ಗ್ರೇಟರ್ ಬೆಂಗಳೂರು-ಬಿಡದಿ ಸ್ಮಾರ್ಟ್ ಸಿಟಿ; ಏನಿದು ಯೋಜನೆ?, ವಿವರ
ಬೆಂಗಳೂರು, ನವೆಂಬರ್ 27; ಕರ್ನಾಟಕದ ಕಾಂಗ್ರೆಸ್ ಸರ್ಕಾರ ಬೆಂಗಳೂರು ನಗರದಿಂದ ಸುಮಾರು 35 ಕಿ. ಮೀ. ದೂರದಲ್ಲಿರುವ ರಾಮನಗರ ಜಿಲ್ಲೆಗೆ ಸೇರಿರುವ ಬಿಡದಿ ಅಭವೃದ್ಧಿಗೆ ಹೆಚ್ಚಿನ ಮಹತ್ವ ನೀಡಿದೆ. ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಈಗಾಗಲೇ ಬಿಡದಿಗೆ ನಮ್ಮ ಮೆಟ್ರೋ ಸಂಪರ್ಕ ಕಲ್ಪಿಸುವ ಮಾತುಗಳನ್ನು ಆಡಿದ್ದಾರೆ.
ಬೆಂಗಳೂರು ನಗರಕ್ಕೆ ಪರ್ಯಾಯವಾಗಿ ಕೈಗಾರಿಕೆಗಳಿಗೆ ಅನುಕೂಲವಾಗುವಂತೆ ಬಿಡದಿ ಅಭಿವೃದ್ಧಿಪಡಿಸಬೇಕು ಎಂಬುದು ಬಹಳ ಹಿಂದಿನ ಬೇಡಿಕೆಯಾಗಿದೆ. ಇದಕ್ಕಾಗಿಯೇ 8 ವರ್ಷಗಳ ಹಿಂದೆ 'ಬಿಡದಿ ಸ್ಮಾರ್ಟ್ ಸಿಟಿ ಪ್ಲಾನಿಂಗ್ ಅಥಾರಿಟಿ' ಸ್ಥಾಪನೆ ಮಾಡಲಾಗಿತ್ತು. ಈಗ ಸರ್ಕಾರ ಬಿಡದಿ ಅಭಿವೃದ್ಧಿಗೆ ಹೆಚ್ಚಿನ ಮಹತ್ವ ನೀಡಿದೆ. ಮಾಜಿ ಮುಖ್ಯಮಂತ್ರ ಎಚ್. ಡಿ. ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್‌ಗೆ ತವರು ಜಿಲ್ಲೆಯಾಗಿರುವ ರಾಮನಗರದ ಬಿಡದಿ ಮತ್ತಷ್ಟು ಅಭಿವೃದ್ಧಿಯಾಗಲಿದೆ.

ನಗರಾಭಿವೃದ್ಧಿ ಇಲಾಖೆ ಕೆಲವು ದಿನಗಳ ಹಿಂದೆ ಎಂಟು ವರ್ಷಗಳ ಹಿಂದೆ ಸ್ಥಾಪನೆ ಮಾಡಿದ್ದ ಅಥಾರಿಟಿಯನ್ನು ಮರು ನಾಮಕರಣ ಮಾಡಿ ಆದೇಶಿಸಿದೆ. ಈಗ ಅದನ್ನು ಗ್ರೇಟರ್ ಬೆಂಗಳೂರು-ಬಿಡದಿ ಸ್ಮಾರ್ಟ್ ಸಿಟಿ ಯೋಜನೆ ಎಂದು ಬದಲಾಯಿಸಲಾಗಿದೆ. ಈ ಮೂಲಕ ಬಿಡದಿಯ ಅಭಿವೃದ್ಧಿಗೆ ಸರ್ಕಾರ ಮೊದಲ ಹೆಜ್ಜೆ ಇಟ್ಟಿದೆ.
