Munirathna: ಬಯೋಲಾಜಿಕಲ್ ವಾರ್ ರೀತಿ ಇದೆ; ಮುನಿರತ್ನ ಪ್ರಕರಣದ ಬಗ್ಗೆ ಸರ್ಕಾರಕ್ಕೆ ಡಿಕೆ ಸುರೇಶ್ ವಿಶೇಷ ಮನವಿ
ಅತ್ಯಾಚಾರ ಆರೋಪ ಪ್ರಕರಣದಲ್ಲಿ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಅವರನ್ನು ಬಂಧಿಸಲಾಗಿದ್ದು, ರಾಜ್ಯ ರಾಜಕೀಯದಲ್ಲಿ ಮತ್ತೊಂದು ಅತ್ಯಾಚಾರ ಆರೋಪ ಪ್ರಕರಣ ಮುನ್ನಲೆಗೆ ಬಂದಿದೆ. ಅತ್ಯಾಚಾರ ಆರೋಪ ಪ್ರಕರಣ ಮಾತ್ರವಲ್ಲದೆ ಹೆಚ್‌ಐವಿ ಇರುವ ರೋಗಿಗಳ ರಕ್ತವನ್ನು ತನ್ನದೇ ಪಕ್ಷದ ನಾಯಕರಿಗೆ ಇಂಜೆಕ್ಟ್ ಮಾಡಲು ಮುನಿರತ್ನ ಸಂಚು ಮಾಡಿದ್ದರು ಎನ್ನುವ ಗಂಭೀರ ಆರೋಪವೊಂದು ಕೇಳಿಬಂದಿದ್ದು, ಬಿಜೆಪಿ ನಾಯಕರೇ ಇದನ್ನು ಕೇಳಿ ಬೆಚ್ಚಿಬಿದ್ದಿದ್ದಾರೆ. ಮಾಜಿ ಸಂಸದ ಡಿ.ಕೆ. ಸುರೇಶ್ ಈಗ ಮುನಿರತ್ನ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿದ್ದು ಸರ್ಕಾರಕ್ಕೆ ವಿಶೇಷ ಮನವಿ ಮಾಡಿದ್ದಾರೆ.
ಖಾಸಗಿ ಮಾಧ್ಯಮಗಳ ಜೊತೆ ಮಾತನಾಡಿರುವ ಅವರು, ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಇವರ ರಾಜಕೀಯ ದ್ವೇಷಕ್ಕೆ ಬಳಸಿಕೊಂಡಿದ್ದಾರೆ, ಇದು ಅಸಹ್ಯದ ಪರಮಾವಧಿ ಎಂದು ವಾಗ್ದಾಳಿ ನಡೆಸಿದ್ದಾರೆ.

ಈ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು, ಪ್ರಕರಣದ ತನಿಖೆ ನಡೆಸಲು ವಿಶೇಷ ತಂಡವನ್ನು ರಚನೆ ಮಾಡಬೇಕು, ಯಾರನ್ನು ಯಾವ ಯಾವ ಸಮಯದಲ್ಲಿ ಬಳಸಿಕೊಂಡಿದ್ದಾರೆ ಎನ್ನುವುದು ಜಗತ್ತಿಗೆ ತಿಳಿಯಬೇಕು, ಎಸ್‌ಐಟಿ ಅಥವಾ ಬೇರೆ ಸಂಸ್ಥೆಯಿಂದ ತನಿಖೆ ಮಾಡಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಸಮರ್ಪಕ ತನಿಖೆಯಿಂದ ಮಾತ್ರವೇ ಬಿಜೆಪಿ ನಾಯಕರ ಬಣ್ಣ ಬಯಲಾಗಬೇಕಿದೆ. ಇಂತಹ ಗಂಭೀರ ಆರೋಪಗಳು ಕೇಳಿಬಂದಿದ್ದರೂ, ವಿಪಕ್ಷ ನಾಯಕ ಆರ್. ಅಶೋಕ್, ಸಿ.ಟಿ. ರವಿ ಮತ್ತು ಹೆಚ್.ಡಿ. ಕುಮಾರಸ್ವಾಮಿ ಮುನಿರತ್ನ ಪರ ಬೆಂಬಲಕ್ಕೆ ನಿಂತಿರುವುದು ನಾಚಿಕೆಗೇಡು ಎಂದು ಹೇಳಿದರು.
