'ಮಸಾಲೆ ದೋಸೆ ಕೊಡಿ' ಎಂದು ಕನ್ನಡದಲ್ಲಿ ಕೇಳಿದ ಜರ್ಮನ್ ರಾಯಭಾರ ಕಚೇರಿ ಅಧಿಕಾರಿಗಳು!
ಬೆಂಗಳೂರು, ಆಗಸ್ಟ್ 27: ಬೆಂಗಳೂರಿನಲ್ಲಿ ಜರ್ಮನ್ ರಾಯಭಾರ ಕಚೇರಿ ಅಧಿಕಾರಿಗಳು ಲಾಲ್‌ಬಾಗ್‌ನ ಎಂಟಿಆರ್ ಟಿಫನ್ ರೂಂನಲ್ಲಿ ಕನ್ನಡದಲ್ಲೇ ಮಸಾಲೆ ದೋಸೆ ಕೇಳಿ ಪಡೆದು ಸಖತ್ತಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿರುವ ವಿಡಿಯೋ ಈಗ ವೈರಲ್ ಆಗಿದೆ.
ಕರ್ನಾಟಕ ಮತ್ತು ಕೇರಳಕ್ಕೆ ಬೆಂಗಳೂರಿನಲ್ಲಿ ಜರ್ಮನ್ ಕಾನ್ಸುಲ್ ಆಗಿರುವ ಅಚಿಮ್ ಬುರ್ಕಾರ್ಟ್ ಅವರು ತಮ್ಮ ಮತ್ತೊಬ್ಬ ಸಹೋದ್ಯೋಗಿಯೊಂದಿಗೆ ಲಾಲ್‌ಬಾಗ್ ಬಳಿಯ ಬೆಂಗಳೂರಿನ ಪ್ರಸಿದ್ಧ ಮಾವಳ್ಳಿ ಟಿಫಿನ್ ರೂಮ್‌ಗೆ (ಎಂಟಿಆರ್) ಮಸಾಲೆ ದೋಸೆಗಾಗಿ ಭೇಟಿ ನೀಡಿದ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ.
ಇಬ್ಬರು ಜರ್ಮನ್ ರಾಯಭಾರ ಕಚೇರಿ ಅಧಿಕಾರಿಗಳು ಲಾಲ್‌ಬಾಗ್‌ನ ಎಂಟಿಆರ್ ಟಿಫನ್ ರೂಂನಲ್ಲಿ 'ಮಸಾಲೆ ದೋಸೆ ಕೊಡಿ' ಎಂದು ಹೋಟೆಲ್ ಸಿಬ್ಬಂದಿಗೆ ಕನ್ನಡದಲ್ಲಿ ಹೇಳಿದ್ದಾರೆ. ಅಧಿಕಾರಿಯು ಮೊದಲು ನಿಮ್ಮ ಹೋಟೆಲ್ ವಿಶೇಷವೇನು ಎಂದು ಕೇಳಿದ್ದಾರೆ. ಅದಕ್ಕೆ ಹೋಟೆಲ್ ಸಿಬ್ಬಂದಿ ನಮ್ಮಲ್ಲಿ ರವೆ ಇಡ್ಲಿ ಮತ್ತು ಮಸಾಲೆ ದೋಸೆ ಎಂದು ಹೇಳಿದರು.
ಅದಕ್ಕೆ ಜರ್ಮನ್ ರಾಯಭಾರ ಅಧಿಕಾರಿ ನನಗೆ ಒಂದು ಮಸಾಲೆ ದೋಸೆ ಕೊಡಿ ಎಂದು ಕನ್ನಡದಲ್ಲಿ ಸೂಚನೆ ನೀಡಿದ್ದಾರೆ. ಮತ್ತೊಬ್ಬರು ಹಾಗೆಯೇ ನನಗೆ ಒಂದು ಬಾಟಲ್ ನೀರು ಕೊಡಿ ಎಂದು ಕನ್ನಡದಲ್ಲೇ ಹೇಳಿದರು. ಅವರು ದೆಹಲಿಯ ಜರ್ಮನ್ ರಾಯಭಾರ ಕಚೇರಿಯ ವಿಜ್ಞಾನ ಮತ್ತು ತಂತ್ರಜ್ಞಾನದ ಮುಖ್ಯಸ್ಥ ಕಾಸ್ಪರ್ ಮೇಯರ್ ಆಗಿದ್ದಾರೆ. ಅವರು ಅಚಿಮ್ ಬುರ್ಕಾರ್ಟ್ ನ ಮತ್ತೊಬ್ಬ ಸಹೋದ್ಯೋಗಿಯಾಗಿದ್ದಾರೆ.

ಜರ್ಮನ್ ಅಧಿಕಾರಿ: ಎಂಟಿಆರ್‌ನಲ್ಲಿ ವಿಶೇಷತೆ ಏನು?
ಜರ್ಮನ್ ಅಧಿಕಾರಿ: ನಮಸ್ಕಾರ,
ಎಂಟಿಆರ್ ಹೋಟೆಲ್ ಸಿಬ್ಬಂದಿ: ನಮಸ್ತೆ,
ಜರ್ಮನ್ ಅಧಿಕಾರಿ: ಎಂಟಿಆರ್‌ನಲ್ಲಿ ವಿಶೇಷತೆ ಏನು?
ಎಂಟಿಆರ್ ಸಿಬ್ಬಂದಿ: "ರವಾ ಇಡ್ಲಿ ಮತ್ತು ಮಸಾಲೆ ದೋಸೆ"
ಜರ್ಮನ್ ಅಧಿಕಾರಿ: ನನಗೆ ಒಂದು ಮಸಾಲೆ ದೋಸೆ ಕೊಡಿ ಎನ್ನುತ್ತಾರೆ.
ಅದಕ್ಕೆ ಪಕ್ಕದಲ್ಲೇ ಇದ್ದ ಅವರ ಸಹೋದ್ಯೋಗಿ ಒಬ್ಬರು ದಯವಿಟ್ಟು ನನಗೂ ಒಂದು ಮಸಾಲೆ ದೋಸೆ ಕೊಡಿ ಎಂದು ಕನ್ನಡದಲ್ಲೇ ಕೇಳಿದರು.

