Acid Attack: ಆಸ್ತಿ ವಿವಾದ: ಮಗನ ಮೇಲೆ 'ಆಸಿಡ್' ಎರಚಿದ ತಂದೆ
ಬೆಂಗಳೂರು, ಮಾರ್ಚ್ 29: ಹಣ, ಆಸ್ತಿ ವಿಚಾರ ಬಂದರೆ ಎಂಥವರು ಶತ್ರುಗಳಾಗಿ ಬಿಡುತ್ತಾರೆ ಎಂಬುದಕ್ಕೆ ಬೆಂಗಳೂರಿನ ಟಿ.ದಾಸರಹಳ್ಳಿಯ ಘಟನೆ ಮತ್ತೊಂದು ನಿದರ್ಶನವಾಗಿದೆ. ಇಲ್ಲಿ ತಂದೆಯಾದ ನಿವೃತ್ತ ಪಿಎಸ್‌ಐ ತನ್ನ ಚಿಕ್ಕಮಗನ ಮೇಲೆ ಆಸಿಡ್ ದಾಳಿ ಮಾಡಿದ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಆಸ್ತಿಯಲ್ಲಿ ಪಾಲು ಕೇಳಿದ ಎಂಬ ಕಾರಣಕ್ಕೆ ತಂದೆ ಮತ್ತು ನಿವೃತ್ತ ಪಿಎಸ್‌ಐ ಆಗಿರುವ ರಾಮಕೃಷ್ಣಯ್ಯ ಎಂಬುವವರು ತಮ್ಮ ಚಿಕ್ಕಮಗನ ಮೇಲೆ ಆಸಿಡ್ ಎರಚಿದ್ದಾರೆ. ಪರಿಣಾಮ ಸಂತ್ರಸ್ತ ಚಿಕ್ಕಮಗ ಕಿರಣ್ ಅವರ ಎಡಗಣ್ಣು ಸಂಪೂರ್ಣ ಹಾನಿಯಾಗಿದೆ ಎಂದು ವರದಿ ಆಗಿದೆ. ಪ್ರಕರಣ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ತಂದೆ, ಸಹೋದರರ ವಿರುದ್ಧ ದೂರು ದಾಖಲು
ಬೆಂಗಳೂರಿನ ಟಿ. ದಾಸರಹಳ್ಳಿಯಲ್ಲಿ ಅಪ್ಪ-ಮಕ್ಕಳ ಆಸ್ತಿ ಜಗಳ ಮಾರ್ಚ್ 25 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಕಣ್ಣು ಕಳೆದುಕೊಂಡ ಸಂತ್ರಸ್ತ ಕಿರಣ್ ಅವರಿಗೆ ನಗರದ ನಾರಾಯಣ ನೇತ್ರಾಲಯದಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.
ನಿವೃತ್ತ ಪಿಎಸ್‌ಐ ರಾಮಕೃಷ್ಣಯ್ಯ ಅವರಿಗೆ ಮೂವರು ಮಕ್ಕಳು. ಅದರಲ್ಲಿ ಹಿರಿಯ ಮಗ ಉಪೇಂದ್ರ, ಮಗಳು ಲೀಲಾವತಿ. ಕಿರಣ ಅವರ ಮೂರನೇ ಪುತ್ರ. ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ತಂದೆ ಸೇರಿದಂತೆ ಉಪೇಂದ್ರ ಮತ್ತು ಲೀಲಾವತಿ ಆರೋಪಿಯಾಗಿದ್ದಾರೆ.
ಘಟನೆ ಹಿನ್ನೆಲೆ ಏನು?
