Breaking: ಬೆಂಗಳೂರಿನಲ್ಲೂ ವ್ಯಕ್ತಿಗೆ ಕಾಣಿಸಿಕೊಂಡ ಮಂಕಿಪಾಕ್ಸ್ ಲಕ್ಷಣ
ಬೆಂಗಳೂರು, ಜುಲೈ 30: ಬೆಂಗಳೂರಿಗೆ ಆಗಮಿಸಿದ್ದ ಆಫ್ರಿಕನ್ ಪ್ರಜೆಯಲ್ಲಿ ಮಂಕಿಪಾಕ್ಸ್ ಸೋಂಕಿನ ಲಕ್ಷಣಗಳು ಕಂಡು ಬಂದಿದ್ದು, ಅವರ ರಕ್ತದ ಮಾದರಿಯನ್ನು ಕರ್ನಾಟಕ ಆರೋಗ್ಯ ಅಧಿಕಾರಿಗಳು ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆಗೆ (ಎನ್‌ಐವಿ) ಕಳುಹಿಸಿದ್ದಾರೆ.
ಶಂಕಿತ ಮಂಕಿಪಾಕ್ಸ್ ರೋಗಿಯು ಆಫ್ರಿಕನ್ ಪ್ರಜೆ ಎಂದು ಹೇಳಲಾಗಿದ್ದು, ಕಳೆದ ಜುಲೈ 4ರಂದು ಮೂತ್ರಪಿಂಡ ಕಸಿ ಮಾಡುವುದಕ್ಕಾಗಿ ಬಂದಿದ್ದರು ಎಂದು ತಿಳಿದು ಬಂದಿದೆ. ಈ ಬೆಳವಣಿಗೆಯು ಬೆಂಗಳೂರಿಗರಲ್ಲಿ ಆತಂಕವನ್ನು ಸೃಷ್ಟಿಸಿದೆ.

"ಆಫ್ರಿಕನ್ ಪ್ರಜೆ ಇಥಿಯೋಪಿಯಾದಿಂದ ಖಾಸಗಿ ಆಸ್ಪತ್ರೆಯಲ್ಲಿ ಮೂತ್ರಪಿಂಡ ಚಿಕಿತ್ಸೆಗಾಗಿ ಬೆಂಗಳೂರಿಗೆ ಬಂದಿದ್ದರು. ಆಗ ಅವರಲ್ಲಿ ಮಂಕಿಪಾಕ್ಸ್ ರೋಗದ ಲಕ್ಷಣಗಳು ಕಾಣಿಸಿರಲಿಲ್ಲ. ಆದರೆ ಈಗ ಅವರ ಮಾದರಿಗಳನ್ನು ಕಳುಹಿಸಲಾಗಿದ್ದು, ವರದಿ ಬಂದ ನಂತರವೇ ದೃಢೀಕರಿಸಬಹುದು," ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಆರೋಗ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹಳದಿ ಜ್ವರದ ಪ್ರಮಾಣಪತ್ರ ಕಡ್ಡಾಯ:
ದಕ್ಷಿಣ ಅಮೆರಿಕಾ ಮತ್ತು ಆಫ್ರಿಕನ್ ರಾಷ್ಟ್ರಗಳಿಂದ ಆಗಮಿಸುವ ಎಲ್ಲರೂ ಹಳದಿ ಜ್ವರ ಲಸಿಕೆ ಪ್ರಮಾಣಪತ್ರಗಳನ್ನು ಹೊಂದಿರುವುದನ್ನು ಕೇಂದ್ರ ಸರ್ಕಾರ ಈಗಾಗಲೇ ಕಡ್ಡಾಯಗೊಳಿಸಿದೆ. ಅದರಂತೆ ಇತ್ತೀಚಿಗೆ ಬ್ರೆಜಿಲ್‌ನಿಂದ ಬೆಂಗಳೂರಿಗೆ ಆಗಮಿಸಿದ ಪ್ರಯಾಣಿಕನೊಬ್ಬ ಹಳದಿ ಜ್ವರ ಪ್ರಮಾಣಪತ್ರವನ್ನು ಹೊಂದಿರಲಿಲ್ಲ, ಆದ್ದರಿಂದ ಆತನನ್ನು ಜಯನಗರದ ಜನರಲ್ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಇರಿಸಲಾಗಿದೆ.
ಬಿಬಿಎಂಪಿ ವಿಶೇಷ ಆಯುಕ್ತ ಡಾ.ಕೆ.ವಿ.ತ್ರಿಲೋಕ್ ಚಂದ್ರ ಮಾತನಾಡಿ, "ಈ ಸಂಬಂಧ ಪ್ರಯಾಣಿಕರಿಗೆ ರೋಗಲಕ್ಷಣಗಳು ಕಾಣಿಸಿಕೊಂಡಿದ್ದರಿಂದ ಮಾದರಿಗಳನ್ನು ಕಳೆದ ವಾರ ಪುಣೆಯ ಎನ್‌ಐವಿಗೆ ಕಳುಹಿಸಲಾಗಿದ್ದು, ಅವರನ್ನು ಖಾಸಗಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಮಂಕಿಪಾಕ್ಸ್ ರೋಗಿಗಳಲ್ಲಿ ಮೈ-ಕೈ ನೋವು ಮತ್ತು ದದ್ದು:
ಮಂಕಿಪಾಕ್ಸ್ ಹೊಂದಿರುವ ಸೋಂಕಿತರಲ್ಲಿ ಸಾಮಾನ್ಯವಾಗಿ ಜ್ವರ, ಮೈ-ಕೈ ನೋವು ಮತ್ತು ದದ್ದುಗಳಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಈ ಸೋಂಕಿತರಲ್ಲಿ ಬಹುಪಾಲು ಮಂದಿಯು ಒಂದು ವಾರದಲ್ಲೇ ಚೇತರಿಸಿಕೊಂಡಿದ್ದಾರೆ. 1958ರಲ್ಲಿ ಮೊದಲ ಬಾರಿಗೆ ಮಂಗಗಳಲ್ಲಿ ಈ ಸೋಂಕು ಪತ್ತೆಯಾಗಿದ್ದು, ಹೀಗಾಗಿ ಇದನ್ನು ಮಂಕಿಪಾಕ್ಸ್ ಎಂದು ಕರೆಯಲಾಗುತ್ತದೆ.












Click it and Unblock the Notifications