ಮುಖ್ಯಸ್ಥರ ನೇಮಕ; Greater Bengaluru-Bidadi Smart City (GBDA) ಎಂದು ಹೆಸರು ಬದಲಾವಣೆ ಮಾಡಿರುವ ಸರ್ಕಾರ ಬಿಎಂಆರ್‌ಡಿಎ ಆಯುಕ್ತರನ್ನು ಜಿಬಿಡಿಎ ಮುಖ್ಯಸ್ಥರನ್ನಾಗಿ ನೇಮಕ ಮಾಡಿದೆ. ಬಿಎಂಆರ್‌ಡಿಎ ಯೋಜನಾ ನಿರ್ದೇಶಕರು ಈ ಯೋಜನೆಗೆ ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ.
ಬಿಡದಿ ಟೌನ್ ಶಿಪ್ ಯೋಜನೆ 39 ಹಳ್ಳಿಗಳನ್ನು ಒಳಗೊಂಡ 10 ಸಾವಿರ ಎಕರೆ ಪ್ರದೇಶವನ್ನು ಒಳಗೊಂಡಿದೆ. ಬೆಂಗಳೂರು ನಗರದ ಮಾದರಿಯಲ್ಲಿ ಕೈಗಾರಿಕೆಗೆ ಅನುಕೂಲವಾಗುವಂತೆ ಬಿಡದಿಯನ್ನು ಅಭಿವೃದ್ಧಿಪಡಿಸುವುದು ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ. ನವೆಂಬರ್ 18ರಂದು ಸರ್ಕಾರ ಅಧಿಸೂಚನೆಯೊಂದನ್ನು ಪ್ರಕಟಿಸಿದೆ. ಇದರಲ್ಲಿ 'ಗ್ರೇಟರ್ ಬೆಂಗಳೂರು-ಬಿಡದಿ ಸ್ಮಾರ್ಟ್ ಸಿಟಿ ಸ್ಥಳೀಯ ಯೋಜನಾ ಪದೇಶವನ್ನು ಘೋಷಿಸಲಾಗಿರುತ್ತದೆ' ಎಂದು ಹೇಳಿದೆ.
ಈ ಕುರಿತು ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ರಾಜೇಶ್ ಎಸ್. ಸೂಳಿಕೇರಿ ಸರ್ಕಾರದ ಅಧೀನ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ ಅಧಿಸೂಚನೆ ಹೊರಡಿಸಿದ್ದಾರೆ. ಸರ್ಕಾರದ ಅಧಿಸೂಚನೆ ದಿನಾಂಕ 03/06/2016ರಲ್ಲಿ ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಅಧಿನಿಯಮ 1961ರ ಕಲಂ 4(ಎ)(1) ರಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಈ ಅಧಿಸೂಚನೆ ಹೊರಡಿಸಲಾಗಿದೆ.
ಅಧಿಸೂಚನೆ ವಿವರಗಳು; ಈ ಅಧಿಸೂಚನೆಯಲ್ಲಿ ರಾಮನಗರ ಜಿಲ್ಲೆಯ ಬಿಡದಿ ಮತ್ತು ಸುತ್ತಮುತ್ತಲಿನ 38 ಗ್ರಾಮಗಳನ್ನೊಳಗೊಂಡಂತೆ ಗ್ರೇಟರ್ ಬೆಂಗಳೂರು-ಬಿಡದಿ ಸ್ಮಾರ್ಟ್ ಸಿಟಿ ಸ್ಥಳೀಯ ಯೋಜನಾ ಪದೇಶವನ್ನು ಘೋಷಿಸಲಾಗಿರುತ್ತದೆ ಎಂದು ಹೇಳಿದೆ. ಸರ್ಕಾರದ ಅಧಿಸೂಚನೆ ದಿನಾಂಕ 21/10/2016ರಲ್ಲಿ ಗ್ರೇಟರ್ ಬೆಂಗಳೂರು-ಬಿಡದಿ ಸ್ಮಾರ್ಟ್ ಸಿಟಿ ಸ್ಥಳೀಯ ಯೋಜನಾ ಪ್ರದೇಶದ ವ್ಯಾಪ್ತಿಯಲ್ಲಿನ ಅಭಿವೃದ್ಧಿಗಳನ್ನು ನಿಯಂತ್ರಿಸಲು ಮತ್ತು ಮಹಾಯೋಜನೆ ತಯಾರಿಸಲು ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961ರ ಕಲಂ 4(ಸಿ)(1)ರಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ 'ಗ್ರೇಟರ್ ಬೆಂಗಳೂರು-ಬಿಡದಿ ಸ್ಮಾರ್ಟ್ ಸಿಟಿ ಯೋಜನಾ ಪ್ರಾಧಿಕಾರ'ವನ್ನು ರಚಿಸಿ ಆದೇಶಿಸಲಾಗಿರುತ್ತದೆ ಎಂದು ತಿಳಿಸಿದೆ.
