗಳನ್ನು ಸ್ವೀಕರಿಸಿದ್ದೇವೆ. ಬೆಂಗಳೂರಿನಂತಹ ನಗರದಲ್ಲಿ, ಹೆಚ್ಚಿನ ಜನರು ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿದ್ದಾರೆ ಮತ್ತು ಈ ಗ್ರಾಹಕರ ನೆಲೆಗೆ ಸಹಾಯ ಮಾಡಲು ಈ ಆಯ್ಕೆಯನ್ನು ಒದಗಿಸುವಂತೆ ನಾವು ಇಂಧನ ಇಲಾಖೆಗೆ ಮನವಿ ಮಾಡಿದ್ದೇವೆ'' ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬಿಳಗಿ ಹೇಳಿದರು.
"ಸಂಬಂಧಿತ ಅಧಿಕಾರಿಗಳು ಪ್ರಸ್ತುತ ಸಾಫ್ಟ್‌ವೇರ್‌ನಲ್ಲಿ ಈ ಬದಲಾವಣೆಗಳನ್ನು ಮಾಡುವಲ್ಲಿ ಕೆಲಸ ಮಾಡುತ್ತಿದ್ದಾರೆ ಮತ್ತು ಮುಂದಿನ ಕೆಲವು ದಿನಗಳಲ್ಲಿ ಡಿಲಿಂಕ್ ಆಯ್ಕೆಯು ಕಾರ್ಯನಿರ್ವಹಿಸುತ್ತದೆ ಎಂದು ನಾವು ನಿರೀಕ್ಷಿಸುತ್ತಿದ್ದೇವೆ" ಎಂದು ಅವರು ಹೇಳಿದರು.
ರಾಜ್ಯ ಸರ್ಕಾರದ ಪ್ರಮುಖ ಗೃಹ ಜ್ಯೋತಿ ಯೋಜನೆಯು ರಾಜ್ಯದಾದ್ಯಂತ ಗೃಹಬಳಕೆದಾರರಿಗೆ 200 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ಅನ್ನು ಒದಗಿಸುತ್ತದೆ. ಇದು ಸರ್ಕಾರ ಒದಗಿಸಿದ ಐದು ಖಾತರಿಗಳಲ್ಲಿ ಒಂದಾಗಿದೆ.












Click it and Unblock the Notifications