ನಿರಂತರ ಮಳೆಗೆ ಬಡಾವಣೆಗಳು ಮುಳುಗಡೆ: ಜೀವನ ಅಸ್ತವ್ಯಸ್ತ
ಬೆಂಗಳೂರು, ಸೆ.01: ಕರ್ನಾಟಕದಾದ್ಯಂತ ಸುರಿದ ನಿರಂತರ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ತವಾಗಿದೆ. ಅದರಂತೆ ಬೆಂಗಳೂರು ಗ್ರಾಮಾಂತರ ಮತ್ತು ಬೆಂಗಳೂರು ನಗರ ಪ್ರದೇಶಗಳಲ್ಲಿ ಬಡಾವಣೆಗಳು ಮುಳುಗಡೆ ಆಗಿವೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ವ್ಯಾಪ್ತಿಯಲ್ಲಿ ದೊಡ್ಡಕೆರೆ (ಹಸ್ಕೂರು) ತುಂಬಿ ಕೋಡಿ ಒಡೆದು ಹರಿಯುತ್ತಿದೆ. ಇದರಿಂದ ಕೆರೆಯ ನೀರು ಸುತ್ತಮುತ್ತಲಿನ ಬಡಾವಣೆ, ಪ್ರದೇಶಗಳತ್ತ ನುಗ್ಗಿದ್ದು, ಇದು ಸಾಕಷ್ಟು ತೊಂದರೆಗೆ ಕಾರಣವಾಗಿದೆ. ದೊಡ್ಡಕೆರೆ ನೀರು ಇಲ್ಲಿನ ಕೆಎಚ್ ಬಿ ಬಡಾವಣೆ ನುಗ್ಗಿದೆ. ದಿನೇ ದಿನೆ ಬಡಾವಣೆಗೆ ನುಗ್ಗುತ್ತಿರುವ ನೀರಿನ ಪ್ರಮಾಣದಲ್ಲಿ ಏರಿಕೆ ಆಗಿದೆ.
ಬಡಾವಣೆಯಲ್ಲಿ ನಾಲ್ಕೈದು ಅಡಿ ಇದ್ದ ನೀರು ಆರರಿಂದ ಏಳು ಅಡಿಗೆ ಹೆಚ್ಚಾಗಿದೆ. ಮಳೆ ನೀರಲ್ಲಿ ಹಾವು, ಚೇಳುಗಳು ಬರುತ್ತಿವೆ. ಅಗತ್ಯ ವಸ್ತುಗಳನ್ನು ಹೊರ ತರಲು ಹೋಗಲಾರದ ಸ್ಥಿತಿ ಇದೆ. ಮಕ್ಕಳನ್ನು ಕರೆದುಕೊಂಡು ಹಾಗೂ ಅಗತ್ಯ ವಸ್ತುಗಳ ಜತೆಗೆ ಸುರಕ್ಷಿತ ಸ್ಥಳಕ್ಕೆ ಜನರು ತೆರಳುತ್ತಿದ್ದಾರೆ. ಅಂಗೈಯಲ್ಲಿ ಜೀವ ಹಿಡಿದು ಬದುಕುವ ಸ್ಥಿತಿ ಇಲ್ಲಿನ ಜನರದ್ದಾಗಿದೆ.