ಮಾಗಡಿ ಸೇರಿದಂತೆ ಬೆಂಗಳೂರಿನಲ್ಲಿ ಆಸ್ತಿ ಮಾಡಿಕೊಂಡಿರುವ ತಂದೆ ರಾಮಕೃಷ್ಣಯ್ಯರನ್ನು ಚಿಕ್ಕಮಗ ಕಿರಣ್ ಆಸ್ತಿಯಲ್ಲಿ ಪಾಲು ಕೇಳಿದ್ದಾರೆ. ಇದೇ ವಿಚಾರವಾಗಿ ಕುಟುಂಬದಲ್ಲಿ ಜಗಳ ಆಗಿದೆ. ಸಹೋದರ ಮತ್ತು ತಂದೆ ಮಧ್ಯೆ ವಾಗ್ವಾದ ನಡೆದಿದೆ ಎನ್ನಲಾಗಿದೆ.

ಈ ವೇಳೆ ತಂದೆ ರಾಮಕೃಷ್ಣಯ್ಯ ಅವರು ರಸಾಯನಿಕ ಮಿಶ್ರಣದ (ಆಸಿಡ್) ದ್ರಾವಣವನ್ನು ಮಗನ ಮೇಲೆ ಎರಚಿದ್ದಾರೆ. ಇದರಿಂದ ಕಿರಣ್ ಕಣ್ಣಿಗೆ ಹಾನಿಯಾಗಿದೆ. ಮಗ ಕಿರಣ್ ಬೇರೆ ರಾಜ್ಯದ ಯುವತಿಯನ್ನು ವಿವಾಹವಾಗಿದ್ದಕ್ಕೆ ತಂದೆ ಕೋಪಗೊಂಡಿದ್ದರು. ಮಗನ ಮದುವೆ ಅವರಲ್ಲಿ ಅಸಮಾಧಾನ ತಂದಿತ್ತು. ಹೀಗಿದ್ದಾಗ ಆತ ಆಸ್ತಿಯಲ್ಲಿ ಪಾಲು ಕೇಳಿದ್ದು ಅವರಲ್ಲಿ ಆಕ್ರೋಶ ಹೆಚ್ಚಾಗುವಂತೆ ಮಾಡಿತ್ತು.
ಚಿಕ್ಕಮಗನಿಗೆ ಆಸ್ತಿಯಲ್ಲಿ ಪಾಲು ಕೊಡಲು ತಂದೆ ಹಾಗೂ ಇಬ್ಬರು ಹಿರಿಯ ಮಕ್ಕಳಿಗೆ ಇಷ್ಟವಿರಲಿಲ್ಲ ಎಂದು ತಿಳಿದು ಬಂದಿದೆ. ಈ ಕಾರಣದಿಂದಲೇ ಆಸಿಡ್ ದಾಳಿ ನಡೆದಿದೆ ಎನ್ನಲಾಗಿದೆ.
ತಂದೆ ರಾಮಕೃಷ್ಣಯ್ಯ ಅವರು ಮಾಗಡಿ ತಾಲೂಕಿನಲ್ಲಿ ನಾಲ್ಕು ಎಕರೆ ಜಮೀನು ಹೊಂದಿದ್ದಾರೆ. ಅಲ್ಲದೇ ನಗರದಲ್ಲಿ ಸ್ವಂತಹ ಮನೆ ಹಾಗೂ ಸೈಟುಗಳನ್ನು ಹೊಂದಿದ್ದಾರೆ. ಪಿಎಸ್‌ಐ ಆಗಿದ್ದ ಅವರು ಆರ್ಥಿಕವಾಗಿ ಚೆನ್ನಾಗಿದ್ದರು. ಈ ಆಸ್ತಿಯಲ್ಲಿ ಪಾಲು ಕೇಳಿದ ಚಿಕ್ಕಮಗ ಕಿರಣ್ ತನಗೆ ಇಷ್ಟವಿಲ್ಲದ ಮದುವೆ ಆಗಿದ್ದಾನೆ ಎಂದು ಬೇಸರವಾಗಿದ್ದ ತಂದೆ ಈ ರೀತಿ ಮಗನ ಮೇಲೆ ಮೃಗೀಯ ವರ್ತನೆ ತೋರಿದ್ದಾರೆ. ಸದ್ಯ ಪ್ರಕರಣದ ತನಿಖೆ ನಡೆಯುತ್ತಿದೆ.












Click it and Unblock the Notifications