ನಗರಗಳನ್ನು ಯೋಜನಾಬದ್ಧವಾಗಿ ಅಭಿವೃದ್ಧಿಗೊಳಿಸುವ ಉದ್ದೇಶದಿಂದ ಹಾಗೂ ಸದರಿ ಪ್ರದೇಶದ ವ್ಯಾಪ್ತಿಯಲ್ಲಿನ ಅಭಿವೃದ್ಧಿಗಳನ್ನು ನಿಯಂತ್ರಿಸಲು ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ ಅಧಿನಿಯಮ 1987ರ ಕಲಂ 3ರ ಉಪ ಕಲಂ (1) ರಡಿಯಲ್ಲಿ ಪ್ರದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ ಗ್ರೇಟರ್ ಬೆಂಗಳೂರು-ಬಿಡದಿ ಸ್ಮಾರ್ಟ್ ಸಿಟಿ ಯೋಜನಾ ಪ್ರದೇಶಕ್ಕೆ ರಚಿಸಲಾಗಿರುವ ಗ್ರೇಟರ್ ಬೆಂಗಳೂರು-ಬಿಡದಿ ಸ್ಮಾರ್ಟ್ ಸಿಟಿ ಯೋಜನಾ ಪ್ರಾಧಿಕಾರವನ್ನು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವನ್ನಾಗಿ ಮೇಲ್ದರ್ಜೆಗೇರಿಸಿ, ದಿನಾಂಕ 18/11/2023 ರಿಂದ ಜಾರಿಗೆ ಬರುವಂತೆ ಗ್ರೇಟರ್ ಬೆಂಗಳೂರು-ಬಿಡದಿ ಸ್ಮಾರ್ಟ್ ಸಿಟಿ ಸ್ಥಳೀಯ ಯೋಜನಾ ಪ್ರದೇಶದ ವ್ಯಾಪ್ತಿಯ ಅಭಿವೃದ್ಧಿಗಾಗಿ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವನ್ನು ರಚಿಸಿ ಆದೇಶಿಸಿದೆ ಎಂದು ಹೇಳಿದೆ.
ಸದರಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ ಕಾಯ್ದೆ, 1987ರ ಕಲಂ12(1) ರನ್ವಯ ಮಹಾನಗರ ಆಯುಕ್ತರು, ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರ ಇವರನ್ನು ಆಯುಕ್ತರನ್ನಾಗಿ ಹಾಗೂ ಕಲಂ3(3)(b)ರನ್ವಯ ಮಹಾನಗರ ಯೋಜಕರು, ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರ ಇವರನ್ನು ಸದಸ್ಯ ಕಾರ್ಯದರ್ಶಿಯನ್ನಾಗಿ ಈ ಕೂಡಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನೇಮಕ ಮಾಡಲಾಗಿದೆ ಎಂದು ತಿಳಿಸಿದೆ.












Click it and Unblock the Notifications