Book Fair: ವಿಧಾನಸೌಧದಲ್ಲಿ ಪ್ರಪ್ರಥಮ ಬಾರಿಗೆ 'ಬೃಹತ್ ಪುಸ್ತಕ ಮೇಳ': ಸಿದ್ದರಾಮಯ್ಯ ಚಾಲನೆ
ಬೆಂಗಳೂರು, ಫೆಬ್ರವರಿ 28: ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಶಕ್ತಿಸೌಧವಾಗಿರುವ ಬೆಂಗಳೂರಿನ ವಿಧಾನಸೌಧದಲ್ಲಿ ನಾಲ್ಕು ದಿನಗಳ 'ಬೃಹತ್ ಪುಸ್ತಕ ಮೇಳ'ವನ್ನು ಕರ್ನಾಟಕ ರಾಜ್ಯ ಸರ್ಕಾರದ ವತಿಯಿಂದ ಆಯೋಜನೆ ಮಾಡಲಾಗಿದೆ. ಗುರುವಾರ ಸಂಜೆ ಸಿಎಂ ಸಿದ್ದರಾಮಯ್ಯ ಸೇರಿದಂತೆ ಸಾಹಿತಿಗಳು ಈ ಮೇಳವನ್ನು ಅದ್ಧೂರಿಯಾಗಿ ಉದ್ಘಾಟಿಸಿದ್ದಾರೆ. ಪ್ರಕಾಶಕರನ್ನು ಬೆಂಬಲಿಸುವ, ಸಾಹಿತ್ಯಾಸಕ್ತರನ್ನು ಗಮನದಲ್ಲಿಟ್ಟುಕೊಂಡು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಫೆಬ್ರವರಿ 27ರಿಂದ ಮಾರ್ಚ್ 03 ರವರೆಗೆ ನಾಲ್ಕು ದಿನಗಳ ದಿನಗಳ ಕಾಲ ವಿಧಾನಸೌಧದಲ್ಲಿ ಈ ಪುಸ್ತಕ ಮೇಳ ಹಮ್ಮಿಕೊಳ್ಳಲಾಗಿದೆ. ಮೊದಲ ದಿನ ಉದ್ಘಾಟನೆ ಕಾರ್ಯಕ್ರಮ ಮಾತ್ರ ನಡೆದಿದೆ. ಇಂದು ಶುಕ್ರವಾರದಿಂದ ನಾಲ್ಕು ದಿನ ಸಾರ್ವಜನಿಕರಿಗೆ ವಿಧಾನಸೌಧದ ನಾಲ್ಕು ಗೇಟುಗಳಿಂದ ಉಚಿತ ಪ್ರವೇಶ ಇರಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಮಾಹಿತಿ ನೀಡಿದ್ದಾರೆ.

ನಿತ್ಯ ಬೆಳಗ್ಗೆ 10 ಗಂಟೆಯಿಂದ ರಾತ್ರಿ 08 ಗಂಟೆವರೆಗೆ ಸಾರ್ವಜನಿಕರಿಗೆ ಉಚಿತ ಪ್ರವೇಶ ಇರಲಿದೆ. ಸಾಹಿತ್ಯಕ್ಕೆ ಸಾಹಿತಿಗಳ ಜೊತೆಗೆ ಪ್ರಕಾಶಕರು ಕೊಡುಗೆ ನೀಡಿದ್ದಾರೆ. ಅಕ್ಷರಗಳು ಅಚ್ಚಾದ ಮೇಲೆ ಅವರು ಸಾಹಿತ್ಯ ಪ್ರೇಮಿಗಳ ತಲುಪುವಲ್ಲಿ ಮಹತ್ವದ ಪಾತ್ರ ವಹಿಸುವ ಪ್ರಕಾಶರನ್ನು ಗಮನದಲ್ಲಿಟ್ಟುಕೊಂಡು ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.
ಗುರುವಾರ ಸಂಜೆ ಉದ್ಘಾಟನೆ ವೇಳೆ ಮುಖ್ಯಮಂತ್ರಿ ಜೊತೆಗೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಚಂದ್ರಶೇಖರ ಕಂಬಾರ್ ಅವರು, ಸಾಹಿತಿ ದಾಮೋದರ್ ಮೌಜು, ಉಪ ಸಭಾಪತಿ ಬಸವರಾಜ ಹೊರಟ್ಟಿ, ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಗಣ್ಯರು ಪಾಲ್ಗೊಂಡಿದ್ದರು.
ಈ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಪುಸ್ತಕ ಮತ್ತು ಸಾಹಿತ್ಯದ ಓದು ಮನುಷ್ಯನನ್ನು ಹೆಚ್ಚೆಚ್ಚು ಮಾನವೀಯಗೊಳಿಸುತ್ತದೆ. ಆದ್ದರಿಂದ ಎಲ್ಲರೂ ಓದುವ ಅಭ್ಯಾಸ ಹೆಚ್ಚಿಸಿಕೊಳ್ಳಬೇಕು. ಪುಸ್ತಕಗಳನ್ನು ಖರೀದಿಸಿ, ಮನೆ ಮನೆಯಲ್ಲಿ ಗ್ರಂಥಾಲಯ ಮಾಡಿಕೊಳ್ಳಬೇಕು. ಮಕ್ಕಳು ಮೊಬೈಲ್ ಮತ್ತು ಇಂಟರ್‌ಟ್ ಚಟದಿಂದ ಹೊರಗೆ ಬಂದು ಪುಸ್ತಕಗಳನ್ನು ಓದುವ ಹವ್ಯಾಸ, ಅಭ್ಯಾಸ ಬೆಳೆಸಿಕೊಳ್ಳಬೇಕು. ಇನ್ನು ಮುಂದೆ ಪ್ರತೀ ವರ್ಷ ವಿಧಾನಸೌಧದಲ್ಲಿ ಸಾಹಿತ್ಯ, ಪುಸ್ತಕ ಹಬ್ಬ ನಡೆಸಲಾಗುವುದು ಎಂದು ಅವರು ಮಾಹಿತಿ ನೀಡಿದರು.

