CEC ಜ್ಞಾನೇಶ್ ಕುಮಾರ್ ಹುದ್ದೆ ವಜಾಗೆ ಪರಮೇಶ್ವರ್ ಆಗ್ರಹ; ಚುನಾವಣಾ ಆಯೋಗದಲ್ಲಿ ಏನಾಗ್ತಿದೆ?
ಬೆಂಗಳೂರು: ಹಿಂದಿನಿಂದಲೂ ಚುನಾವಣೆಗಳ ಹೊತ್ತಲ್ಲಿ, ಚುನಾವಣಾ ಫಲಿತಾಂಶದ ಬಳಿಕ ಚುನಾವಣಾ ಆಯೋಗದ ಮೇಲೆ ಒಂದಷ್ಟು ಆರೋಪಗಳು ಕೇಳಿ ಬರುತ್ತಿದ್ದವು. ಇದೀಗ ಭಾರತೀಯ ಚುನಾವಣಾ ಆಯೋಗದ ಕಾರ್ಯವೈಖರಿ ಮತ್ತು ಅದು ತೆಗೆದುಕೊಂಡ ಕೆಲವು ನಿರ್ಧಾರಗಳು ಏಕಪಕ್ಷೀಯವಾಗಿವೆ ಎಂಬ ಆತಂಕ, ಅನುಮಾನ ದೇಶದ ಜನರಲ್ಲಿ ಮೂಡಿದೆ. ಹೀಗಾಗಿ ಮುಖ್ಯ ಆಯುಕ್ತ ಜ್ಞಾನೇಶ್ ಕುಮಾರ್‍ರ ಹುದ್ದೆ ವಜಾಗೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಆಗ್ರಹಿಸಿದ್ದಾರೆ.
ಗುರುವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಭಾರತೀಯ ಚುನಾವಣಾ ಆಯೋಗ ಇಬ್ಬರ ಚುನಾವಣಾ ಆಯುಕ್ತರು ಹಲವು ಬಾರಿ ಆಕ್ಷೇಪ ವ್ಯಕ್ತಪಡಿಸಿರುವ ಬಗ್ಗೆ ವರದಿಗಳು ಪ್ರಕಟವಾಗಿವೆ. ಇದು ದೇಶಾಧ್ಯಮತ ಜನರಲ್ಲಿ ಆತಂಕ ಮೂಡಿಸುವಂತಿದೆ. ಮೂವರು ಸದಸ್ಯರಿರುವ ಸಂವಿಧಾನಾತ್ಮಕ ಸಂಸ್ಥೆಯು ಏಕವ್ಯಕ್ತಿಯ ಪಾರುಪತ್ಯಕ್ಕೆ ಸೀಮಿತವಾಗಿದೆಯೇ ಎಂಬ ಗಂಭೀರ ಪ್ರಶ್ನೆ ಉದ್ಭವಿಸಿದೆ. ಭಾರತೀಯ ಚುನಾವಣಾ ಆಯೋಗವು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರೊಬ್ಬರದ್ದೇ ಸಂಸ್ಥೆಯಾಗಿ ಮಾರ್ಪಟ್ಟಿದೆಯೇ ಎಂಬ ಅನುಮಾನ ಸಹ ಕಾಡುತ್ತಿದೆ ಎಂದು ಅವರು ವಿವರಿಸಿದ್ದಾರೆ.

