ಅತ್ಯಾಚಾರದ ರಾಜಧಾನಿಯಾಗುತ್ತಿದೆಯೇ ಬೆಂಗಳೂರು?
ಬೆಂಗಳೂರು, ಸೆ. 10 : ನೇಪಾಳಿ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದ್ದ ಘಟನೆ ಮಾಸುವ ಮುನ್ನವೇ ರಾಜಧಾನಿಯಲ್ಲಿ ಮತ್ತೆರಡು ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ.
ವಿದೇಶಿ ವ್ಯಕ್ತಿಯೊಬ್ಬ ನನ್ನ ಮೇಲೆ ನಿರಂತರವಾಗಿ ಅತ್ಯಾಚಾರ ನಡೆಸುತ್ತಿದ್ದ ಎಂದು ಹರಿಯಾಣದ ಮಹಿಳೆಯೊಬ್ಬರು ದೇವನಹಳ್ಳಿ ಠಾಣೇಗೆ ದೂರು ನೀಡಿದ್ದಾರೆ. ಇತ್ತ ಟ್ಯೂಷನ್‌ಗೆ ತೆರಳಿದ್ದ ಬಾಲಕಿ ಮೇಲೆ ಅತ್ಯಾಚಾರ ಮಾಡಲಾಗಿದೆ ಎಂದು ಮನೆ ಪಾಠದ ಶಿಕ್ಷಕನ ಮೇಲೆ ಬಾಲಕಿ ಪಾಲಕರು ದೂರು ದಾಖಲಿಸಿದ್ದಾರೆ.
ಪ್ರಕರಣ 1
ಹಾಲೆಂಡ್ ಮೂಲದ ವಿದೇಶಿಗನೊಬ್ಬ ಕಳೆದ ಜನವರಿಯಿಂದ ನನ್ನ ಮೇಲೆ ನಿರಂತರ ಅತ್ಯಾಚಾರ ಎಸಗಿದ್ದಾನೆ. ಮದುವೆಯಾಗುವುದಾಗಿ ನಂಬಿಸಿ ವಂಚಿಸಿದ್ದಾನೆ ಎಂದು ಮಹಿಳೆಯೊಬ್ಬರು ಕೆಂಪೇಗೌಡ ವಿಮಾಣ ನಿಲ್ದಾಣ ಠಾಣೆಗೆ ಸೆ. 9ರ ಮಧ್ಯರಾತ್ರಿ ದೂರು ದಾಖಲಿಸಿದ್ದರು.
ಆರೋಪಿ ಪೀಟರ್(33) ಎಂಬಾತನನ್ನು ದೇವನಳ್ಳಿ ಸ್ವಿಸ್ ಟೌನ್‌ನಲ್ಲಿ ಬಂಧಿಸಿರುವ ಪೊಲೀಸರು ಮಹಿಳೆ ಸೇರಿದಂತೆ ಇಬ್ಬರಿಗೂ ಅಂಬೇಡ್ಕರ್ ವೈದ್ಯಕೀಯ ವಿದ್ಯಾಲಯದಲ್ಲಿ ಪರೀಕ್ಷೆ ಮಾಡಿಸಿದ್ದಾರೆ.
ಮಹಿಳೆ ತಾನು ಒಮ್ಮೆ ಗರ್ಭಿಣಿಯಾಗಿದ್ದು ಆರೋಪಿ ಅಬಾರ್ಶನ್ ಮಾಡಿಸಿದ್ದ ಎಂದೂ ಆರೋಪಿಸಿದ್ದಾರೆ.
ಪ್ರಕರಣ 2
ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್ ಠಾಣೆಯಲ್ಲಿ ಶಿಕ್ಷಕನ ಮೇಲೆ ಬಾಲಕಿ ಪಾಲಕರು ಅತ್ಯಾಚಾರದ ಪ್ರಕರಣ ದಾಖಲಿಸಿದ್ದಾರೆ. ಕಾಮುಕ ಶಿಕ್ಷಕ ಬಿಜು(30) ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದು ವಿಚಾರಣೆ ನಡೆಸುತ್ತಿದ್ದಾರೆ. ಸುಮಾರು 8 ರಿಂದ 10 ಮಕ್ಕಳಿಗೆ ಮನೆಪಾಠ ಹೇಳುವ ಬಿಜು ಖಾಸಗಿ ಕಂಪನಿಯೊಂದರಲ್ಲೂ ಕೆಲಸ ಮಾಡುತ್ತಿದ್ದ.
ಎಂದಿನಂತೆ ಟ್ಯೂಷನ್‌ಗೆ ತೆರಳಿದ್ದ ಬಾಲಕಿ ಮನೆ ಬಂದಾಗ ತುಂಬಾ ಖಿನ್ನವಾಗಿದ್ದಳು. ಈ ಬಗ್ಗೆ ಪಾಲಕರು ವಿಚಾರಿಸಿದಾಗ ಸರಿಯಾದ ಉತ್ತರ ನೀಡಲಿಲ್ಲ. ಮತ್ತೊಮ್ಮೆ ಕೇಳಿದಾಗ ಶಿಕ್ಷಕನ ನೀಚ ಕೃತ್ಯದ ಬಗ್ಗೆ ಹೇಳಿದ್ದಾಳೆ.
ತಕ್ಷಣವೇ ಪಾಲಕರು ಎಚ್ಎಸ್ಆರ್ ಲೇಔಟ್ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ.
ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು ನಿರಂತರ ಅತ್ಯಾಚಾರ ನಡೆದಿರುವುದು ಸ್ಪಷ್ಟ ಎಂದು ಹೇಳಲಾಗಿದೆ.












Click it and Unblock the Notifications