ನಾಲ್ಕು ದಿನದಲ್ಲಿ ಬಗೆಹರಿಯಲಿದೆ ಬೆಂಗಳೂರಿನ ಕಸದ ಸಮಸ್ಯೆ
ಬೆಂಗಳೂರು, ನವೆಂಬರ್ 09 : 'ಬೆಂಗಳೂರು ನಗರದಲ್ಲಿ ಉಂಟಾಗಿರುವ ಕಸದ ಸಮಸ್ಯೆಯನ್ನು ನಾಲ್ಕು ದಿನದಲ್ಲಿ ಬಗೆಹರಿಸಲಾಗುತ್ತದೆ. ಹಬ್ಬದ ಸಮಯದಲ್ಲಿ ಶೇಕಡಾ 20 ರಷ್ಟು ಹೆಚ್ಚು ಕಸ ಸಂಗ್ರಹಣೆಯಾಗಲಿದ್ದು, ಅದನ್ನು ವಿಲೇವಾರಿ ಮಾಡಲು ಯೋಜನೆ ರೂಪಿಸಲಾಗಿದೆ' ಎಂದು ಮೇಯರ್ ಮಂಜುನಾಥ ರೆಡ್ಡಿ ಹೇಳಿದರು.
ಸೋಮವಾರ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಮಂಗಮ್ಮನ ಪಾಳ್ಯವಾರ್ಡ್‍ನಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಬಿಬಿಎಂಪಿ ಮೇಯರ್ ಮಂಜುನಾಥ ರೆಡ್ಡಿ ಅವರು, 'ಕಳೆದ ಒಂದು ವಾರದಿಂದ ನಗರದಲ್ಲಿ ಕಸ ವಿಲೇವಾರಿಯಲ್ಲಿ ಸಮಸ್ಯೆ ಉಂಟಾಗಿದೆ. 4 ದಿನದಲ್ಲಿ ಈ ಸಮಸ್ಯೆಗೆ ಪರಿಹಾರ ಸಿಗಲಿದೆ'. ಎಂದರು. [ಕಸದ ಸಮಸ್ಯೆ : ಗ್ರಾಮಸ್ಥರೊಂದಿಗೆ ಸಿಎಂ ಸಭೆ]

'ನಗರದ ಕಸವನ್ನು ವಿಲೇವಾರಿ ಮಾಡಲು ಲಾರಿಗಳು ಹಗಲು ರಾತ್ರಿ ಕಾರ್ಯನಿರ್ವಹಿಸುತ್ತಿವೆ. ದೀಪಾವಳಿ ಹಬ್ಬದ ಸಮಯದಲ್ಲಿ ಶೇಕಡಾ 20 ರಷ್ಟು ಹೆಚ್ಚು ಕಸ ಸಂಗ್ರಹಣೆಯಾಗುತ್ತದೆ. ಈ ಹಿನ್ನಲೆಯಲ್ಲಿ ಸಂಪೂರ್ಣ ಕಸ ವಿಲೇವಾರಿಯಾಗಲು ನಾಲ್ಕು ದಿನ ಬೇಕಾಗುತ್ತದೆ ಎಂದು ಮೇಯರ್ ತಿಳಿಸಿದರು. [ಬೆಂಗಳೂರಲ್ಲಿ ಕಸ ಉಚಿತ, ಕಾಯಿಲೆ ಖಚಿತ]
ಮನವೊಲಿಸಿರುವ ಸಿದ್ದರಾಮಯ್ಯ : 'ದೊಡ್ಡಬಳ್ಳಾಪುರ ಸಮೀಪದ ಟೆರಾಫಾರ್ಮ ಮತ್ತು ಎಂಎಸ್ಜಿಪಿ ತ್ಯಾಜ್ಯ ವಿಲೇವಾರಿ ಘಟಕಗಳಿಗೆ ಸಾಗಣೆಯಾಗುತ್ತಿರುವ ಕಸದ ಪ್ರಮಾಣ ಕಡಿಮೆ ಮಾಡಲಾಗುವುದು. 2016ರ ಮಾರ್ಚ್ ಅಂತ್ಯದ ವೇಳೆಗೆ ಟೆರಾಫಾರ್ಮ ಘಟಕ ಬಂದ್ ಮಾಡುವುದಾಗಿ' ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗ್ರಾಮಸ್ಥರಿಗೆ ಭರವಸೆ ನೀಡಿದ್ದಾರೆ. [ಕಸದ ಲಾರಿ ಬಿಂಗೀಪುರಕ್ಕೆ ಬರೋಲ್ಲ ಮೇಯರ್ ಭರವಸೆ]
ಟೆರಾಫಾರ್ಮ ಮತ್ತು ಎಂಎಸ್ಜಿಪಿ ತ್ಯಾಜ್ಯ ವಿಲೇವಾರಿ ಘಟಕಗಳಿಂದ ಆಗುತ್ತಿರುವ ಸಮಸ್ಯೆ ನಿವಾರಿಸುವಂತೆ ಒತ್ತಾಯಿಸಿ ಸುತ್ತ ಮುತ್ತಲ ಗ್ರಾಮದವರು ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಕಸದ ಸಮಸ್ಯೆ ಉಂಟಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಗೃಹ ಕಚೇರಿ ಕೃಷ್ಣಾದಲ್ಲಿ ಸ್ಥಳೀಯ ಮುಖಂಡರ ಜೊತೆ ಸಭೆ ನಡೆಸಿ ಅವರ ಮನವೊಲಿಸಿದ್ದಾರೆ.
ರಸ್ತೆ ಕಾಮಗಾರಿಗೆ ಚಾಲನೆ : ಸೋಮವಾರ ಮೇಯರ್ ಮಂಜುನಾಥ ರೆಡ್ಡಿ ಅವರು ಮಂಗಮ್ಮನ ಪಾಳ್ಯದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ್ದಾರೆ. ಮಂಗಮ್ಮನ ಪಾಳ್ಯ ಮುಖ್ಯರಸ್ತೆಯಿಂದ ಗಾರೆಬಾವಿಪಾಳ್ಯದ ವರೆಗೆ ಸುಮಾರು 1.23 ಕೋಟಿ ರೂಪಾಯಿ ವೆಚ್ಚದಲ್ಲಿ ರಸ್ತೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ.












Click it and Unblock the Notifications