Waqf Property: ರೈತರಿಗೆ ಹೆಚ್ಚು ನೋಟಿಸ್ ನೀಡಿದ್ದೇ ಬಿಜೆಪಿ ಸರ್ಕಾರ, ಯತ್ನಾಳ್ ಹೋರಾಟ: ಜಿ.ಪರಮೇಶ್ವರ ಹೇಳಿದ್ದೇನು?
ಬೆಂಗಳೂರು, ನವೆಂಬರ್ 25: ರಾಜ್ಯದಲ್ಲಿ ವಕ್ಫ್ ವಿಚಾರವಾಗಿ ರೈತರಿಗೆ ವಕ್ಫ್ ನೋಟಿಸ್ ವಿಚಾರದಲ್ಲಿ ನಮ್ಮ ಸರ್ಕಾರದ ಮೇಲೆ ಮಾಡುತ್ತಿದ್ದ ಆಪಾದನೆ ಏನೆಂಬ ಸತ್ಯ ಬಯಲಾಗಿದೆ. ರೈತರಿಗೆ ಅತೀ ಹೆಚ್ಚು ನೋಟಿಸ್ ಜಾರಿ ಮಾಡಿದ್ದ ಬಿಜೆಪಿ ಅವಧಿಯಲ್ಲಿ. ಇದರ ವಿರುದ್ಧ ಸ್ವಪಕ್ಷದವರೇ ಬಿಜೆಪಿಗೆ ಮುಖಭಂಗ ಮಾಡಲು ಹೋರಾಟ ನಡೆಸಲಿದ್ದಾರೆ ಎಂದು ಗೃಹ ಸಚಿವ ಪರಮೇಶ್ವರ ಅವರು ಹೇಳಿದರು.
ಸೋಮವಾರ ಬೆಂಗಳೂರಿನಲ್ಲಿ ಸುದ್ದಿಗಾರ ಜತೆ ಮಾತನಾಡಿದ ಅವರು, ಸತ್ಯ ಯಾವತ್ತೂ ಹೆಚ್ಚು ದಿನ ಮುಚ್ಚಿಡಲು ಆಗುವುದಿಲ್ಲ. ರೈತರಿಗೆ ನೋಟಿಸ್ ಕೊಡ್ಡಿದ್ದೇವೆ ಎಂದು ನಮ್ಮ ಸರ್ಕಾರದ ಮೇಲೆ ಆಪಾದನೆ ಮಾಡುತ್ತಿದ್ದರು. ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಮತ್ತು ಬಸವರಾಜ್ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ರೈತರಿಗೆ ಹೆಚ್ಚು ನೋಟಿಸ್ ಕೊಡಲಾಗಿದೆ. ಈಗ ಬಿಜೆಪಿಯವರು ಏನು ಹೇಳುತ್ತಾರೆ ಎಂದು ಅವರು ಪ್ರಶ್ನಿಸಿದರು.

2900 ಎಕರೆಗೆ ನೋಟಿಸ್ ಜಾರಿಯಾಗಿತ್ತು
ಮಾಜಿ ಶಾಸಕ ಕುಮಾರ್ ಬಂಗಾರಪ್ಪ ಅವರ ಅಧ್ಯಕ್ಷತೆಯಲ್ಲಿ ಸಮಿತಿ ಮಾಡಿ ನೋಟಿಸ್ ಜಾರಿ ಮಾಡಿದ್ದಾರೆ. ಸುಮಾರು 2900 ಎಕರೆಗೆ ನೋಟಿಸ್ ನೀಡಿದ್ದಾರೆ. ಸಿದ್ದರಾಮಯ್ಯನವರ ಕಾಲದಲ್ಲಿ ಕೇವಲ 300 ಎಕರೆಗೆ ನೋಟಿಸ್ ನೀಡಲಾಗಿದೆ. ವಕ್ಫ್ ವಿಚಾರವನ್ನಿಟ್ಟುಕೊಂಡು ರಾಜ್ಯ ಸುತ್ತಲು ಹೊರಟಿರುವ ಬಿಜೆಪಿ ನಾಯಕರು, ಯಾರು ಜಾಸ್ತಿ ನೋಟಿಸ್ ನೀಡಿದ್ದು? ಯಾರ ಮೇಲೆ ಆಪಾದನೆ ಮಾಡಬೇಕು? ಎಂಬುದನ್ನು ಈಗಲಾದರು ಅರ್ಥ ಮಾಡಿಕೊಳ್ಳಬೇಕು ಎಂದು ತಿವಿದರು.
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ವಕ್ಫ್ ವಿಚಾರದಲ್ಲಿ ಬಿಜೆಪಿಯವರ ಮುಖಭಂಗ ಮಾಡಲು ಹೋರಾಟಕ್ಕೆ ಮುಂದಾಗಿದ್ದಾರೆ. ಯಡಿಯೂರಪ್ಪ ಮತ್ತು ಬಸವರಾಜ್ ಬೊಮ್ಮಾಯಿ ಅವಧಿಯಲ್ಲಿ ಹೆಚ್ಚು ನೋಟಿಸ್ ಕೊಟ್ಟಿರುವುದು ಗೊತ್ತಾಗಿಯೇ ಬಿಜೆಪಿಯವರಿಗೆ ಮುಜುಗರ ಮಾಡಲು ಹೋರಾಟ ಮಾಡುತ್ತಿದ್ದಾರೆ ಎಂದು ಕುಟುಕಿದರು.
ನಾವು ವಿರೋಧ ಪಕ್ಷದಲ್ಲಿದ್ದಾಗ ರೈತರಿಗೆ ನೋಟಿಸ್ ನೀಡಿರುವ ವಿಚಾರ ನಮ್ಮ ಗಮನಕ್ಕೆ ಬಂದಿಲ್ಲ. ಹಾಗಾಗಿ ನಾವು ಆ ವಿಚಾರವನ್ನು ಕೈಗೆತ್ತಿಕೊಂಡಿಲ್ಲ. ಈಗ ನಮ್ಮ ಗಮನಕ್ಕೆ ಬಂದಿದೆ. ಎಚ್ಚರಿಕೆ ವಹಿಸಿಕೊಂಡು ಕೆಲಸ ಮಾಡುತ್ತೇವೆ ಎಂದು ಹೇಳಿದರು.