ಸದ್ಯ ಬಡಾವಣೆಯಲ್ಲಿನ ಮಳೆ ನೀರು ಕಡಿಮೆಯಾದರೂ ನಿವಾಸಿಗಳಿಗೆ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ. ಇದೇ ರೀತಿ ಸಮಸ್ಯೆಗಳು ಬೆಂಗಳೂರಿನ ಗ್ರಾಮಾಂತರ ಭಾಗದ ಹಲವೆಡೆ ಕಂಡು ಬಂದಿದೆ. ಕೂಡಲೇ ಸರ್ಕಾರ, ಅಧಿಕಾರಿಗಳು ನಮಗೆ ಅಗತ್ಯ ನೆರವು ಒದಗಿಸಬೇಕು ಎಂದು ನಿವಾಸಿಗಳು ಮನವಿ ಮಾಡಿದ್ದಾರೆ.
ಇನ್ನೂ ಹೊಸಕೋಟೆಯ ಈ ದೊಡ್ಡಕೆರೆ (ಹಸ್ಕೂರು)ಯು ಕಳೆದ ಮೂವತ್ತು ವರ್ಷಗಳಲ್ಲಿ ಈ ರೀತಿಯಾಗಿ ಒಮ್ಮೆಯು ತುಂಬಿಕೊಂಡಿರಲಿಲ್ಲ. ಪ್ರತಿ ವರ್ಷ ಸಾಮಾನ್ಯಮಟ್ಟಲ್ಲಿ ನೀರು ತುಂಬಿಕೊಳ್ಳುತ್ತಿತ್ತು. ಆದರೆ ಈ ವರ್ಷ ನಿರಂತರ ಮಳೆ ಆಗಾಗ ಆಗುತ್ತಲೇ ಇದೆ. ಈ ಕಾರಣದಿಂದ ಕೆರೆ ಕೋಡಿ ಒಡೆಯುವಷ್ಟು ನೀರು ತುಂಬಿಕೊಂಡಿದೆ. ಪರಿಣಾಮ ಕೆರೆ ನೀರು ತುಂಬಿ ಹರಿದು ಸುತ್ತಮುತ್ತಲಿನ ಪ್ರದೇಶ ಹಾಗೂ ಕೆಎಚ್‌ಬಿ ಬಡಾವಣೆಯನ್ನು ಆವರಿಸಿ ಸಮಸ್ಯೆ ಉಂಟು ಮಾಡಿದೆ ಎಂದು ಬಡಾವಣೆ ನಿವಾಸಿಯೊಬ್ಬರು ವಿವರಿಸಿದರು.
ರೈನ್‌ಬೋ ಲೇಔಟ್‌ನಲ್ಲೂ ಇದೇ ಪರಿಸ್ಥಿತಿ
ಇನ್ನು ಬೆಂಗಳೂರು ನಗರದ ಸರ್ಜಾಪುರ ರಸ್ತೆಯಲ್ಲಿರುವ ಸರ್ಜಾರಪುರ ರೈನ್‌ಬೋ ಲೇಔಟ್‌ನಲ್ಲಿ ಮಳೆ ಆವಾಂತರ ತಗ್ಗಿಲ್ಲ. ಇಡಿ ಲೇಔಟ್ ಜಲಾವೃತಗೊಂಡಿದೆ. ಮನೆಯಿಂದ ಹೊರ ಹೋಗಲಾರದೇ, ಮಳೆ ಒಳಗೂ ಇರಲಾರದೇ ತೊಂದರೆ ಅನುಭವಿಸುತ್ತಿದ್ದಾರೆ. ಕಳೆದ ಕೆಲವು ದಿನಗಳಿಂದ ಈ ಸಮಸ್ಯೆ ಮುಂದುವರಿದರೂ ಸಂಬಂಧಿಸಿದ ಅಧಿಕಾರಿಗಳು ಇತ್ತ ತಲೆ ಹಾಕಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.
ಕಾರು, ಬೈಕ್‌ಗಳಿದ್ದರೂ ಸಹ ಮಕ್ಕಳನ್ನು ಟ್ರಾಕ್ಟರ್‌ಗಳಲ್ಲಿ ತೆರಳಬೇಕಾದ ಅನಿವಾರ್ಯತೆ ಎದುರಾಗಿದೆ. ರಸ್ತೆಗಳು ಜಲಾವೃತಗೊಂಡಿದ್ದು, ಇಲ್ಲಿನ ನೂರಾರು ಮನೆಗಳಿಗೆ ನೀರು ನುಗ್ಗಿದೆ. ಇನ್ನೂ ರಾಮನಗರದಲ್ಲಿ ಸಹ ಮಳೆ ಸಮಸ್ಯೆ ಮುಂದುವರಿದಿದೆ. ಮಳೆಯಿಂದಾಗಿ ಮನೆ ಬಿಟ್ಟು ಗಂಜಿ ಕೇಂದ್ರಗಳಲ್ಲಿ ಇರುವ ಸಂತ್ರಸ್ತರು ಅಲ್ಲಿಯೇ ಗಣೇಶ ಹಬ್ಬ ಆಚರಿಸಿರುವುದು ವಿಶೇಷವಾಗಿದೆ.

ರಾಮನಗರದಲ್ಲಿ ಇನ್ನು ಪ್ರವಾಹದ ಸ್ಥಿತಿ ಕಡಿಮೆಯಾಗಿಲ್ಲ. ರಾಮನಗರ, ಚೆನ್ನಪಟ್ಟಣದ ಗ್ರಾಮಗಳಲ್ಲಿ ಕೆಸರು ತುಂಬಿಕೊಂಡಿದೆ. ಪ್ರಮುಖ ರಸ್ತೆಗಳು ಕೆಸರುಮಯವಾಗಿದೆ. ಮಳೆ ನಿಂತು ನೆರೆ ಕಡಿಮೆಯಾದರೂ ಈ ಭಾಗದಲ್ಲಿ ಸಾಂಕ್ರಾಮಿಕ ರೋಗಗಳು ಕಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಇದು ಇಲ್ಲಿನ ನಿವಾಸಿಗಳ ಆತಂಕಕ್ಕೆ ಕಾರಣವಾಗಿದೆ.
ರಾಜ್ಯದಲ್ಲಿ ಸದ್ಯ ಮುಂದಿನ ಮೂರು ದಿನವು ಇದೇ ರೀತಿ ಮಳೆ ಮುಂದುವರಿಯುವ ನಿರೀಕ್ಷೆ ಇದೆ. ಈಗಾಗಲೇ ಸುರಿದ ಮಳೆಯಿಂದಾಗಿ ರಾಜ್ಯದಲ್ಲಿ ಅನೇಕ ಕೆರೆ ಕಟ್ಟೆಗಳು ತುಂಬಿ ಹರಿದಿವೆ. ಮುತ್ತೆ ಮಳೆ ಮುಂದುವರಿದರೆ ಏನಾಗುತ್ತದೋ ಎಂಬ ಭಯದಲ್ಲಿ ತಗ್ಗು ಪ್ರದೇಶದ ನಿವಾಸಿಗಳು, ಗ್ರಾಮಗಳ ಗ್ರಾಮಸ್ಥರು ಜೀವನ ಸಾಗಿಸುತ್ತಿದ್ದಾರೆ.












Click it and Unblock the Notifications