ಮಾಜಿ ಸಚಿವ ಮನೋಹರ್ ತಹಶೀಲ್ದಾರ್ ನಿಧನ
ಬೆಂಗಳೂರು, ನವೆಂಬರ್, 21: ತೀವ್ರ ಆನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಸಚಿವ ಮನೋಹರ್ ತಹಶೀಲ್ದಾರ್ (80) ಅವರು ನಿಧನರಾಗಿದ್ದಾರೆ. ಬುಧವಾರ (ನವೆಂಂಬರ್ 20) ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಮನೋಹರ್ ತಹಶೀಲ್ದಾರ್ ಬೆಂಗಳೂರಿನ ಚಾಮರಾಜಪೇಟೆಯ ಶಂಕರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿ ಆಗದೇ ಬುಧವಾರ ಮಧ್ಯರಾತ್ರಿ ಮೃತಪಟ್ಟಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಮನೋಹರ್ ತಹಶೀಲ್ದಾರ್ ರಾಜಕೀಯ ಜೀವನ: 4 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಮನೋಹರ್ ತಹಶೀಲ್ದಾರ್, ಬಿಇ ಮೆಕ್ಯಾನಿಕಲ್ ಪದವೀಧರರಾಗಿದ್ದರು. ಹಿಂದೆ ಎಸ್.ಎಂ.ಕೃಷ್ಣ ಅವರು ಸಿಎಂ ಆಗಿದ್ದ ಅವಧಿಯಲ್ಲಿ ತಹಶೀಲ್ದಾರ್ ಅವರು ವಿಧಾನಸಭೆ ಉಪ ಸಭಾಪತಿ ಆಗಿದ್ದರು. 1978ರಲ್ಲಿ ಮೊದಲ ಬಾರಿಗೆ ಹಾನಗಲ್ ವಿಧಾನಸಭೆ ಕ್ಷೇತ್ರದಿಂದ ಆಯ್ಕೆಯಾಗಿ ನಂತರ 1989, 1999, 2013 ಸೇರಿ 4 ಬಾರಿ ಗೆಲುವು ಸಾಧಿಸಿದ್ದರು.
2015ರಲ್ಲಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಅಬಕಾರಿ ಸಚಿವರಾಗಿದ್ದ ಮನೋಹರ್ ತಹಶಿಲ್ದಾರ್, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಸಿಗದ ಕಾರಣ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಯಾಗಿದ್ದರು. ಇನ್ನು ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ತೊರೆದು ಬಿಜೆಪಿ ಪಕ್ಷ ಸೇರಿದ್ದರು.
ಇನ್ನು ಇದೀಗ ಮಾಜಿ ಸಚಿವರು ನಾಲ್ಕು ಜನ ಪುತ್ರರು, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗವನ್ನು ಆಗಲಿದ್ದಾರೆ. ಇಂದು (ನವೆಂಬರ್ ಮಧ್ಯಾಹ್ನದ ವೇಳೆಗೆ ಮೃತದೇಹವನ್ನು ಹಾನಗಲ್ ಕೊಂಡೊಯ್ಯಲಿದ್ದು, ಎನ್‌ಸಿಜೆಸಿ ಮಹಾವಿದ್ಯಾಲಯದ ಅವರಣದಲ್ಲಿ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಅವರ ಹುಟ್ಟುರಾದ ಅಕ್ಕಿಹೊಳಿ ಗ್ರಾಮದಲ್ಲಿ ತೋಟದ ಜಮೀನಿನಲ್ಲಿ ನಾಳೆ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ ಎನ್ನುವ ಮಾಹಿತಿ ಲಭ್ಯವಾಗಿದೆ.












Click it and Unblock the Notifications