ಇವಿಎಂ ದೋಷದ ಹೇಳಿಕೆಗೆ ಗೃಹ ಸಚಿವರ ತಿರುಗೇಟು
ಗೆದ್ದರೆ ಜನಾದೇಶ, ಸೋತರೆ ಇವಿಎಂ ದೋಷ ಎಂಬ ಸಿ.ಟಿ.ರವಿ ಹೇಳಿಕೆಯ ಕುರಿತು ಪ್ರತಿಕ್ರಿಯಿಸಿದರು. ನಾವು ಮೊದಲಿಂದಲೂ ಹೇಳುತ್ತಿದ್ದೇವೆ, ಗೆದ್ದಾಗಲೂ ಹೇಳಿದ್ದೇವೆ. ನಾನು ಹೇಳಿದ್ದು ಏನು ಎಂದು ಸರಿಯಾಗಿ ಅರ್ಥಮಾಡಿಕೊಳ್ಳಲು ಹೇಳಿ. ಇವಿಎಂ ದುರ್ಬಳಕೆ ಸೆಲೆಕ್ಟಿವ್ ಆಗಿ ಮಾಡುತ್ತಾರೆ. ಸೆಲೆಕ್ಟೀವ್ ಆಗಿ ರಾಜ್ಯ ಆಯ್ಕೆ ಮಾಡುತ್ತಾರೆ, ಸೆಲೆಕ್ಟಿವ್ ಆಗಿ ಕ್ಷೇತ್ರ ಆಯ್ಕೆ ಮಾಡುತ್ತಾರೆ ಅಂತ ಹೇಳಿದ್ದೇವೆ. ನಾವು ಹೊಸದಾಗಿ ಹೇಳುತ್ತಿಲ್ಲ ಎಂದು ಅವರು ತಿರುಗೇಟು ನೀಡಿದರು.
2014ರ ನಂತರ ಬಂದ ಚುನಾವಣೆಗಳಲ್ಲಿ ಇವಿಎಂ ಹ್ಯಾಕ್ ಮಾಡಿದ್ದಾರೆ ಎಂದು ಹೇಳಿದ್ದೇವೆ. ಕೇವಲ ನಾನೊಬ್ಬನೇ ಹೇಳಿದ್ದರೆ ತಪ್ಪಾಗಬಹುದು. ಇಡೀ ದೇಶದಲ್ಲಿ ಜನ ಹೇಳುತ್ತಿದ್ದಾರೆ. ಮಹಾರಾಷ್ಟ್ರದ ಎಲೆಕ್ಷನ್‌ನಲ್ಲೂ ವಿಶ್ಲೇಷಣೆ ಮಾಡುವಾಗ ಆ ರೀತಿಯಾದ ಚರ್ಚೆ ಆಗಿದೆ ಅಂತ ಹೇಳಿದ್ದೇನೆ. ಸಿ.ಟಿ.ರವಿಗೆ ಅರ್ಥ ಮಾಡಿಕೊಳ್ಳೋಕೆ ಆಗಿಲ್ಲ ಎಂದರು.
ರಾಜ್ಯ ಕಾಂಗ್ರೆಸ್ ಸರ್ಕಾರ ಸುಭದ್ರ
ಸಿ.ಪಿ.ಯೋಗೇಶ್ವರ ಅವರು ನಮಗೆ ಟಾಸ್ಕ್ ಕೊಟ್ಟರೆ ಒಂದು ತಿಂಗಳಲ್ಲಿ ಜೆಡಿಎಸ್ ಶಾಸಕರನ್ನ ಕಾಂಗ್ರೆಸ್‌ಗೆ ಕರೆದುಕೊಂಡು ಬರುತ್ತೇನೆ ಎಂಬ ಹೇಳಿದ್ದಾರೆ. ಆದರೆ ನಮಗೆ ಅದರ ಅಗತ್ಯ ಇಲ್ಲ. ಸಾಮಾನ್ಯವಾಗಿ ಕಾಂಗ್ರೆಸ್‌ನಲ್ಲಿ ಬಿಜೆಪಿಯವರು ಮಾಡಿದ ಹಾಗೆ ಆಪರೇಷನ್ ಕಮಲ ಮಾಡಲ್ಲ. ಆ ರೀತಿ ನಾವು ಮಾಡಲು ಹೋಗುವುದಿಲ್ಲ. ಈಗ ಯೋಗೇಶ್ವರ್ ಆ ಮಾತು ಹೇಳಿದ್ದರೆ, ಅದರ ಅಗತ್ಯತೆ ನಮಗೆ ಇಲ್ಲ. 138 ಜನ ಶಾಸಕರಿದ್ದೇವೆ. ಸರ್ಕಾರ ಸುಭದ್ರವಾಗಿದೆ ಎಂದು ಅವರು ಪ್ರಶ್ನೆಗೆ ಉತ್ತರಿಸಿದರು.












Click it and Unblock the Notifications