ನಮಗೆ ಗೊತ್ತಿರುವ ಕನ್ನಡ ಅಷ್ಟೆ
ದೆಹಲಿ ಅಧಿಕಾರಿ ಕಾಸ್ಪರ್ ಮೇಯರ್ ಮುಂದುವರಿದು "ಅಮೆಲೆ ಒಂದು ಬಾಟಲ್ ನೀರು ಎಂದು ಕೇಳಿ ಪಡೆದರು. ಇದು ನಮಗೆ ಗೊತ್ತಿರುವ ಕನ್ನಡ ಅಷ್ಟೆ!" ಎಂದು ಜರ್ಮನ್ ರಾಯಭಾರ ಕಚೇರಿ ಅಧಿಕಾರಿ ಹೇಳಿ ನಂತರ "ಸಕ್ಕತಾಗಿದೇ" ಎಂದು ಉದ್ಗರಿಸುತ್ತಾರೆ. ಈ ವಿಡಿಯೋ ಈಗ ವೈರಲ್ ಆಗಿದೆ. ಬೆಂಗಳೂರಿನಲ್ಲಿ ಕನ್ನಡ ಎಲ್ಲಿ ಎಂದು ಕೇಳುವವರ ಮಧ್ಯೆ ಜರ್ಮನ್ ರಾಯಭಾರ ಕಚೇರಿ ಅಧಿಕಾರಿಗಳು ಬೆಂಗಳೂರಿನಲ್ಲಿ ಎಂಟಿಆರ್ ಹೋಟೆಲ್‌ನಲ್ಲಿ ಕನ್ನಡದಲ್ಲೇ ಮಾತನಾಡಿ ಮಸಾಲೆ ದೋಸೆ ಸವಿದು ಸಕ್ಕತ್ತಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದು ಹೋಟೆಲ್ ಸಿಬ್ಬಂದಿಯೊಂದಿಗೆ ಸಾಕಷ್ಟು ಕನ್ನಡಿಗರ ಹೃದಯವನ್ನು ಗೆದ್ದಿದ್ದಾರೆ.

ಕೌಲಾಲಂಪುರ, ಲಂಡನ್ ಮತ್ತು ದುಬೈನಲ್ಲಿ ಶಾಖೆ
ಮಾವಳ್ಳಿ ಟಿಫಿನ್ ರೂಮ್(ಎಂಟಿಆರ್) ಕರ್ನಾಟಕ ಸೇರಿದಂತೆ ಭಾರತದಾದ್ಯಂತದ ಅತಿದೊಡ್ಡ ಆಹಾರ ಬ್ರಾಂಡ್‌ಗಳಲ್ಲಿ ಒಂದಾಗಿದೆ. ಒಂದೇ ಸ್ಥಳದಲ್ಲಿ ಪ್ರಾರಂಭವಾಗಿ ಈಗ ನಗರದಲ್ಲಿ ಹತ್ತು ಶಾಖೆಗಳನ್ನು ಹೊಂದಿದ್ದು, ಉಡುಪಿ, ಮೈಸೂರು, ಸಿಂಗಾಪುರ, ಕೌಲಲಂಪುರ, ಲಂಡನ್ ಮತ್ತು ದುಬೈಗೆ ಹೋಟೆಲ್ ಉದ್ಯಮ ವಿಸ್ತರಿಸಿದೆ.

ಕನ್ನಡಿಗರ ಹೃದಯಗಳನ್ನು ಗೆದ್ದರು
"ನನ್ನ ಇಬ್ಬರು ಸಹೋದ್ಯೋಗಿಗಳು ಕನ್ನಡದಲ್ಲಿ ಆಹಾರವನ್ನು ಆರ್ಡರ್ ಮಾಡಲು ಪ್ರಯತ್ನಿಸುತ್ತಿದ್ದಾರೆ ಅವರು ಹೇಗೆ ಮಾಡಿದರು ಎಂದು ನೀವು ಯೋಚಿಸುತ್ತೀರಿ? 😂 @KasparJoMeyer @GermanyinIndia" ಎಂದು ಬುರ್ಕಾರ್ಟ್ ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ಈ ವೀಡಿಯೊ ಕನ್ನಡ ಮಾತನಾಡುವ ಹೃದಯಗಳನ್ನು ಗೆದ್ದಿದೆ. ಅಂತರ್ಜಾಲದಲ್ಲಿ ಕನ್ನಡ ಕಲಿಯಲು ಜರ್ಮನ್ನರ ಪ್ರಯತ್ನವನ್ನು ಶ್ಲಾಘಿಸಿದ್ದಾರೆ. ವಿಶ್ವದ ಅತ್ಯಂತ ಹಳೆಯ ಮತ್ತು ಸುಂದರವಾದ ಭಾಷೆಗಳಲ್ಲಿ ಒಂದಾದ ಕನ್ನಡದಲ್ಲಿ ಮಾತನಾಡಿದ್ದಕ್ಕಾಗಿ ಧನ್ಯವಾದಗಳು ಎಂದು ಟ್ವಿಟರ್ ಬಳಕೆದಾರರಾದ ಮಹೇಶ್ ಕುಮಾರ್ ಹೇಳಿದ್ದಾರೆ.












Click it and Unblock the Notifications