ಏನಿದು ಮುನಿರತ್ನ ಮೇಲಿರುವ ಆರೋಪ?
ಶಾಸಕ ಮುನಿರತ್ನ ತನ್ನ ಎದುರಾಳಿಗಳನ್ನು ಮಟ್ಟಹಾಕಲು ಹನಿ ಟ್ರಾಪ್ ಮಾಡುತ್ತಿದ್ದರು ಎಂದು ಸಂತ್ರಸ್ತೆಯೊಬ್ಬರು ದೂರಿನಲ್ಲಿ ತಿಳಿಸಿದ್ದಾರೆ. ಬೆದರಿಕೆ ನನ್ನ ಮೇಲೆ ಕೂಡ ಅತ್ಯಾಚಾರ ಎಸಗಿದ್ದಾರೆ ಎಂದು ಮಹಿಳೆ ಆರೋಪಿಸಿದ್ದು, ಬಳಿಕ ಹಲವು ರಾಜಕೀಯ ವ್ಯಕ್ತಿಗಳನ್ನು ಹನಿ ಟ್ರಾಪ್ ಮಾಡಿ ಅಶ್ಲೀಲ ವಿಡಿಯೋಗಳನ್ನು ಚಿತ್ರೀಕರಣ ಮಾಡಿಕೊಂಡು ತಮ್ಮ ರಾಜಕೀಯ ಕೆಲಸ ಮಾಡಿಸಿಕೊಳ್ಳುತ್ತಿದ್ದರು ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದನ್ನು ವಿಡಿಯೋ ಮಾಡಿಕೊಂಡಿದ್ದು, ಹಲವು ಬಾರಿ ಅದನ್ನು ವೈರಲ್ ಮಾಡುತ್ತೇನೆ ಎಂದು ಬೆದರಿಸಿ ಅತ್ಯಾಚಾರ ಮಾಡಿದ್ದಾರೆ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ.
ಅಲ್ಲದ ಹನಿ ಟ್ರಾಪ್ ಮಾಡಲು ಮುನಿರತ್ನ ಹೆಚ್‌ಐವಿ ಪಾಸಿಟಿವ್ ಇರುವ ಮಹಿಳೆಯನ್ನು ಬಳಸಿಕೊಂಡಿರುವ ಆಘಾತಕಾರಿ ವಿಚಾರವನ್ನು ದೂರಿನಲ್ಲಿ ತಿಳಿಸಿದ್ದಾರೆ. ಮಹಿಳೆಗೆ ಪರಿಚಯವಿದ್ದ ಕಾರ್ಪೊರೇಟರ್ ಪತಿಯನ್ನು ಹೆಚ್‌ಐವಿ (ಏಡ್ಸ್) ಇರುವ ಮಹಿಳೆಯನ್ನು ಬಳಸಿ ಹನಿಟ್ರಾಪ್ ಮಾಡಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ. ಅಲ್ಲದೆ ಹೆಚ್‌ಐವಿ ಪಾಸಿಟಿವ್ ಇರುವ ಮಹಿಳೆಯಿಂದ ಪಡೆದ ರಕ್ತವನ್ನು ಇಂಜೆಕ್ಟ್ ಮಾಡುವಂತೆ ಕೂಡ ಮಹಿಳೆಗೆ ಕೇಳಿದ್ದು, ಒಪ್ಪದೇ ಇದ್ದಾಗ ಬೆದರಿಕೆ ಹಾಕಿರುವುದಾಗಿ ತಿಳಿಸಿದ್ದಾರೆ.
ನನ್ನನ್ನು ಬಳಸಿಕೊಂಡು ಕೂಡ ಬೇರೊಬ್ಬ ವ್ಯಕ್ತಿಯ ಜೊತೆ ವಿಡಿಯೋ ಮಾಡಿಸಿ, ಚುನಾವಣೆ ಸಮಯದಲ್ಲಿ ಅದನ್ನು ಬಳಸಿಕೊಂಡು ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಮಾಗಡಿ ಶಾಸಕರ ಜೊತೆ ಕೂಡ ಸಲುಗೆಯಿಂದ ಇರುವಂತೆ ಮಾಡಿ ಅದನ್ನು ವಿಡಿಯೋ ಮಾಡಿಟ್ಟುಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.












Click it and Unblock the Notifications