ಬೆಂಗಳೂರು ಮಾಲ್‌ಗಳಲ್ಲಿ ಅಗ್ನಿ ದುರಂತ ತಪ್ಪಿಸಲು ಕ್ರಮ, ಡಿಕೆಶಿ ಪತ್ರ
ಬೆಂಗಳೂರು, ಮೇ 26: ಶನಿವಾರ ಗುಜರಾತ್‌ನ ರಾಜ್‌ಕೋಟ್‌ನಲ್ಲಿ ನಡೆದ ಅಗ್ನಿ ದುರಂತದಲ್ಲಿ ಮಕ್ಕಳು ಸೇರಿ 28ಕ್ಕೂ ಅಧಿಕ ಜನರು ಸಜೀವವಾಗಿ ದಹನವಾಗಿದ್ದಾರೆ. ಈ ಘಟನೆ ಬಳಿಕ ಮಾಲ್ ಮತ್ತು ಗೇಮಿಂಗ್ ಝೋನ್‌ಗಳಲ್ಲಿ ಅಗ್ನಿ ದುರಂತ ತಪ್ಪಿಸಲು ಕೈಗೊಂಡ ಕ್ರಮಗಳ ಬಗ್ಗೆ ಪ್ರಶ್ನೆ ಎದ್ದಿದೆ.
ಕರ್ನಾಟಕದ ಉಪ ಮುಖ್ಯಮಂತ್ರಿ, ಬೆಂಗಳೂರು ನಗರ ಉಸ್ತುವಾರಿ ಸಚಿವ ಡಿ. ಕೆ. ಶಿವಕುಮಾರ್ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಯುಕ್ತರಿಗೆ ಪತ್ರವೊಂದನ್ನು ಬರೆದಿದ್ದಾರೆ. ಸಂಭವನೀಯ ಅಗ್ನಿ ದುರಂತಗಳನ್ನು ತಪ್ಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆಯೇ ಎಂದು ಪರಿಶೀಲಿಸಲು ಪತ್ರದಲ್ಲಿ ಸೂಚಿಸಿದ್ದಾರೆ.

ಬೆಂಗಳೂರಿನಲ್ಲಿರುವ ಮಾಲ್‌ಗಳು, ಗೇಮ್ ಝೋನ್‌ಗಳು, ಮನರಂಜನಾ ಕೇಂದ್ರಗಳಲ್ಲಿ ಅಗ್ನಿ ಅವಘಡ ತಪ್ಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆಯೇ? ಎಂಬುದನ್ನು ಪರಿಶೀಲಿಸಲಾಗುತ್ತಿದ್ದು, ಈ ಸಂಬಂಧ ಬಿಬಿಎಂಪಿ ಆಯುಕ್ತರಿಗೆ ಪತ್ರ ಬರೆದಿದ್ದೇನೆ ಎಂದು ಸಾಮಾಜಿಕ ಜಾಲತಾಣದಲ್ಲಿ ಡಿ. ಕೆ. ಶಿವಕುಮಾರ್ ಪೋಸ್ಟ್ ಹಾಕಿದ್ದಾರೆ.
ಡಿಕೆಶಿ ಪತ್ರದ ವಿವರ: ಗುಜರಾತ್‌ನ ರಾಜ್ ಕೋಟ್ ಮನರಂಜನಾ ಕೇಂದ್ರದಲ್ಲಿ (ಗೇಮ್ ಝೋನ್) ಶನಿವಾರ ಸಂಜೆ ಸಂಭವಿಸಿದ ಅಗ್ನಿ ಅವಘಡ ಸಂಭವಿಸಿರುವುದು ವರದಿಯಾಗಿದ್ದು, ಇದು ಅತ್ಯಂತ ಕಳವಳಕಾರಿ ದುರ್ಘಟನೆಯಾಗಿರುತ್ತದೆ.
ಈ ದುರಂತವು ಎಲ್ಲರಿಗೂ ಎಚ್ಚರಿಕೆಯ ಗಂಟೆಯಾಗಿದ್ದು, ಬೆಂಗಳೂರಿನ ಹಲವು ಪ್ರತಿಷ್ಠಿತ ಮಾಲ್‌ಗಳಲ್ಲಿ ಮತ್ತು ಇತರೆ ಸ್ಥಳಗಳಲ್ಲಿ ಗೇಮ್ ಝೇನ್ ಹಾಗೂ ಸಾಹಸ ಕ್ರೀಡೆಗಳನ್ನು ನಡೆಸಲು ಅನುಮತಿ ನೀಡಲಾಗಿದ್ದು, ಇಂತಹ ಮನರಂಜನಾ ಕೇಂದ್ರಗಳು/ ಗೇಮ್ ಝೋನ್‌ಗಳಲ್ಲಿ ಅಗತ್ಯ ಮುಂಜಾಗ್ರತಾ ಕ್ರಮವಹಿಸಬೇಕಿರುತ್ತದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಮಜನರಂಜನಾ ಕೇಂದ್ರ/ ಗೇಮಿಂಗ್ ಝೋನ್‌ಗಳಿರುವ ಪ್ರದೇಶದಲ್ಲಿ ಅಗ್ನಿದುರಂತ ಸೇರಿದಂತೆ ಯಾವುದೇ ಅನಾಹುತ ಸಂಭವಿಸದ ರೀತಿಯಲ್ಲಿ ಸೂಕ್ತ ಕ್ರಮ ಕೈಗೊಂಡು, ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆಯೇ? ಎಂದು ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸಲು ಮತ್ತು ಈಗಾಗಲೇ ವಿಧಿಸಲಾಗಿರುವ ರಕ್ಷಣಾ ನಿಯಮ ಮತ್ತು ನಿರ್ಬಂಧಗಳನ್ನು ಪಾಲನೆ ಮಾಡಲಾಗುತ್ತಿದೆಯೇ? ಎಂದು ಪರಿಶೀಲಿಸಲು ತಿಳಿಸುತ್ತಾ, ಯಾವುದೇ ದುರ್ಘಟನೆಗಳು ಸಂಭವಿಸದಂತೆ ಕ್ರಮವಹಿಸಲು ಸೂಚಿಸಿದೆ ಎಂದು ಪತ್ರದಲ್ಲಿ ಹೇಳಿದ್ದಾರೆ.
