ದೇವರ ಭಕ್ತಿ, ನಂಬಿಕೆ ಬಗ್ಗೆ ಗೌರಿ ಲಂಕೇಶ್ ಹೇಳಿದ್ದ ಮಾತೇನು ಗೊತ್ತೆ?
Recommended Video

ಬೆಂಗಳೂರು, ಸೆಪ್ಟೆಂಬರ್ 6 : ಗೌರಿ ಲಂಕೇಶ್ ಪ್ರಬಲ ಎಡಪಂಥೀಯ ಪ್ರತಿಪಾದಕರಾಗಿದ್ದರು. ತಮ್ಮ ನಿಲುವು ಹಾಗೂ ಒಲವುಗಳ ಬಗ್ಗೆ ಅವರಿಗೆ ಯಾವುದೇ ಅನುಮಾನಗಳಿರಲಿಲ್ಲ. ತಿಳಿಸಬೇಕಾದ ವಿಚಾರವನ್ನು ಮುಲಾಜಿಲ್ಲದೆ ಹೇಳುತ್ತಿದ್ದ ಅವರಿಗೆ ಆ ನಂತರದ ಪರಿಣಾಮಗಳ ಬಗ್ಗೆ ಲೆಕ್ಕಾಚಾರವೂ ಇರುತ್ತಿರಲಿಲ್ಲ, ಭಯವೂ ಇರಲಿಲ್ಲ.
ಗೌರಿ ಲಂಕೇಶ್ ಹತ್ಯೆ ಪ್ರಾಥಮಿಕ ತನಿಖೆಯ ಮುಖ್ಯಾಂಶಗಳು
-ಇದು ಗೌರಿ ಲಂಕೇಶ್ ರನ್ನು ಸಂದರ್ಶನ ಮಾಡಿದ್ದ ಹಾಗೂ ನಾನಾ ಸಂದರ್ಭಗಳಲ್ಲಿ ಭೇಟಿ ಮಾಡಿ ಮಾತನಾಡಿದ್ದ ಪತ್ರಕರ್ತೆಯೊಬ್ಬರ ಮಾತಿದು. "ಜಯಮಾಲಾ ಶಬರಿಮಲೆ ದೇಗುಲ ಪ್ರವೇಶ ಮಾಡಿದ ವಿವಾದದ ಬಗ್ಗೆ ಗೌರಿ ಅವರ ಅಭಿಪ್ರಾಯ ಪಡೆಯಲು ಕಚೇರಿಗೆ ಹೋಗಿದ್ದೆ. ಆಗ ಅವರು ಹೇಳಿದ ಮಾತು ಅಕ್ಷರಶಃ ಹಾಗೇ ನೆನಪಿದೆ" ಎಂದು ಆ ಪತ್ರಕರ್ತೆ ಹೇಳಿದ್ದಾರೆ.

"ನೋಡು, ನನ್ನಂತಹವರನ್ನು ದೇವಸ್ಥಾನಕ್ಕೆ ಬಿಡಲಿಲ್ಲ ಅಂದರೆ, ಹೋಗ್ರಯ್ಯಾ ಅಂತ ವಾಪಸ್ ಬರ್ತೀನಿ. ಅಸಲಿಗೆ ಅಂಥ ಜಾಗಕ್ಕೆ ಹೋಗುವುದೇ ಇಲ್ಲ. ಆದರೆ ಸಾಮಾನ್ಯ ಮಹಿಳೆಯರ ನಂಬಿಕೆ, ಭಕ್ತಿ ಬೇರೆ ಥರ ಇರುತ್ತದೆ. ಅದರಲ್ಲೂ ಭಾರತೀಯ ಮಹಿಳೆ ಇನ್ನಷ್ಟು ಭಾವುಕಳು. ಅಂಥದ್ದರಲ್ಲಿ ದೇವಸ್ಥಾನದೊಳಗೆ ಬಿಡಲ್ಲ ಅನ್ನೋ ಈ ಜನ ಎಂಥವರು?" ಎಂದಿದ್ದರು ಎಂಬುದನ್ನು ಆಕೆ ನೆನಪಿಸಿಕೊಳ್ಳುತ್ತಾರೆ.
ವಿಶ್ವವಿದ್ಯಾಲಯದ ಕಾರ್ಯಕ್ರಮವೊಂದರಲ್ಲಿ ಭೇಟಿ ಆಗಿದ್ದಾಗ ಗುಬ್ಬಿಯಲ್ಲಿ ನಡೆದಿದ್ದ ದಲಿತ ಯುವಕ ಅಭಿಷೇಕ್ ಮೇಲಿನ ಹಲ್ಲೆ ಪ್ರಕರಣದ ಬಗ್ಗೆ ಕೇಳಿದ್ದನ್ನು ಹಾಗೂ ಸಿಪಿಐ ಕಾರ್ಯಕರ್ತರ ಮೇಲೆ ಹಾಕಿದ್ದ ದೇಶದ್ರೋಹ ಪ್ರಕರಣದ ಬಗ್ಗೆ ತಾವು ಪರಮೇಶ್ವರ್ ಜತೆಗೆ ಮಾತನಾಡಿದ್ದನ್ನು ಗೌರಿ ಹೇಳಿಕೊಂಡಿದ್ದಾರೆ.
ಗೌರಿ ಲಂಕೇಶ್ ರನ್ನು ನೋಡಿದರೆ ಗುಬ್ಬಚ್ಚಿ ಮರಿಯಂತಾಗಿದ್ದರು. ಮೂಳೆ-ಚಕ್ಕಳ ಕಾಣಿಸುವಂತಾಗಿದ್ದ ಆಕೆಯನ್ನು ನೋಡುವಾಗ, ಆರೋಗ್ಯ ಹೇಗಿದೆ ಎಂದು ಕೇಳುವ ಮನಸ್ಸಾಗುತ್ತಿತ್ತು. ಯಾವುದೇ ಹತ್ಯೆ ಖಂಡನೀಯ. ಅದರಲ್ಲೂ ಪತ್ರಕರ್ತೆ- ಸಾಮಾಜಿಕ ಕಾರ್ಯಕರ್ತೆಯ ಹತ್ಯೆ ತೀರಾ ಆತಂಕ ಸೃಷ್ಟಿಸುತ್ತದೆ ಎಂದು ಮೌನಕ್ಕೆ ಶರಣಾದರು ಆ ಪತ್ರಕರ್ತೆ.












Click it and Unblock the Notifications