ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಚಿನ್ನ ಪತ್ತೆ
ಬೆಂಗಳೂರು, ಸೆ. 26 : ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಗುರುವಾರ ಚಿನ್ನದ ಗಟ್ಟಿಗಳು ಪತ್ತೆಯಾಗಿವೆ. ದುಬೈಗೆ ತೆರಳಲಿದ್ದ ವಿಮಾನವೊಂದರಲ್ಲಿ ಚಿನ್ನದ ಗಟ್ಟಿ ಕಂಡುಬಂದಿದ್ದು ಎರಡು ಗಂಟೆ ತಡವಾಗಿ ವಿಮಾನ ಕೆಂಪೇಗೌಡ ವಿಮಾನ ನಿಲ್ದಾಣ ಬಿಟ್ಟಿದೆ.
ದುಬೈಗೆ ತೆರಳಲಿದ್ದ ಎಮಿರೈಟ್ಸ್ ವಿಮಾನದಲ್ಲಿ 14 ಲಕ್ಷ ರೂ. ಮೌಲ್ಯದ 464 ಗ್ರಾಂ ಚಿನ್ನದ ಗಟ್ಟಿ ಕಂಡುಬಂದಿದೆ. ಬೆಂಗಳೂರಿನ ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ನಡೆಸಿದ ವೇಳೆ ಪ್ರಯಾಣಿಕರ ಕ್ಯಾಬಿನ್‌ನಲ್ಲಿ ಚಿನ್ನ ಪತ್ತೆಯಾಗಿದೆ. ಪ್ರತಿಯೊಂದು ಗಟ್ಟಿಯೂ 116 ಗ್ರಾಂ ತೂಕವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.(ಬಜ್ಪೆ ವಿಮಾನ ನಿಲ್ದಾಣದಲ್ಲಿ ಚಿನ್ನದ ಸ್ಮಗ್ಲರ್ ಬಂಧನ)

ದುಬೈನಿಂದ ಚಿನ್ನ ತಂದಿದ್ದವರು ಇಲ್ಲಿನ ಭದ್ರತೆಗೆ ಹೆದರಿ ವಿಮಾನದಲ್ಲೇ ಬಿಟ್ಟು ತೆರಳಿದ್ದಾರೆ. ಆಗಮಿಸಿದ ಪ್ರಯಾಣಿಕರ ಮಾಹಿತಿ ಕಲೆಹಾಕಲಾಗುತ್ತಿದ್ದು ಶೀಘ್ರವೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.(ಸ್ಮಗ್ಲಿಂಗ್: ಸಿಬಿಐನಿಂದ ಮಲ್ಲು ಸುಂದರಿ ವಿಚಾರಣೆ)
ಪ್ರಯಾಣಿಕರಿಗೆ ಘಟನೆ ಅರಿವಿಲ್ಲ
ದುಬೈಗೆ ತೆರಳಲಿದ್ದ ಪ್ರಯಾಣಿಕರಿಗೆ ಘಟನೆಯ ಅರಿವಿರಲಿಲ್ಲ. ವಿಮಾನ ಎರಡು ಗಂಟೆ ತಡವಾಗಿ ಹೊರಡಲಿದೆ ಎಂದಷ್ಟೇ ಘೋಷಣೆ ಮಾಡಲಾಗಿತ್ತು. ಚಿನ್ನದ ಗಟ್ಟಿ ಕಂಡುಬಂದ ಜಾಗದ ಸಮೀಪ ಕುಳಿತಿದ್ದ ಪ್ರಯಾಣಿಕರನ್ನು ಅಧಿಕಾರಿಗಳು ಪ್ರಶ್ನಿಸಿದಾಗಲೇ ಬಂಗಾರ ಕಂಡುಬಂದ ಸಂಗತಿ ಅರಿವಿಗೆ ಬಂದಿದೆ. ಆದರೆ ಅಧಿಕಾರಿಗಳಿಗೆ ಇಲ್ಲಿ ಯಾವ ಹೆಚ್ಚಿನ ಮಾಹಿತಿ ಸಿಕ್ಕಿಲ್ಲ.












Click it and Unblock the Notifications