ನಿರ್ಧಾರಗಳು ಸರ್ವಾನುಮತದಿಂದ ಕೂಡಿರಬೇಕು
ಭಾರತೀಯ ಚುನಾವಣಾ ಆಯೋಗದಲ್ಲಿ ಮೂವರು ಆಯುಕ್ತರಿದ್ದಾರೆ. ಕಾನೂನಿನ ಪ್ರಕಾರ, ಸಾಧ್ಯವಾದಷ್ಟು ನಿರ್ಧಾರಗಳು ಸರ್ವಾನುಮತದಿಂದ ತೆಗೆದುಕೊಳ್ಳಬೇಕು. ಭಿನ್ನಾಭಿಪ್ರಾಯ ಉಂಟಾದಲ್ಲಿ, ಬಹುಮತದ ನಿರ್ಧಾರವೇ ಅಂತಿಮವಾಗಬೇಕು. ಆದರೆ, ಇಬ್ಬರು ಚುನಾವಣಾ ಆಯುಕ್ತರಾದ ಸುಖ್ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ಕಳೆದ 10 ತಿಂಗಳಲ್ಲಿ ಕನಿಷ್ಠ 14 ಬಾರಿ ಲಿಖಿತವಾಗಿ ಆಕ್ಷೇಪ ದಾಖಲು ಮಾಡಿದ್ದಾರೆ. ಈ ಇಬ್ಬರ ವಿರೋಧದ ಹೊರತಾಗಿಯೂ ಕೆಲವು ಪ್ರಮುಖ ವಿಚಾರಗಳಲ್ಲಿ ಮುಖ್ಯ ಆಯುಕ್ತ ಜ್ಞಾನೇಶ್ ಕುಮಾರ್ ಅವರು ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡಿದ್ದಾರೆ ಎಂದು ಆಕ್ಷೇಪ ವ್ಯಕ್ತವಾಗುತ್ತಿದೆ. ಪತ್ರಿಕೆಯೊಂದರ ತನಿಖಾ ವರದಿ ಮೂಲಕ ಬಹಿರಂಗಗೊಂಡಿದೆ. ಚುನಾವಣಾ ಆಯೋಗದ ಅನುಮೋದನೆ ಇಲ್ಲದೆಯೇ ಆಯೋಗದ ಹೆಸರಿನಲ್ಲಿ ಪತ್ರಗಳು, ಆದೇಶಗಳನ್ನು ಪ್ರಕಟಿಸಿರುವ ಬಗ್ಗೆಯೂ ಆಕ್ಷೇಪ ಕೇಳಿ ಬಂದಿದೆ.
SIR ಸಂಬಂಧಿ ನಿರ್ಧಾರಗಳಿಗೂ ಆಕ್ಷೇಪ
ಜ್ಞಾನೇಶ್ ಕುಮಾರ್ ಅವರ ಮೇಲಿನ ಈ ಇಬ್ಬರ ಆಕ್ಷೇಪಣೆಗಳು ಸಾಮಾನ್ಯ ಆಡಳಿತಾತ್ಮಕ ವಿಷಯಗಳಿಗೆ ಮಾತ್ರವೇ ಸೀಮಿತವಾಗಿಲ್ಲ. ಹೊಸ ಮತದಾರರ ಸೇರ್ಪಡೆ, ಮತದಾರರ ಪಟ್ಟಿಯಲ್ಲಿನ ಹೆಸರುಗಳ ಅಳಿಸುವಿಕೆ ಮತ್ತು ಮರು ಸೇರ್ಪಡೆ, ಎಸ್‌ಐಆರ್ ಪ್ರಕ್ರಿಯೆಗಳ ಕುರಿತಾದ ಗಂಭೀರ ವಿಚಾರಗಳಿಗೂ ಸಂಬಂಧಿಸಿವೆ.
ಅರ್ಜಿ ನಮೂನೆ-6ರ ಬದಲಾವಣೆ ಅನಧಿಕೃತ ಮತ್ತು ಕಾನೂನು ಬಾಹಿರವಾಗಿದೆ. ರಾಜ್ಯ ಮಟ್ಟದಲ್ಲಿನ ಶಾಸನಬದ್ಧ ಅಧಿಕಾರಿಗಳ ಅಧಿಕಾರವನ್ನು ಬದಿಗೊತ್ತಿ ಮತದಾರರ ಪಟ್ಟಿಯ ದತ್ತಾಂಶಗಳನ್ನು (ಡೇಟಾಬೇಸ್) ಕೇಂದ್ರೀಕರಣ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪಗಳನ್ನು ಮಾಡಲಾಗಿದೆ ಎಂದು ಡಿಸಿಎಂ ವಿವರಿಸಿದರು.