ಬಿಬಿಎಂಪಿಗೆ ಪಟ್ಟಿ ರವಾನೆ: ಬೆಂಗಳೂರಿನ ಕೋರಮಂಗಲದಲ್ಲಿ ಕೆಲವು ತಿಂಗಳ ಹಿಂದೆ ನಾಲ್ಕು ಅಂತಸ್ತಿನ ಕಟ್ಟಡದಲ್ಲಿ ಅಗ್ನಿ ಅವಘಡ ಸಂಭವಿಸಿತ್ತು. ಬಳಿಕ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಬೆಂಗಳೂರು ನಗರದ ಪಬ್, ಬಾರ್ ಸೇರಿದಂತೆ 243 ಮೇಲ್ಛಾವಣಿ ರೆಸ್ಟೋರೆಂಟ್‌ಗಳನ್ನು ಪಟ್ಟಿ ಮಾಡಿತ್ತು.
ಈ ಪಟ್ಟಿಯಲ್ಲಿದ್ದ ಕಟ್ಟಡಗಳು ಅಗ್ನಿ ಸುರಕ್ಷತೆ ನಿಯಮಗಳು ಮತ್ತು ಪರವಾನಗಿ ನಿಯಮಗಳನ್ನು ಉಲ್ಲಂಘಿಸಿವೆ. ಆದ್ದರಿಂದ ಕ್ರಮ ಕೈಗೊಳ್ಳಬೇಕು ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯೊಂದಿಗೆ ವಿವರ ಹಂಚಿಕೊಂಡಿತ್ತು.
2023ರ ಅಕ್ಟೋಬರ್‌ನಲ್ಲಿ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ 243 ಮೇಲ್ಛಾವಣೆ ರೆಸ್ಟೋರೆಂಟ್‌ಗಳ ಪಟ್ಟಿಯನ್ನು ಮಾಡಿ ಅದನ್ನು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರಿಗೆ ಕಳಿಸಿತ್ತು. ಅವರು ಅದನ್ನು ಮುಖ್ಯ ಇಂಜಿನಿಯರ್‌ಗೆ ರವಾನಿಸಿದ್ದರು. ಮುಖ್ಯ ಇಂಜಿನಿಯರ್ ಕ್ರಮ ಕೈಗೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ವಿವರ ಕಳಿಸಿದ್ದರು.
2016ರಲ್ಲಿಯೂ ಬೆಂಗಳೂರಿನಲ್ಲಿ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಅಗ್ನಿ ಸುರಕ್ಷತೆ ನಿಯಮಗಳನ್ನು ಪಾಲನೆ ಮಾಡಿಲ್ಲ ಎಂದು 18 ಶಾಪಿಂಗ್ ಮಾಲ್‌ಗಳಿಗೆ ನೋಟಿಸ್ ನೀಡಿತ್ತು. ಉಲ್ಲಂಘನೆ ಸರಿಪಡಿಸಿಕೊಳ್ಳಲು 15 ದಿನದ ಅವಕಾಶ ನೀಡಿತ್ತು. ಇಲ್ಲವಾದಲ್ಲಿ ಮಾಲ್‌ಗೆ ವಿದ್ಯುತ್ ಸೇರಿದಂತೆ ಇತರ ಸಂಪರ್ಕ ಕಡಿತಗೊಳಿಸಲು ಶಿಫಾರಸು ಮಾಡಿತ್ತು.
ಕರ್ನಾಟಕ ಹೈಕೋರ್ಟ್ ಎತ್ತರದ ಕಟ್ಟಡಗಳು ಅಗ್ನಿ ಶಾಮಕ ಸುರಕ್ಷತಾ ಕಾರ್ಯ ವಿಧಾನಗಳನ್ನು ಅಳವಡಿಸಿಕೊಂಡಿವೆಯೇ?, 2005ರ ರಾಷ್ಟ್ರೀಯ ಕಟ್ಟಡ ಸಂಹಿತೆಯ ಪ್ರಕಾರ ಅಗ್ನಿ ಸುರಕ್ಷತಾ ನಿಯಮಗಳನ್ನು ಉಲ್ಲಂಘನೆ ಮಾಡಿವೆಯೇ? ಎಂದು ಪರಿಶೀಲಿಸಲು ಅಗ್ನಿ ಶಾಮಕ ದಳದ ಡಿಜಿಪಿಗೆ ಸೂಚನೆ ನೀಡಿತ್ತು.












Click it and Unblock the Notifications