ಬೆಂಗಳೂರಿನಲ್ಲಿ ಇ-ಆಫೀಸ್ ಮೂಲಕ ಕಡತ ವಿಲೇವಾರಿ: ಮುಖ್ಯ ಆಯುಕ್ತ ಮಹೇಶ್ವರ್ ರಾವ್
ಅಭಿವೃದ್ಧಿ ಕಾರ್ಯಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ನಗರ ಪಾಲಿಕೆಗಳ ಅಧಿಕಾರಿಗಳು ಸಮನ್ವಯ ಸಾಧಿಸಿ ಕಾರ್ಯನಿರ್ವಹಿಸಲು ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ಜಯನಗರ ಕಚೇರಿಯಲ್ಲಿ ಶುಕ್ರವಾರ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ನಡೆದ ಪ್ರಗತಿ ಪರಿಶೀಲನಾ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಯಾವುದಾದರು ಅಭಿವೃದ್ಧಿ ಕಾಮಗಾರಿಗಳು ಎರಡು ಅಥವಾ ಹೆಚ್ಚು ನಗರ ಪಾಲಿಕೆಗಳ ವ್ಯಾಪ್ತಿಯನ್ನು ಒಳಗೊಂಡಿದ್ದರೆ, ಅಧಿಕಾರಿಗಳು ಪರಸ್ಪರ ಸಮನ್ವಯ ಸಾಧಿಸಿ ಕಾಲಮಿತಿಯೊಳಗಾಗಿ ಕಾಮಗಾರಿಗಳನ್ನು ಪೂರ್ಣಗೊಳ್ಳುವಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅಧಿಕಾರಿಗಳಿಗೆ ಸಮರ್ಪಕ ಕಾರ್ಯ ಹಂಚಿಕೆ: ನಗರ ಪಾಲಿಕೆ ಮಟ್ಟದಲ್ಲಿ ಕೈಗೊಳ್ಳುವ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ ಸಮರ್ಪಕ ಕಾರ್ಯವನ್ನು ಹಂಚಿಕೆ ಮಾಡಬೇಕು. ಪ್ರತಿ ಅಧಿಕಾರಿಗೆ ಜವಾಬ್ದಾರಿಯನ್ನು ನಿಗದಿಪಡಿಸಿ, ಪ್ರಗತಿ ವರದಿ ಹಾಗೂ ಕಾರ್ಯನಿರ್ವಹಣಾ ಮಾಹಿತಿಯನ್ನು ನಿಯಮಿತವಾಗಿ ಸಲ್ಲಿಸುವ ವ್ಯವಸ್ಥೆ ರೂಪಿಸಬೇಕೆಂದು ಸೂಚಿಸಿದ್ದಾರೆ. ನಗರ ಪಾಲಿಕೆ ಕಚೇರಿಗಳು ಹಾಗೂ ಉಪವಿಭಾಗಗಳಲ್ಲಿ ಮಾನವ ಸಂಪನ್ಮೂಲದ ಕೊರತೆ ಇರುವ ಸ್ಥಳಗಳನ್ನು ಗುರುತಿಸಿ, ಸಂಬಂಧಿತ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ ಅಗತ್ಯ ಹುದ್ದೆಗಳನ್ನು ಭರ್ತಿ ಮಾಡುವ ಪ್ರಸ್ತಾವನೆ ಸಲ್ಲಿಸಲು ನಿರ್ದೇಶನ ನೀಡಿದ್ದಾರೆ.
ಇ-ಆಫೀಸ್‌ನಲ್ಲಿ ಕಡತ ವಿಲೇವಾರಿಗೆ ಕ್ರಮ: ಇನ್ನು ನಗರ ಪಾಲಿಕೆ ಮಟ್ಟದಲ್ಲಿ ಇ-ಆಫೀಸ್ ನಲ್ಲಿಯೇ ಕಡತ ವಿಲೇವಾರಿಗೆ ಕ್ರಮವಹಿಸಬೇಕು. ಕಾಗದ ಸ್ವರೂಪದ ದಾಖಲೆಗಳನ್ನು (Physical Documents) ಕ್ರಮೇಣ ಡಿಜಿಟಲ್ ಸ್ವರೂಪಕ್ಕೆ (Digital Mode) ಪರಿವರ್ತಿಸಿ, ಎಲ್ಲಾ ಪ್ರಸ್ತಾವನೆಗಳು, ಅನುಮೋದನೆಗಳು ಮತ್ತು ಫೈಲ್ ಚಲಾವಣೆಗಳನ್ನು ಇ-ಆಫೀಸ್ ಮೂಲಕವೇ ನಡೆಸುವಂತೆ ಸೂಚಿಸಿದರು.
ಸಮನ್ವಯ ಸಾಧಿಸಲು ನೋಡಲ್ ಅಧಿಕಾರಿ ನಿಯೋಜಿಸಿ: ಆಯಾ ನಗರ ಪಾಲಿಕೆಗಳಲ್ಲಿ ನಡೆಯುತ್ತಿರುವ ಕಾಮಗಾರಿಗಳ ಕುರಿತು ಪ್ರಗತಿ ಮಾಹಿತಿ ಪಡೆಯುವ ಸಲುವಾಗಿ ಆಯಾ ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ನೋಡಲ್ ಅಧಿಕಾರಿಗಳನ್ನು ನಿಯೋಜಿಸಬೇಕು. ಆ ನೋಡಲ್ ಅಧಿಕಾರಿ ಜಿಬಿಎ ಸಮನ್ವಯ ವಿಭಾಗದ ಜೊತೆ ಕಾಮಗಾರಿಗಳ ಕುರಿತು ಕಾಲ-ಕಾಲಕ್ಕೆ ಮಾಹಿತಿ ಪಡೆಯಲು ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.
ಈ ಸಭೆಯಲ್ಲಿ ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ಆಯುಕ್ತರಾದ ಕೆ.ಎನ್. ರಮೇಶ್, ವಿಶೇಷ ಆಯುಕ್ತರಾದ ಡಾ. ಕೆ. ಹರೀಶ್ ಕುಮಾರ್, ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತದ ಸಿಇಒ ಕರೀಗೌಡ, ಜಂಟಿ ಆಯುಕ್ತರಾದ ಮಧು ಪಾಟೀಲ್, ಮುಖ್ಯ ಎಂಜಿನಿಯರ್‌ರಾದ ಬಸವರಾಜ್ ಕಬಾಡೆ, ರಾಜೇಶ್, ರವಿ ಹಾಗೂ ಇತರ ಹಿರಿಯ ಅಧಿಕಾರಿಗಳು ಹಾಜರಿದ್ದರು.












Click it and Unblock the Notifications