ಚುನಾವಣಾ ಆಯೋಗ ಬಗ್ಗೆ ರಾಹುಲ್ ಗಾಂಧಿ ಪ್ರಶ್ನೆ
ಕಾಂಗ್ರೆಸ್ ಪಕ್ಷ ಮತ್ತು ವಿಶೇಷವಾಗಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ನಮ್ಮ ಚುನಾವಣಾ ಪ್ರಕ್ರಿಯೆಯ ಸಮಗ್ರತೆ ಕುರಿತು ನಿರಂತರವಾಗಿ ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ. ಮಹಾರಾಷ್ಟ್ರದ ಮತದಾರರ ಪಟ್ಟಿಗಳಲ್ಲಿನ ಅಸಾಮಾನ್ಯ ಬದಲಾವಣೆಗಳು ಮತ್ತು ಮತದಾನದ ಪ್ರಮಾಣದ ಅಂಕಿಅಂಶಗಳ ಕುರಿತಾದ ಪ್ರಶ್ನೆಗಳಿಂದ ಹಿಡಿದು, ಕರ್ನಾಟಕದ ಮಹದೇವಪುರ ಮತ್ತು ಆಳಂದ ಹಾಗೂ ಹರಿಯಾಣದಲ್ಲಿನ ನಕಲಿ ಮತದಾನದ ಕುರಿತು ಆತಂಕ ವ್ಯಕ್ತಪಡಿಸಿದ್ದರು. ಮತದಾನ ಪ್ರಕ್ರಿಯೆಯನ್ನು ಪಾರದರ್ಶಕತೆ ಮತ್ತು ಹೊಣೆಗಾರಿಕೆಯಿಂದ ನಡೆಸಬೇಕು ಎಂದು ಚುನಾವಣಾ ಆಯೋಗವನ್ನು ಅವರು ನಿರಂತರವಾಗಿ ಒತ್ತಾಯಿಸುತ್ತಾ ಬಂದಿದ್ದಾರೆ.
ಆಯೋಗದೊಳಗೇ ಅಕ್ಷೇಪ!
ಈಗ ಚುನಾವಣಾ ಆಯೋಗದೊಳಗಿನಿಂದಲೇ ಹೊರಬರುತ್ತಿರುವ ವಿಚಾರಗಳು ಅತ್ಯಂತ ಗಂಭೀರ ಸ್ವರೂಪದ್ದಾಗಿವೆ. ಚುನಾವಣಾ ಆಯೋಗದ ಕಾರ್ಯವೈಖರಿಯ ಬಗ್ಗೆ ಹೊರಗಿನ ವ್ಯಕ್ತಿಗಳು ಈ ವರೆಗೆ ಎತ್ತುತ್ತಿದ್ದ ಪ್ರಶ್ನೆಗಳು ಈಗ ಆಯೋಗದೊಳಗೇ ದಾಖಲಾಗಿರುವ ಆಕ್ಷೇಪಣೆಗಳ ರೂಪದಲ್ಲಿ ಪ್ರತಿಧ್ವನಿಸುತ್ತಿವೆ ಎಂದರು.
ರಾಜ್ಯದಲ್ಲಿ 1 ಕೋಟಿ ಮತದಾರರು ಪಟ್ಟಿಯಿಂದ ಹೊರಗೆ
ಈ ಹಿನ್ನೆಲೆಯಲ್ಲಿ, ಕರ್ನಾಟಕ ಸೇರಿದಂತೆ ದೇಶಾದ್ಯಂತ SIR ಅನ್ನು ನಡೆಸುತ್ತಿರುವ ವಿಧಾನವೂ ಈ ಆತಂಕಕ್ಕೆ ಇನ್ನಷ್ಟು ಇಂಬು ನೀಡಿದೆ. ಕರ್ನಾಟಕದಲ್ಲಿ, ASDDO ವರ್ಗಗಳ ಅಡಿಯಲ್ಲಿ ಸುಮಾರು 1.08 ಕೋಟಿ ಮತದಾರರನ್ನು ಕರಡು ಮತದಾರರ ಪಟ್ಟಿಯಿಂದ ಹೊರಗಿಡಲಾಗಿದೆ. ಇದರಲ್ಲಿ ಬೆಂಗಳೂರಿನಲ್ಲೇ 46.88 ಲಕ್ಷ ಮತದಾರರು ಸೇರಿದ್ದಾರೆ. ಇದಲ್ಲದೆ, 'ತಾರ್ಕಿಕ ವ್ಯತ್ಯಾಸಗಳು' (logical discrepancies) ಅಥವಾ 'ಮ್ಯಾಪಿಂಗ್' ಕೊರತೆಯ ಕಾರಣದಿಂದ 43.8 ಲಕ್ಷ ಮತದಾರರಿಗೆ ನೋಟಿಸ್‌ಗಳನ್ನು ನೀಡಲಾಗಿದೆ.