ಪುಸ್ತಕ ಮೇಳ: ಹೆಚ್ಚುವರಿ ಮಾಹಿತಿ ಗಮನಿಸಿ
ಫೆಬ್ರವರಿ 28ರಿಂದ ಈ ಬೃಹತ್ ಪುಸ್ತಕ ಮೇಳಕ್ಕೆ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. ಇಂದು ಕೆಲವು ಪುಸ್ತುಗಳು ಬಿಡುಗಡೆ ಆಗಲಿವೆ. ನಾಲ್ಕು ದಿನವು ನಿತ್ಯ ಸಂಜೆ 5 ಗಂಟೆಗೆ ಮನರಂಜನಾ ಕಾರ್ಯಕ್ರಮಗಳು ಸಹ ನಡೆಯಲಿವೆ. ಇದೇ ಭಾನುವಾರ (ಮಾರ್ಚ್ 2) ನಟ, ಸಂಗೀತ ನಿರ್ದೇಶಕ ಸಾಧು ಕೋಕಿಲ ನೇತ್ರತ್ವದಲ್ಲಿ ಮನೋರಂಜನಾ ಕಾರ್ಯಕ್ರಮ ನಡೆಯಲಿದೆ.
ವಿಧಾನಸೌಧದಲ್ಲಿ ಪ್ರಪ್ರಥಮ ಬಾರಿಗೆ ಆಯೋಜಿಸಲಾಗಿದ್ದ ಪುಸ್ತಕ ಮೇಳ ಕಾರ್ಯಕ್ರಮವನ್ನು ಮುಖ್ಯಮಂತ್ರಿ @siddaramaiah ಅವರು ಉದ್ಘಾಟಿಸಿದರು.
— CM of Karnataka (@CMofKarnataka) February 27, 2025
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ವಿಧಾನಸಭೆಯ ಸಭಾಧ್ಯಕ್ಷರಾದ ಯು.ಟಿ. ಖಾದರ್, ವಿಧಾನ ಪರಿಷತ್ ಸಭಾಪತಿಗಳಾದ ಬಸವರಾಜ ಹೊರಟ್ಟಿ ಸೇರಿದಂತೆ ಸಚಿವರು, ಶಾಸಕರು, ಅನೇಕ ಗಣ್ಯರು ಉಪಸ್ಥಿತರಿದ್ದರು. pic.twitter.com/7K8jk8x9pE
ಬ್ಯಾರಿ, ತುಳು, ಕೊಂಕಣಿ, ಕನ್ನಡ ಸೇರಿದಂತೆ ಪ್ರತಿ ಅಕಾಡೆಮಿಯ ಪುಸ್ತಕಗಳಿಗೆ ಒಂದು ಮಳಿಗೆಗೆ ಅವಕಾಶ ನೀಡಲಾಗಿದೆ. ಭಾಷೆಗಳ ಆಧಾರದಲ್ಲಿ ತೆರೆಯಲಾದ ಪುಸ್ತಕ ಮಳಿಗೆಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಸಾರ್ವಜನಿಕರು ಭೇಟಿ ನೀಡಬೇಕು. ಪುಸ್ತಕ ಖರೀದಿಸಿ ಓದಬೇಕು. ಪುಸ್ತಕ ಮೇಳದ ಕೊನೆಯ ದಿನ ಮಾ.3ರಂದು ಅಧಿವೇಶನ ಹಿನ್ನಲೆಯಲ್ಲಿ ಸಾರ್ವಜನಿಕರಿಗೆ ಪ್ರವೇಶ ನಿರಾಕರಿಸಲಾಗಿದೆ ಎಂದು ತಿಳಿದು ಬಂದಿದೆ.
ಇನ್ನೂ ಪುಸ್ತಕ ಮೇಳದಲ್ಲಿ ಸರಿಯಾದ ಟೇಬಲ್ ಮೇಜು ವ್ಯವಸ್ಥೆ ಮಾಡಿಕೊಡದ ಹಿನ್ನೆಲೆಯಲ್ಲಿ ಕೆಲವು ಪ್ರಕಾಶಕರು ಪ್ಲಾಸ್ಟಿಕ್ ಚೇರುಗಳ ಮೇಲೆ ಪುಸ್ತಕ ಇಟ್ಟು ಮಾರಾಟ ಮಾಡಿದ್ದು ಕಂಡು ಬಂದಿದೆ. ಪ್ರತಿ ವರ್ಷ ಈ ಪುಸ್ತಕ ಮೇಳ ಸರ್ಕಾರ ಆಯೋಜನೆ ಮಾಡುವುದಿದ್ದರೆ, ಅಗತ್ಯ ಸಿದ್ಧತೆ, ವ್ಯವಸ್ಥೆಯೊಂದಿಗೆ ಮಾಡಿಕೊಳ್ಳಬೇಕಿದೆ.












Click it and Unblock the Notifications