ಆಯೋಗ ಕಾರ್ಯವೈಖರಿ ಬಗ್ಗೆ ಸ್ವತಂತ್ರ ಪರಿಶೀಲನೆ ಅಗತ್ಯ
ಮುಖ್ಯ ಚುನಾವಣಾ ಆಯುಕ್ತರು ಸಮಾನರಲ್ಲಿ ಮೊದಲಿಗರು (first among equals), ಆದರೆ ಚುನಾವಣಾ ಆಯೋಗಕ್ಕಿಂತ ಮೇಲಿನವರಲ್ಲ. ಚುನಾವಣಾ ಪ್ರಕ್ರಿಯೆಯ ಮೇಲೆ ಪರಿಣಾಮ ಬೀರುವಂತಹ ನಿರ್ಧಾರಗಳನ್ನು ಇತರ ಇಬ್ಬರು ಆಯುಕ್ತರ ಅಭಿಪ್ರಾಯವನ್ನು (ಬಹುಮತದ ನಿರ್ಧಾರವನ್ನು) ಬದಿಗೊತ್ತಿ ತೆಗೆದುಕೊಳ್ಳಲಾಗಿದ್ದರೆ, ಅದು ಕಾನೂನಿನಲ್ಲಿ ಹೇಳಲಾಗಿರುವ ಸಾಮೂಹಿಕ ನಿರ್ಧಾರ ಕೈಗೊಳ್ಳುವಿಕೆಯ ಮೂಲ ತತ್ವಕ್ಕೆ ವಿರುದ್ಧವಾದುದ್ದು. ಹಾಗೆಯೇ ಈ ಕುರಿತು ಸ್ವತಂತ್ರ ಪರಿಶೀಲನೆ ನಡೆಯಬೇಕಾದ ಅಗತ್ಯವಿದೆ.
ಜನರಿಗ ಚುನಾವಣಾ ಆಯೋಗದ ವಿಶ್ವಾಸಾರ್ಹತೆ ಮತ್ತು ಭಾರತದ ಪ್ರಜಾಪ್ರಭುತ್ವ ಪ್ರಕ್ರಿಯೆಯ ಮೇಲೆ ದೇಶವಾಸಿಗಳು ಇಟ್ಟಿರುವ ನಂಬಿಕೆಗೆ ಅಪಾರ ಹಾನಿಯಾಗಿದೆ. ಆ ನಂಬಿಕೆಯನ್ನು ಪುನರ್ ಸ್ಥಾಪಿಸುವ ಕಾರ್ಯ ಈಗಲೇ ಆರಂಭವಾಗಬೇಕು.
ಜ್ಞಾನೇಶ್ ಕುಮಾರ್‍ರ ಹುದ್ದೆ ವಜಾಗೆ ಆಗ್ರಹ
ಮುಖ್ಯ ಚುನಾವಣಾ ಆಯುಕ್ತರಾದ ಜ್ಞಾನೇಶ್ ಕುಮಾರ್ ಅವರ ಕಾರ್ಯವೈಖರಿಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಅವರ ನೇತೃತ್ವದಲ್ಲಿ ತೆಗೆದುಕೊಳ್ಳಲಾದ ನಿರ್ಧಾರಗಳ ಕುರಿತು ಇಂತಹ ಗಂಭೀರ ಪ್ರಶ್ನೆಗಳು ಉದ್ಭವವಾಗಿರುವ ಸಂದರ್ಭದಲ್ಲಿ, ಅವರು ತಮ್ಮ ಹುದ್ದೆಯಲ್ಲಿ ಮುಂದುವರಿಯುವ ನೈತಿಕತೆಯನ್ನು ಕಳೆದುಕೊಂಡಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಕೂಡಲೇ ಜ್ಞಾನೇಶ್ ಕುಮಾರ್ ಅವರನ್ನು ಮುಖ್ಯ ಚುನಾವಣಾ ಆಯುಕ್ತರ ಹುದ್ದೆಯಿಂದ ವಜಾಗೊಳಿಸಬೇಕು ಮತ್ತು ಈ ವಿಚಾರವನ್ನು ಸ್ವತಂತ್ರ ಹಾಗೂ ನಿಷ್ಪಕ್ಷಪಾತ ತನಿಖೆಗೆ ಒಳಪಡಿಸಬೇಕು ಎಂದು ಒತ್ತಾಯಿಸುತ್ತೇನೆ. ದೇಶದ ಚುನಾವಣಾ ವ್ಯವಸ್ಥೆಯ ವಿಶ್ವಾಸಾರ್ಹತೆ ಮತ್ತು ನಮ್ಮ ಪ್ರಜಾಪ್ರಭುತ್ವದ ಮೇಲಿರುವ ನಂಬಿಕೆಯ ವಿಚಾರಗಳಲ್ಲಿ ರಾಜಿಯಾಗಬಾರದು ಎಂದು ಅವರು ಹೇಳಿದರು.


Click it and Unblock the Notifications
